ಜಗಳೂರು: ಕೇಂದ್ರದ ತಂಡಕ್ಕೆ ಬರದ ವಾಸ್ತವತೆ ಮನವರಿಕೆ ಮಾಡಿಕೊಟ್ಟ ಡಿಸಿ, ಶಾಸಕ ಬಿ.ದೇವೇಂದ್ರಪ್ಪ

Suddivijaya
Suddivijaya October 7, 2023
Updated 2023/10/07 at 3:14 PM

ಸುದ್ದಿವಿಜಯ, ಜಗಳೂರು: ರಾಜ್ಯದಲ್ಲಿ ಮುಂಗಾರು ಹಂಗಾಮಿನ ಹಸಿರು ಬರದ ತೀವ್ರತೆಯನ್ನು ಕೇಂದ್ರ ಸರಕಾರಕ್ಕೆ ಮನದಟ್ಟು ಮಾಡಿಕೊಡುವ ಬಗ್ಗೆ ರಾಜ್ಯಕ್ಕೆ ಆಗಮಿಸಿದ ಕೇಂದ್ರದ ತಂಡದ ಅಧಿಕಾರಿಗಳಿಗೆ ಶಾಸಕ ಬಿ.ದೇವೇಂದ್ರಪ್ಪ ಮತ್ತು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸಂಪೂರ್ಣ ಮನವರಿಕೆ ಮಾಡಿಕೊಟ್ಟರು.

ತಾಲೂಕಿನ ಮೂಡಲ ಮಾಚಿಕೆರೆ ಗ್ರಾಮದ ರೈತ ಬೋರಪ್ಪನ ಹೊಲಕ್ಕೆ ಭೇಟಿ ಕೊಡುತ್ತಿದ್ದಂತೆ ಮಳೆಯಿಲ್ಲದೇ ಮೆಕ್ಕೆಜೋಳ ಮತ್ತು ಶೇಂಗಾ ಬೆಳೆಗಳನ್ನು ಕೇಂದ್ರದ ಅಧಿಕಾರಿಗಳಿಗೆ ತೋರಿಸಿದ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಮತ್ತು ಶಾಸಕ ಬಿ.ದೇವೇಂದ್ರಪ್ಪ, ಇಷ್ಟೊಂದು ದೊಡ್ಡ ಮಟ್ಟದ ಬೆಳೆ ನಷ್ಟ ಎಂದೂ ಆಗಿರಲಿಲ್ಲ ಎಂದು ಹೇಳಿದರು.

ಅರೆ ಮಲೆನಾಡು ಆಗಿರುವ ನ್ಯಾಮತಿ ತಾಲೂಕಿನಲ್ಲೇ ಎಲ್ಲ ಬೆಳೆಗಳು ಒಣಗಿ ಹೋಗಿವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯಾದಂತ ಎಲ್ಲ ಬೆಳೆಗಳು ಇದೇ ರೀತಿ ಒಣಗಿವೆ. ಜಗಳೂರು ಸಂಪೂರ್ಣ ಬಯಲು ಸೀಮೆಯ ಪ್ರದೇಶವಾಗಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಇದೇ ಪರಿಸ್ಥಿತಿ ಇದೆ.ಜಗಳೂರು ತಾಲೂಕಿನಲ್ಲಿ ಮಳೆಯೇ ಬಿದ್ದಿಲ್ಲ. ಜಗಳೂರು ಎಂದರೆ ನೀರೇ ಇಲ್ಲದ ಸಂಪೂರ್ಣ ಬರಪೀಡಿತ ತಾಲೂಕು. ಅತ್ಯಂತ ಒಣ ಹವೆ ಪ್ರದೇಶ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದು ಜಿಲ್ಲಾಧಿಕಾರಿಗಳ ಕಾಳಜಿಯ ಧ್ಯೋತಕವಾಗಿತ್ತು.

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಇನ್ನೋಂದು ವಾರ ಮಳೆ ಹೋದರೆ ಶೇಂಗಾ ಬೆಳೆ ಒಣಗಿ ಮೇವಿಗೂ ಬರ ಬರಲಿದೆ. ಬಿತ್ತಿದ ಸಮಯದಿಂದ ಇಲ್ಲಿಯವರೆಗೂ ಮಳೆಯೇ ಬಂದಿಲ್ಲ. ಕಾಯಿ ಕಟ್ಟಿಲ್ಲ. ಬೆಳೆ ಕೈಗೂ ಸಿಗದ ಪರಿಸ್ಥಿತಿ ನಿರ್ಮಾಣವಾಗಲಿದೆ.ನನ್ನ ಅನುಭವದ ಪ್ರಕಾರ ಸ್ವಾತಂತ್ರ್ಯ ಬಂದು 76 ವರ್ಷಗಳಲ್ಲಿ ಇಷ್ಟೊಂದು ತೀವ್ರ ಬರ ಎಂದೂ ನಾನು ಕಂಡಿಲ್ಲ. 76 ವರ್ಷಗಳಲ್ಲಿ ಆರು ವರ್ಷ ಒಳ್ಳೆಯ ಬೆಳೆ ಬಂದಿರಬಹುದು. ಉಳಿದ 70 ವರ್ಷಗಳ ಕಾಲ ನಮ್ಮ ರೈತರು ಇದೇ ಪರಿಸ್ಥಿತಿ ಅನುಭವಿಸುತ್ತಿದ್ದಾರೆ.

ನಂಜುಂಡಪ್ಪ ವರದಿ ಅನುಸಾರ 224 ತಾಲೂಕುಗಳಲ್ಲಿ ನಮ್ಮದು ಅತ್ಯಂತ ಹಿಂದುಳಿದ ಮತ್ತು ತೀವ್ರ ಬರ ಪೀಡಿತ ಪ್ರದೇಶವಾಗಿದೆ. ಈ ಬಾರಿ ಎಡೆ ಕುಂಟೆ ಹೊಡೆದ ಮಣ್ಣು ಸಹ ಕರಗಿಲ್ಲ. ಮಳೆ ಬಿದ್ದಿದ್ದರೆ ಅದು ಸಮತಟ್ಟಾಗುತ್ತಿತ್ತು. ಈ ಬಾರಿ ಎಡೆ ಹೊಡೆದ ಮಣ್ಣು ಗಿಡಗಳ ಬುಡದಲ್ಲಿ ಹಾಗೇ ಇದೆ. ನೆಲ ಬಿರುಕುಬಿಟ್ಟಿದೆ. ಯಾವದೇ ಬೆಳೆಗಳು ರೈತರ ಕೈಸೇರುವುದಿಲ್ಲ ಎಂದು ಕೇಂದ್ರದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!