ಸುದ್ದಿವಿಜಯ, ಜಗಳೂರು: ತಾಲೂಕಿನ ಕಸಬಾ, ಬಿಳಿಚೋಡು, ಸೊಕ್ಕೆ ಹೋಬಳಿಯ ಹೊಸಕೆರೆ ಭಾಗದಲ್ಲಿ ಶೇ.70 ರಷ್ಟು ಮಳೆ ಕೊರತೆಯಾಗಿದ್ದು, ಬಿತ್ತನೆಯಾಗಿರುವ ಬೆಳೆಗಳು ಬಾಡುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಬಿ.ದೇವೇಂದ್ರಪ್ಪ ಅಧ್ಯಕ್ಷತೆಯಲ್ಲಿ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ತಂಡ ತಾಲೂಕಿನ ವಿವಿಧ ಗ್ರಾಮಗಳ ರೈತರ ಜಮೀನಿಗೆ ಭೇಟಿ ನೀಡಿ ಭಾನುವಾರ ಪರಿಶೀಲನೆ ನಡೆಸಿದರು.
ತಾಲೂಕಿನ ಜಗಳೂರು ಗೊಲ್ಲರಹಟ್ಟಿ, ಕಾಮಗೇತನಹಳ್ಳಿ, ಮುಸ್ಟೂರು, ಭರಮಸಮುದ್ರ ಗ್ರಾಮಗಳಿಗೆ ಶಾಸಕರ ನೇತೃತ್ವದಲ್ಲಿ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ಸರ್ವೆ ನಡೆಸಿದರು.
ಕ್ಷೇತ್ರದಲ್ಲಿ ಬಿತ್ತನೆಯಾಗಿರುವ ಮೆಕ್ಕೆಜೋಳ, ರಾಗಿ, ಶೇಂಗಾ, ಹತ್ತಿ, ತೊಗರಿ ಬೆಳೆಗಳು ಶೇ.70 ರಷ್ಟು ಮಳೆಯಿಲ್ಲದೇ ಒಣಗುತ್ತಿರುವುದು ಸಮೀಕ್ಷೆಯಲ್ಲಿ ಕಂಡು ಬಂತು.
ಈ ವೇಳೆ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ರಾಜ್ಯದ ಬರಪೀಡಿತ 113 ತಾಲೂಕುಗಳ ಪಟ್ಟಿಯಲ್ಲಿ ಜಗಳೂರನ್ನು ಮಧ್ಯಮ ಬರ ಪೀಡಿತ ಎಂದು ಸೇರಿಸಲಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಎಲ್ಲ ಅಧಿಕಾರಿಗಳ ಜೊತೆ ಜಂಟಿಯಾಗಿ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ.
ಆಗಸ್ಟ್ ತಿಂಗಳಲ್ಲಿ 56 ಮಿಮೀ ಮಳೆಯಾಗಬೇಕಿತ್ತು ಆದರೆ ವಾಡಿಕೆಗಿಂತ ಶೇ.16ರಷ್ಟು ಮಳೆ ಕೊರತೆಯಾಗಿದೆ. ಮಳೆ ಕೊರತೆಯಿಂದ ತುಂಬಾ ದೊಡ್ಡ ಪ್ರಮಾಣದಲ್ಲಿ ರೈತರಿಗೆ ನಷ್ಟವಾಗಿದೆ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ವರದಿ ಸಲ್ಲಿಸಿ ಸಂಪೂರ್ಣ ಬರಪೀಡಿತ ಪಟ್ಟಿಗೆ ಜಗಳೂರು ತಾಲೂಕನ್ನು ಸೇರಿಸಿ ರೈತರಿಗೆ ಹೆಚ್ಚಿನ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಶೇ.30 ನದಿ ನೀರಿನ ಮೂಲವಿದೆ. ಅಂತಹ ತಾಲೂಕನ್ನು ಸಂಪೂರ್ಣ ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ. ಆದರೆ ಯಾವುದೆ ನದಿ ಮೂಲ, ನೀರಿನ ಮೂಲವೆ ಇಲ್ಲದೇ ಕೇವಲ ಮಳೆಯನ್ನೆ ಆಶ್ರಯಿಸಿ ಬೆಳೆಗಳನ್ನ ಬೆಳೆಯುವ ಜಗಳೂರು ತಾಲೂಕನ್ನು ಮಧ್ಯಮ ಬರ ಪೀಡಿತ ಎಂದು ಘೋಷಣೆ ಮಾಡಿರುವುದು ನನಗೆ ಅಘಾತವಾಗಿದೆ. ಇಲ್ಲಿನ ಪರಿಸ್ಥಿತಿ ನೋಡಲು ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಎಂದರು.ತಾಲೂಕು ಎಲ್ಲಾ ಹೋಬಳಿಗಳ ಬೆಳೆ ಸಮೀಕ್ಷೆ ಮಾಡಿ ವರದಿ ತಯಾರು ಮಾಡಿ ಎಂದು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳು ನೀಡುವ ವರದಿಯ ಅದಾರದ ಮೇಲೆ ತಾಲೂಕು ಸಂಪೂರ್ಣ ಬರಪೀಡಿತ ಪಟ್ಟಿಗೆ ಸೇರಿಸುವಂತೆ ಭಾನುವಾರ ಸಂಜೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಭೇಟಿಯಾಗಿ ಕೃಷಿ ಸಚಿವರಿಗೆ ಮತ್ತು ಸರಕಾರಕ್ಕೆ ಒತ್ತಾಯ ಹಾಕಿಸುತ್ತೇನೆ ಎಂದು ತಿಳಿಸಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಿಥುನ್ ಕಿಮಾವತ್ ಮಾತನಾಡಿ, ತಾಲೂಕಿನಲ್ಲಿ 51 ಸಾವಿರ ಹೆಕ್ಟೇರ್ ಬಿತ್ತನೆಯಾಗಿದ್ದು, ಮೆಕ್ಕೆಜೋಳ, ರಾಗಿ, ತೊಗರಿ, ಶೇಂಗಾ ಬೆಳೆಗಳು ಶೇ.80 ರಿಂದ 90 ರಷ್ಟು ಹಾಳಾಗಿದೆ.ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ ಮಾಡಬೇಕಿದ್ದು, ತಾಲೂಕಿನಾದ್ಯಂತ ಸೋಮವಾರದಿಂದ ಚಿಕ್ಕಅರಕೆರೆ, ಮುಚ್ಚನೂರು, ಚಿಕ್ಕಬ್ಬನಿಹಟ್ಟಿ, ಹಿರೇಮನ್ನಿಹಟ್ಟಿ, ಬಿದರಕೆರೆ, ದೊಣೆಹಳ್ಳಿ ಸೇರಿದಂತೆ 19 ಹಳ್ಳಿಗಳಲ್ಲಿ ಬೆಳೆ ಪರಿಶೀಲನೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಈ ವೇಳೆ ಕೃಷಿ ಇಲಾಖೆ ಎಓ ಜೀವಿತಾ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ತೋಟಯ್ಯ, ತೋಟಗಾರಿಕೆ ಇಲಾಖೆ ಎಎಚ್‍ಒಗಳಾದ ಪ್ರಸನ್ನ ವೆಂಕಟೇಶ್ವರ ನಾಯ್ಕ್, ಸುನಿಲ್, ಆರ್‍ಐ ಧನಂಜಯ, ಕೀರ್ತಿ, ಕಾಂಗ್ರೆಸ್ ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಗೌಸ್ ಅಹಮದ್ ಸೇರಿದಂತೆ ಅನೇಕರು ಇದ್ದರು.