ಕಟ್ಟುನಿಟ್ಟಿನ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ, ಬಿಗಿ ಪೊಲೀಸ್ ಬಂದೋಬಸ್ತ್ ಹೇಗಿದೆ ಗೊತ್ತಾ?

Suddivijaya
Suddivijaya May 7, 2023
Updated 2023/05/07 at 12:34 PM

ಸುದ್ದಿವಿಜಯ, ಜಗಳೂರು: ಮೇ.10 ರಂದು ನಡೆಯಲಿರುವ ಜಗಳೂರು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಎಸ್.ರವಿ ತಿಳಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಭಾನುವಾರ ಚುನಾವಣಾ ಮತದಾನ ಮತ್ತು ಮತ ಎಣಿಕೆ ಕಾರ್ಯಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿ ಮಾಹಿತಿ ನೀಡಿದರು.
ಮೇ.10 ರಂದು ಬೆಳಿಗ್ಗೆ 7 ರಿಂದ 6 ಗಂಟೆಯವರೆಗೆ ಮತದಾನ ಮತದಾನ ನಡೆಯಲಿದೆ.

ಕ್ಷೇತ್ರದಲ್ಲಿ ಒಟ್ಟು 192,958 ಮತದಾರರಿದ್ದು, 97690 ಪುರುಷರು, 95257 ಮಹಿಳಾ ಮತದಾರರಿದ್ದಾರೆ. ಒಟ್ಟು 262 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಮೂಲ ಸೌಕರ್ಯ ಒದಗಿಸಲಾಗಿದೆ. ಅದರಲ್ಲಿ 2 ದುರ್ಬಲ ಮತ್ತು 48 ಕ್ರಿಟಿಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದರು.

128 ಮತಗಟ್ಟೆಗಳಲ್ಲಿ ವೆಬ್ ಕ್ಯಾಮರಾ ಅಳವಡಿಸಲಾಗಿದ್ದು ಮತದಾನ ಕೇಂದ್ರದ ಚಟುವಟಿಕೆಗಳನ್ನು ಲೈವ್ ಆಗಿ ಪರಿಶೀಲಿಸಲು ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರಿಕರು ಮತ್ತು ವಿಕಲ ಚೇತನ ಮತದಾರರಿಗೆ ನಿಗದಿಪಡಿಸಿದ ದಿನಾಂಕದಂದು ಅಂಚೆ ಮತಪತ್ರದ ಮೂಲಕ, ಮನೆ ಮನೆಗೆ ಭೇಟಿ ನೀಡಿ ಅಂಚೆ ಮತಪತ್ರದ ಮೂಲಕ ಮತ ಚಲಾವಣೆಗೆ ಅವಕಾಶ ನೀಡಲಾಗಿದೆ ಎಂದರು.

ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗಳಿಗೆ ಅಂಚೆ ಮತ ಪತ್ರದ ಮೂಲಕ ಮತ ಚಲಾಯಿಸಲು ಅಂಚೆ ಮೂಲಕ ಮತ ಪತ್ರಗಳನ್ನು ಕಳುಹಿಸಲಾಗಿದೆ. ಮತದಾನ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಮತದಾನ ಏಜೆಂಟರ್ ನೇಮಕ ಮಾಡಿಕೊಳ್ಳಲು ನಮೂನೆ10 ರಲ್ಲಿ ವಿವರಗಳನ್ನು ಭರ್ತಿ ಮಾಡಿ ಸಂಬಂಧಪಟ್ಟ ಮತಗಟ್ಟೆ ಅಧ್ಯಕ್ಷಧಿಕಾರಿಗೆ ಕಳುಹಿಸಲು ಅಭ್ಯರ್ಥಿಗಳಿಗೆ ಕೋರಿದ್ದೇವೆ.

ಮೇ10 ರಂದು ಮತಗಟ್ಟೆಗಳಲ್ಲಿ ಮತದಾನ ಪ್ರಾರಂಭವಾಗುವುದಕ್ಕೂ ಮುನ್ನ ಅಂದರೆ ಬೆಳಿಗ್ಗೆ 5.30ಕ್ಕೆ ಅಣುಕು ಮತದಾನ ನಡೆಯಲಿದೆ. ವಿದ್ಯುನ್ಮಾನ ಮತಯಂತ್ರಗಳ ಸಮರ್ಪಕ ಕೆಲಸ ನಿರ್ವಹಣೆ ಬಗ್ಗೆ ಏಜಂಟರಿಗೆ ಅವಕಾಶವಿದ್ದು, ಏಜೆಂಟರ್‍ಗಳು ಸಂಬಂಧಿಸಿದ ಮತಗಟ್ಟೆಗಳಲ್ಲಿ ಹಾಜರಿರಬೇಕು.

ಮೇ.8 ರಂದು ಸಂಜೆ 6 ಗಂಟೆಗೆ ರಾಜಕೀಯ ಕಾರ್ಯಕರ್ತರು ಚುನಾವಣಾ ಕ್ಷೇತ್ರದಿಂದ ತೆರವಾಗಬೇಕು. ಬಹಿರಂಗ ಪ್ರಚಾರಕ್ಕೆ ಅಂದು ಕೊನೆಯದಿನವಾಗಿರುತ್ತದೆ. ನಂತರ ಮನೆ ಮನೆ ಪ್ರಚಾರಕ್ಕೆ ಅವಕಾಶವಿರುತ್ತದೆ ಎಂದರು.

ಅಭ್ಯರ್ಥಿಗಳು ಮತದಾನ ಕೇಂದ್ರದ 100 ಮೀ ಒಳಗೆ ಚುನಾವಣಾ ಪ್ರಚಾರ ಮಾಡುವಂತಿಲ್ಲ. 200 ಮೀ ಹೊರಗೆ ಅಭ್ಯರ್ಥಿಗಳ ಬೂತ್‍ಗಳನ್ನು ಮಾಡಿಕೊಳ್ಳು ನಿಯಮಾನುಸಾರ ಅವಕಾಶವಿರುತ್ತದೆ. ಮತದಾರರಿಗೆ ಚೀಟಿಗಳನ್ನು ನೀಡುವಾಗ ಮತದಾರರ ಭಾಗದ ಸಂಖ್ಯೆ/ಕ್ರಮ ಸಂಖ್ಯೆ ಬಿಳಿ ಚೀಟಿಯಲ್ಲಿ ಬರೆದುಕೊಡಬಹುದು. ಅಂತಹ ಚೀಟಿಗಳಲ್ಲಿ ಯಾವುದೇ ಪಕ್ಷದ ಚಿಹ್ನೆ, ಅಭ್ಯರ್ಥಿಯ ಹೆಸರು ಇರುವಂತಿಲ್ಲ ಎಂದರು.

ಚುನಾವಣಾ ದಿನದಂದು ಅಭ್ಯರ್ಥಿ ಅಥವಾ ಕಾರ್ಯಕರ್ತರು ಕೇವಲ ಮೂರು ವಹನಗಳನ್ನು ಬಳಸಲು ಅವಕಾಶ ನೀಡಲಾಗಿದೆ ಅದಕ್ಕೂ ಅನುಮತಿ ಕಡ್ಡಾಯವಾಗಿರುತ್ತದೆ. ಕ್ಷೇತ್ರದ ಮತಗಟ್ಟೆ ಸಂಖ್ಯೆ 194 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಂತೆಪೇಟೆ ಶಾಲೆ, ಜಗಳೂರು ಇಲ್ಲಿ ಪಿಂಕ್ ಬೂತ್ ಹಾಗೂ ಮತಗಟ್ಟೆ ಸಂಖ್ಯೆ 180 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊರಕೆರೆಯಲ್ಲಿ ಪಿಡ್ಯೂಡಿ ಬೂತ್ ಮಾಡಲಾಗಿದೆ ಎಂದರು. ಈ ವೇಳೆ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ತಾಪಂ ಇಒ ಚಂದ್ರಶೇಖರ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಇದ್ದರು.

ಪೊಲೀಸ್ ಬಂದೋಬಸ್ತ್ ಹೇಗಿದೆ ಗೊತ್ತಾ?

ಚುನಾವಣಾ ಕರ್ತವ್ಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಒಬ್ಬರು ಡಿಎಸ್‍ಪಿ, 4 ಪಿಐ, 7 ಪಿಎಸ್‍ಐ, 48 ಎಎಸ್‍ಐ, 192 ಎಚ್‍ಸಿ/ಪಿಸಿ, 94 ಎಚ್‍ಜಿ ಒಟ್ಟು 346 ಜನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಜೊತೆಗೆ 18 ಸಿಆರ್‍ಪಿಎಫ್, 18 ಆರ್‍ಪಿಎಫ್,18 ಕೇರಳ ಪೊಲೀಸ್ ಒಟ್ಟು 54 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಸಿಪಿಐ ಎಂ.ಶ್ರೀನಿವಾಸ್‍ರಾವ್ ಮಾಹಿತಿ ನೀಡಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!