ಸುದ್ದಿವಿಜಯ, ಜಗಳೂರು: ತಾಲೂಕಿನ 176 ಹಳ್ಳಿಗಳಲ್ಲಿ ತೀವ್ರ ಬರ ತಾಂಡವಾಡುತ್ತದ್ದು ಕಳೆದ ಒಂದು ತಿಂಗಳಿನಿಂದ ಮಳೆ ಬಾರದ ಹಿನ್ನೆಲೆ ಬಿತ್ತಿದ ಮೆಕ್ಕೆಜೋಳದ ಫಸಲನ್ನು ರೈತರು ಕಿತ್ತು ದನಗಳ ಮೇವಿಗೆ ಬಳಸುತ್ತಿದ್ದಾರೆ.
ಜಗಳೂರು ತಾಲೂಕಿನ ತೋರಣಗಟ್ಟೆ, ಕಟ್ಟಿಗೆಹಳ್ಳಿ, ಸಿದ್ದಿಹಳ್ಳಿ, ತೊರೆಸಾಲು, ಮುಸ್ಟೂರು, ಸೊಕ್ಕೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮೆಕ್ಕೆಜೋಳದ ಫಸಲನ್ನು ರೈತರು ಕಿತ್ತು ದನಗಳಿಗೆ ಹಾಕುತ್ತಿದ್ದಾರೆ. ಗೊಬ್ಬರ, ಬಿತ್ತನೆ ಬೀಜ ಮತ್ತು ಬಿತ್ತನೆಯಂತ್ರದ ಬಾಡಿಗೆ ಸೇರಿ ಅಂದಾಜು 15 ಸಾವಿರ ಎಕರೆಗೆ ಖರ್ಚು ಮಾಡಿದ್ದ ರೈತ ಸಂಪೂರ್ಣ ನಷ್ಟದಲ್ಲಿದ್ದಾನೆ.
ಜೊತೆಗೆ ಮೇಲುಗೊಬ್ಬರ, ಕಳೆ ನಾಶಕ, ಲದ್ದಿಹುಳು ನಿಯಂತ್ರಣಕ್ಕೆ ಔಷಧಿ ಸಿಂಪಡಣೆಗೆ ಕನಿಷ್ಠ 8 ಸಾವಿರ ಖರ್ಚು ತಗುಲುತ್ತದೆ. ಇಷ್ಟೇಲ್ಲಾ ಕೆಲಸ ಮಾಡಿದ ರೈತನಿಗೆ ಈ ಬಾರಿ ಮೆಕ್ಕೆಜೋಳ ಕೈ ಹಿಡಿಯಲಿಲ್ಲದ ಕಾರಣ ರೈತರು ಸಂಪೂರ್ಣ ನೆಲ ಸಮ ಮಾಡುತ್ತಿದ್ದಾರೆ.
ಸೊಪ್ಪೆ ಮೇವಾಗಿ ಬಳಸಬೇಡಿ:
ವಾತಾವರಣದಲ್ಲಿ ಒಣಹವೆ ಇರುವ ಕಾರಣ ಲದ್ದಿ ಹುಳುಗಳು ಸಂಪೂರ್ಣವಾಗಿ ಸುಳಿಯನ್ನು ಆಕ್ರಮಿಸಿಕೊಂಡು ಸಣ್ಣ ಸಣ್ಣ ತನೆಗಳಿಗಳ ಒಳಗೂ ರಂಧ್ರಕೊರೆದು ಸಂತಾನೋತ್ಪತ್ತಿ ಮಾಡಿಕೊಂಡಿವೆ. ರೈತರು ಮೆಕ್ಕೆಜೋಳದ ಸೊಪ್ಪೆ ಕತ್ತರಿಸಿ ಅದನ್ನು ದನಳಿಗೆ ಬಳಸಿದರೆ ಅದರಲ್ಲಿರುವ ಹುಳುಗಳು ದನಗಳ ಹೊಟ್ಟೆ ಸೇರಿ ಸಾವನ್ನಪ್ಪುವ ಸಾಧ್ಯತೆ ದಟ್ಟವಾಗಿರುವ ಕಾರಣ ಒಣಗಿದ ನಂತರ ಹಾಕಿ ಎಂದು ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.ಕಡಲೆ ಬಿತ್ತನೆಗೆ ಸಜ್ಜು: ಮುಂಗಾರು ಕೈಕೊಟ್ಟ ಹಿನ್ನೆಲೆ ಹಿಂಗಾರು ಮಳೆ ಭರವಸೆ ಮೂಡಿಸುತ್ತದೆ ಎನ್ನುವ ಆಶಾಭಾವನೆಯೊಂದಿಗೆ ಮೆಕ್ಕೆಜೋಳ ಕಿತ್ತು ಕಡಲೆ ಬಿತ್ತನೆಗೆ ರೈತರು ಭೂಮಿ ಹದಗೊಳಿಸಕೊಳ್ಳುತ್ತಿದ್ದಾರೆ.
ಕೃಷಿ ಇಲಾಖೆ ಕಡಲೆ ಬಿತ್ತನೆ ಬೀಜ ಮತ್ತು ವೈಜ್ಞಾನಿಕವಾಗಿ ಕಡಲೆ ಬಿತ್ತನೆ ಪ್ರಾತ್ಯಕ್ಷತೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರೆ ಕಡಲೆಗಾದರೂ ಕೀಟ ಬಾಧೆ ತಗುಲುವುದು ಕಡಿಮೆಗಾಗಲಿದೆ ಎಂದು ಪ್ರಗತಿಪರ ರೈತರಾದ ಎಚ್.ಜಿ.ನಾಗರಾಜ್, ಎನ್.ಎಸ್.ಸೋಮನಗೌಡ ಒತ್ತಾಯಿಸಿದ್ದಾರೆ.