ಸುದ್ದಿವಿಜಯ, ಜಗಳೂರು: ತಾಲ್ಲೂಕಿನ 22 ಗ್ರಾಪಂಗಳಲ್ಲಿ 2ನೇ ಅವಧಿಗೆ ಮೀಸಲಾಗಿದ್ದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಸೋಮವಾರ ಬಿಸ್ತುವಳ್ಳಿ, ದೊಣೆಹಳ್ಳಿ, ಹನುಮಂತಾಪುರ, ಹೊಸಕೆರೆ, ಹಾಲೇಕಲ್ಲು, ದಿದ್ದಿಗೆ, ಸೊಕ್ಕೆ ಮತ್ತು ಬಿಳಿಚೋಡು ಗ್ರಾಪಂಗಳ ಕಚೇರಿಯಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷ ಗಾದಿ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು.
ಹೊಸಕೆರೆ ಗ್ರಾಪಂ ಚುನಾವಣೆ:
ಹೊಸಕೆರೆ ಗ್ರಾಪಂ ನಲ್ಲಿ ಚುನಾವಣೆ ಮೂಲಕ ಅಧ್ಯಕ್ಷ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. 18 ಸದಸ್ಯರ ಪೈಕಿ ಸಿದ್ದವೀರಪ್ಪ ಅವರಿಗೆ ಹತ್ತು ಮತಗಳು, ಬಸವರಾಜ್ ಎಂಬುವರಿಗೆ ಎಂಟು ಮತಗಳು ದಾಖಲಾದ ಕಾರಣ ಸಿದ್ದವೀರಪ್ಪ ಅವರು ಅಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ನಿಂಗಮ್ಮ ಮತ್ತು ರೇಖಾ ಅವರು ಸ್ಪರ್ಧಿಸಿದ್ದರು. ನಿಂಗಮ್ಮ ಅವರಿಗೆ ಹತ್ತು ಮತ್ತು ರೇಖಾ ಅವರಿಗೆ ಎಂಟು ಮತಗಳು ದಾಖಲಾದ ಕಾರಣ ನಿಂಗಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಹನುಮಂತಾಪುರ ಗ್ರಾಪಂ ಚುನಾವಣೆ:
ತಾಲೂಕಿನ ದೊಡ್ಡ ಗ್ರಾಪಂ ಹನುಮಂತಾಪುರದಲ್ಲಿ 26 ಜನ ಸದಸ್ಯರಿದ್ದು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯಿತು. ತಮಲೇಹಳ್ಳಿ ಗ್ರಾಮದ ಅಶ್ವಿನಿ ಅಂಜಿನಪ್ಪ ಮತ್ತು ಅದೇ ಗ್ರಾಮದ ಚೌಡಮ್ಮ ಸೋಮಣ್ಣ ಅಧ್ಯಕ್ಷ ಗಾದಿಗೆ ನಾಮಪತ್ರ ಸಲ್ಲಿಸಿದ್ದರು.
ಆದರೆ 13 ಮತಗಳು ಅಶ್ವಿನಿ ಅಂಜಿನಪ್ಪ ಪರ ಸದಸ್ಯರು ಹಾಕಿದ ಕಾರಣ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ರವಿ ರಾಜಶೇಖರ್ ಗೌಡ ಮತ್ತು ತಿಪ್ಪೇಸ್ವಾಮಿ ನಾಮಪತ್ರ ಸಲ್ಲಿಸಿದ್ದರು.
ಆದರೆ ಇಬ್ಬರಿಗೂ ತಲಾ ಹತ್ತು ಮತಗಳು ಬಿದ್ದಿ ಕಾರಣ ಚೀಟಿ ಎತ್ತುವ ಅದೃಷ್ಟ ಪರೀಕ್ಷೆಯಲ್ಲಿ ಭರಮಸಮುದ್ರ ಗ್ರಾಮದ ಚೌಡಮ್ಮ ತಿಪ್ಪೇಸ್ವಾಮಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಬೀರೇಂದ್ರಕುಮಾರ್ ಮಾಹಿತಿ ನೀಡಿದರು.
ದೊಣೆಹಳ್ಳಿ ಗ್ರಾಪಂ:
ಅನುಸೂಚಿತ ಪರಿಶಿಷ್ಟ ಜಾತಿಗೆ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲು ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ತಿಪ್ಪೇಸ್ವಾಮಿ ಒಬ್ಬರೇ ನಾಮ ಪತ್ರ ಸಲ್ಲಿಸಿದರು.
ಅದರಂತೆಯೇ ಉಪಾಧ್ಯಕ್ಷ ಸ್ಥಾನಕ್ಕೆ ಹನುಮಕ್ಕ ಒಬ್ಬರೇ ನಾಮ ಪತ್ರ ಸಲ್ಲಿಸಿದ್ದರು. ಆದ್ದರಿಂದ ತಿಪ್ಪೇಸ್ವಾಮಿ ಅಧ್ಯಕ್ಷರಾಗಿ ಹಾಗೂ ಉಪಧ್ಯಕ್ಷರಾಗಿ ಹನುಮಕ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಹಾಗೂ ತಾಲೂಕು ಪಂಚಾಯಿತಿ ಇಓ ವೈ.ಎಚ್.ಚಂದ್ರಶೇಖರ್ ಅಧಿಕೃತವಾಗಿ ಘೋಷಣೆ ಮಾಡಿದರು.
ಬಿಸ್ತುವಳ್ಳಿ ಗ್ರಾಪಂ:
ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಪಂನಲ್ಲಿ ಒಟ್ಟು 17 ಜನ ಸದಸ್ಯರಿದ್ದು ಅದರಲ್ಲಿ ಬಗ್ಗೆನಹಳ್ಳಿ ಗ್ರಾಪಂ ಸದಸ್ಯರಾಗಿದ್ದ ಟಿ.ಮಣಿ ಶಶಿಕುಮಾರ್ ನಾಯ್ಕ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಗೋಪಗೊಂಡನಹಳ್ಳಿಯ ರತ್ನಮ್ಮ ಆನಂದಪ್ಪ ನಾಮಪತ್ರ ಸಲ್ಲಿಸಿದ್ದರು.
ಜೊತೆಗೆ ಇನ್ನು ಇಬ್ಬರು ಸದಸ್ಯರು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು ಆದರೆ ನಾಮಪತ್ರ ವಾಪಾಸ್ ಪಡೆದ ಹಿನ್ನೆಲೆಯಲ್ಲಿ ಕಣದಲ್ಲಿದ್ದ ಟಿ.ಮಣಿ ಅಧ್ಯಕ್ಷರಾಗಿ, ರತ್ನಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿಯೂ ಆಗಿದ್ದ ತಹಶೀಲ್ದಾರ್ ಗ್ರೇಡ್-2 ಮಂಜಾನಂದ ಘೋಷಣೆ ಮಾಡಿದರು.
ಹಾಲೇಕಲ್ಲು ಗ್ರಾಪಂ:
ಹಾಲೇಕಲ್ಲು ಗ್ರಾಪಂ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಎಂ.ರೂಪಾ ಮಧನ್ ಕುಮಾರ್, ಉಪಾಧ್ಯಕ್ಷರಾಗಿ ಎಚ್.ದೀಪಾ ಪ್ರವೀಣ್‍ಕುಮಾರ್ ಆಯ್ಕೆಯಾದರು.
ಬಿಳಿಚೋಡು ಗ್ರಾಪಂ:
ಇನ್ನು ಬಿಳಿಚೋಡು ಗ್ರಾಪಂ ಅಧ್ಯಕ್ಷರಾಗಿ ಚಂದ್ರಮ್ಮ ಮಚ್ಚೇಂದ್ರಪ್ಪ, ಉಪಾಧ್ಯಕ್ಷರಾಗಿ ನೀಲಾನಾಯ್ಕ್ ಆಯ್ಕೆಯಾದರು.
ಸೊಕ್ಕೆ ಗ್ರಾಪಂ ಚುನಾವಣೆ:
ಸೊಕ್ಕೆ ಗ್ರಾಪಂ ಚುನಾವಣೆಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಎಲ್. ತಿರುಮಲ ಅಧ್ಯಕ್ಷರಾಗಿ, ಎಸ್.ಟಿ. ಮಹಿಳೆಗೆ ಮೀಸಲಾದ ಸ್ಥಾನಕ್ಕೆ ಉಪಾಧ್ಯಕ್ಷರಾಗಿ ಚೌಡಮ್ಮ ಚುನಾವಣೆ ಮೂಲಕ ಆಯ್ಕೆಯಾದರು.
ದಿದ್ದಿಗೆ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ
ದಿದ್ದಿಗೆ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಇಲ್ಲದೇ ಅವಿರೋಧವಾಗಿ ಆಯ್ಕೆಯಾಗಿದ್ದು, 19 ಜನ ಸದಸ್ಯರಲ್ಲಿ 18 ಜನರು ಹಾಜರಿದ್ದರು. ಹುಚ್ಚಂಗಿಪುರ ಗ್ರಾಮದ ಎಸ್ಸಿ ಮಹಿಳಾ ಸದಸ್ಯೆ ಗುತ್ತೆಮ್ಮ ಸಿದ್ದಪ್ಪ, ಉಪಾಧ್ಯಕ್ಷರಾಗಿ ಉರಲಕಟ್ಟೆ ಗ್ರಾಮದ ಸಾಮಾನ್ಯ ವರ್ಗದ ಸದಸ್ಯೆ ಪವಿತ್ರಾ ಆನಂದಪ್ಪ ಅವಿರೋಧವಾಗಿ ಆಯ್ಕೆಯಾದರು.