ಸುದ್ದಿವಿಜಯ, ಜಗಳೂರು: ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಕೇಂದ್ರ ಸರಕಾರದ 10 ಅಧಿಕಾರಿಗಳ ತಂಡದಲ್ಲಿರುವ ಒಂದು ತಂಡ ದಾವಣಗೆರೆ ಜಿಲ್ಲೆಯಲ್ಲಿಯೇ ಜಗಳೂರು ತಾಲೂಕನ್ನು ಆಯ್ಕೆ ಮಾಡಿಕೊಂಡಿದ್ದು ಬರ ಅಧ್ಯಯನ ನಡೆಸಲಿದೆ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾಹಿತಿ ನೀಡಿದ್ದಾರೆ.
ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೇಂದ್ರ ಜಲ ಆಯೋಗದ ನಿರ್ದೇಶಕ ವಿ.ಅಶೋಕ್ ಕುಮಾರ್ ನೇತೃತ್ವದ ಈ ತಂಡದಲ್ಲಿ ಎಂಎನ್‍ಸಿಎಫ್‍ಸಿ ಉಪ ನಿರ್ದೇಶಕ ಕರಣ್ ಚೌಧರಿ, ಆಹಾರ ಮತ್ತು ನಾಗರಿಕೆ ಸರಬರಾಜು ಇಲಾಖೆ ಉಪ ಕಾರ್ಯದರ್ಶಿ ಸಂಗೀತ್ ಕುಮಾರ್ ಹಾಗೂ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ಸಲಹೆಗಾರ ಡಾ.ಶ್ರೀ ನಿವಾಸ್‍ರೆಡ್ಡಿ ಅವರ ತಂಡ ಭೇಟಿ ನೀಡಲಿದೆ. ಜಗಳೂರು ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಿಂದ ಬಾಡಿರುವ ಮೆಕ್ಕೆಜೋಳ, ರಾಗಿ ಬೆಳೆ
ಮೊದಲಿಗೆ ರಾಷ್ಟ್ರೀಯ ಹೆದ್ದಾರಿ ದೊಣೆಹಳ್ಳಿ ಮೂಲಕ ಜಗಳೂರು ಪಟ್ಟಣಕ್ಕೆ ಆಗಮಿಸಲಿರುವ ಅಧಿಕಾರಿಗಳು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಧ್ಯಾಹ್ನ ಭೋಜನ ಮಾಡಲಿದ್ದಾರೆ. ನಂತರ ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್ ಮತ್ತು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಉಪ ಕೃಷಿ ನಿರ್ದೇಶಕ ಆರ್.ತಿಪ್ಪೇಸ್ವಾಮಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್, ತಹಶೀಲ್ದಾರ್ ಅರುಣ್ ಕಾರಗಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ಮತ್ತು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಟಿ.ತೋಟಯ್ಯ ಜೊತೆ ತಾಲೂಕಿನ ಪ್ರಧಾನ ಬೆಳೆ ಮತ್ತು ಕಳೆದ ವರ್ಷದ ಬೆಳೆಯ ವಿವರ ಹಾಗೂ ಪ್ರಸ್ತುತ ವರ್ಷದ ಬೆಳೆಗಳ ನಷ್ಟದ ಬಗ್ಗೆ ಚರ್ಚಿಸಿ ಮಾಹಿತಿ ಪಡೆಯಲಿದ್ದಾರೆ.ಜಗಳೂರು ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಿಂದ ಬಾಡಿರುವ ಮೆಕ್ಕೆಜೋಳ, ರಾಗಿ ಬೆಳೆ
ಕೇಂದ್ರ ಅಧ್ಯಯನ ತಂಡಕ್ಕೆ ಜಿಲ್ಲೆಯದ್ಯಂತ ತೀವ್ರ ಬರ ಮತ್ತು ಮಳೆಯ ಕೊರತೆಯಿಂದ ಆಗಿರುವ ನಷ್ಟದ ಕುರಿತು ಮನವರಿಕೆ ಮಾಡಿಕೊಡಲು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪಿಪಿಟಿಯಲ್ಲಿ ನಷ್ಟದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ನಂತರ ಅಧಿಕಾರಿಗಳ ಜೊತೆ ರೈತರ ಹೊಲಗಳಲ್ಲಿ ನಷ್ಟವಾಗಿರುವ ಬೆಳಗಳ ಬಗ್ಗೆ ಜಮೀನುಗಳಿಗೆ ಭೇಟಿ ನೀಡಿ ಖುದ್ದು ವೀಕ್ಷಿಸಲಿದ್ದಾರೆ. ಅಧ್ಯಯನದ ನಂತರ ಅಧಿಕಾರಿಗಳ ತಂಡ ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿಗೆ ತೆರಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಾಲೂಕು ಪಟ್ಟದ ಅಧಿಕಾರಿಗಳಿಂದ ಪರಿಶೀಲನೆ:ತೀವ್ರ ಬರದಿಂದ ತತ್ತರಿಸಿರುವ ಜಗಳೂರು ತಾಲೂಕಿನ ಮುಸ್ಟೂರು, ತೊರೆಸಿದ್ದಿಹಳ್ಳಿ, ಕಾನನಕಟ್ಟೆ, ದೊಣೆಹಳ್ಳಿ ಭಾಗದ ರೈತರ ಜಮೀನುಗಳಲ್ಲಿ ತಹಶೀಲ್ದಾರ್ ಅರಣ್‍ಕಾರಗಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ಮತ್ತು RI ಧನಯಂಜಯ ನೇತೃತ್ವದ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ವಾಸ್ತವದ ಬಗ್ಗೆ ಜಿಲ್ಲಾಧಿಕಾರಿ ಮತ್ತು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಅವರಿಗೆ ಮಾಹಿತಿ ನೀಡಿದ್ದಾರೆ.
ಕೇಂದ್ರದ ಅಧಿಕಾರಿಗಳಿಗೆ ಬರದ ಬಗ್ಗೆ ಮನವರಿಕೆ ಮಾಡಿಕೊಡಲು ಕೃಷಿ ಇಲಾಖೆಯ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ತಾಲೂಕು ಪಂಚಾಯಿತಿ ಇಓ ಮತ್ತು ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.