ಸುದ್ದಿವಿಜಯ, ಜಗಳೂರು: ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ತಾಲೂಕು ದಲಿತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ತಾಲೂಕು ಕಚೇರಿಗೆ ಆಗಮಿಸಿದ ಒಕ್ಕೂಟದ ಪದಾಧಿಕಾರಿಗಳು ಮರು ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಪಟ್ಟು ಹಿಡಿದರು.
ದಲಿತ ವಿದ್ಯಾರ್ಥಿ ಒಕ್ಕೂಟದ ತಾಲೂಕು ಸಂಚಾಲಕ ಅಸಗೋಡು ಶಿವುಕುಮಾರ್ ಮಾತನಾಡಿ, ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಬೋರ್ಡ್ ನಡೆಸುವ ಮರು ಪರೀಕ್ಷೆಯಂತೆಯೇ ವಿಶ್ವವಿದ್ಯಾನಿಲಯವು ಕೂಡ ಪದವಿ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಎಸ್‍ಎಫ್‍ಐ ಜಿಲ್ಲಾ ಸಂಚಾಲಕ ಅನಂತರಾಜು ಮಾತನಾಡಿ, ಪ್ರಸ್ತುತ ಪದವಿ ವಿದ್ಯಾರ್ಥಿಗಳು ಹಲವು ಸಮಸ್ಯೆಗಳು ಎದುರಿಸುತ್ತಿದ್ದು, ಅಂತಿಮ ವರ್ಷದ ಕೆಲವೊಂದು ವಿಷಯಗಳಲ್ಲಿ ಅನುತ್ತೀರ್ಣರಾದಾಗ ಅವರ ಶೈಕ್ಷಣಿಕ ಭವಿಷ್ಯವನ್ನೇ ಮೊಟುಕುಗೊಳಿಸುವ ಪರೀಕ್ಷಾ ಪದ್ದತಿಯು ನಮ್ಮ ಕರ್ನಾಟಕದಲ್ಲಿ ಜಾರಿಯಲ್ಲಿದೆ.
ದಾವಣಗೆರೆಯ ವಿಶ್ವವಿದ್ಯಾಲಯದ ಕುಲಪತಿಗಳು ಈ ಆದೇಶವನ್ನು ವಾಪಸ್ ಪಡೆದು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಮಲೆಮಾಚಿಕೆರೆ ಬಿ.ಸತೀಶ್ ಮಾತನಾಡಿ, ಬೇರೆ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶವನ್ನು ನೀಡಲಾಗುತ್ತಿದೆ.
ಆದರೆ ದಾವಣಗೆರೆ ವಿಶ್ವವಿದ್ಯಾಲಯವು ಈ ನೀತಿಯನ್ನು ಕೈ ಬಿಟ್ಟು ವಿದ್ಯಾರ್ಥಿಗಳ ಭವಿಷ್ಯವನ್ನು ಮಂಕು ಮಾಡಲು ಹೊರಟಿದೆ. ಈ ಕೂಡಲೇ ಎಲ್ಲಾ ವಿಶ್ವವಿದ್ಯಾಲಯಗಳಂತೆ ದಾವಣಗೆರೆ ವಿವಿ ಕೂಡ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ತುರ್ತಾಗಿ ಅವಕಾಶ ನೀಡಿ ಅವರ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಹಾಗೂ ಈಗಾಗಲೇ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವ ಭರದಲ್ಲಿ ಹಲವಾರು ಗೊಂದಲಗಳನ್ನು ಸೃಷ್ಟಿ ಮಾಡಿದ್ದಾರೆ. ಈಗಲೂ ಪ್ರಥಮ ಮತ್ತು ದ್ವಿತೀಯ ಪದವಿ ವಿದ್ಯಾರ್ಥಿಗಳಿಗೆ ತಮ್ಮ ಪಠ್ಯಕ್ರಮ ಯಾವುದೆಂಬುದು ಸಹ ಸರಿಯಾಗಿ ತಿಳಿದಿರುವುದಿಲ್ಲ.
ಪರೀಕ್ಷಾ ಫಲಿತಾಂಶಗಳಲ್ಲಿ ಹಲವಾರು ತಾಂತ್ರಿಕ ದೋಷಗಳಿದ್ದು, ಇಂತಹ ಗೊಂದಲಮಯ ವಾತಾವರಣವನ್ನು ನಿರ್ಮಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಪಡಿಸಬೇಕು. ಕೂಡಲೇ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮರು ಪರೀಕ್ಷೆಗೆ ಯಾವುದೇ ಮೀನಾಮೇಷ ಮಾಡದೆ ಅವಕಾಶ ಕಲ್ಪಿಸಬೇಕು.
ಇಲ್ಲವಾದಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟ ರಾಜ್ಯಾದ್ಯಂತ ಉಗ್ರವಾದ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ದಾವಣಗೆರೆ ವಿ.ವಿ.ಯ ಕುಲಪತಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದಸಂಸ ನಗರ ಘಟಕ ಸಂಚಾಲಕ ಕರಿಬಸಪ್ಪ, ಪದಾಧಿಕಾರಿಗಳಾದ ತಿಮ್ಮಣ್ಣ, ಕ್ಯಾಸನಹಳ್ಳಿ ಹನುಮಂತಪ್ಪ, ಜಗಜೀವನ್ ರಾಮ್ ಆರ್.ಎಲ್, ಎಐಎಸ್‍ಎಫ್ ಮುಖಂಡ ಮಧು ದೇವಿಕೆರೆ, ಪದಾಧಿಕಾರಿಗಳಾದ ವಿವೇಕ್, ಮನೋಜ್, ಪ್ರಶಾಂತ್, ಹರ್ಷ, ಚೇತನ್, ಸಂಜಯ್, ನವೀನ್, ರಾಕೇಶ್ ಸೇರಿದಂತೆ ಮತ್ತಿತರಿದ್ದರು.