ಸುದ್ದಿವಿಜಯ, ಜಗಳೂರು: ಕಳೆದ 15 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಿದೆ. ಆದರೆ ಗೆದ್ದಲುಗಳು ಕಟ್ಟಿದ ಹುತ್ತದಲ್ಲಿ ಹಾವು ಬಂದು ಸೇರಿದಂತಾಯಿತು. ಅಂಕಿ ಸಂಖ್ಯೆಗಳಿಂದ ಸೋತಿರಬಹುದು ಆದರೆ ಜನರ ಮನಸ್ಸಿನಿಂದ ಸೋತಿಲ್ಲ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಎಚ್.ಪಿ.ರಾಜೇಶ್ ಹೇಳುವಾಗಿ ಭಾವುಕರಾಗಿ ಕಣ್ಣೀರು ಹಾಕಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಜಗಳೂರು ವಿಧಾನಸಭಾ ಕ್ಷೇತ್ರದ ಸ್ವಾಭಿಮಾನಿ ಪಕ್ಷದ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು ಮತ್ತು ಎಚ್.ಪಿ.ರಾಜೇಶ್ ಅಭಿಮಾನಿ ಬಳಗ ನೇತೃತ್ವದಲ್ಲಿ ನಡೆದ ಸಮಾಲೋಚನಾ ಸಭೆ ಹಾಗೂ ಮತದಾರರಿಗೆ ಕೃತಜ್ಞತೆ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ಕೊಡದೇ ಇದ್ದಾಗ ಶೇ.80 ರಷ್ಟು ಕಾಂಗ್ರೆಸ್ ಮುಖಂಡರು ನನ್ನ ಬೆನ್ನಿಗೆ ನಿಂತು ಶ್ರಮಿಸಿದರು. 2008 ರಿಂದ 2023ರವರೆಗೆ ಐದು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. 1 ಬಾರಿ ಗೆದ್ದು ನಾಲ್ಕು ಬಾರಿ ಸೋತಿದ್ದೇನೆ. ಸೋತರೂ ದೃತಿಗೆಡದೇ ಮುನ್ನುಗ್ಗುತ್ತೇನೆ. ಸೋತರೂ ನನ್ನ ಜೊತೆ ಬದ್ಧತೆಯಿಂದ ಇರುವ ಅಭಿಮಾನಕ್ಕೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಎಂದು ಹೇಳುವಾಗ ಕಣ್ಣಾಲಿಗಳು ತೇವಗೊಂಡವು.
ನಾನು ಕನಿಷ್ಠ ಹತ್ತು ಸಾವಿರ ಸಂಖ್ಯೆಯಲ್ಲಿ ಸೋತ್ತಿದ್ದರೆ ಬೇಸರವಾಗುತ್ತಿರಲಿಲ್ಲ. ಕೇವಲ ಕೆಲವೇ ವೋಟ್‍ಗಳಿಂದ ಸೋತಿದ್ದಕ್ಕೆ ಬೇಸರವಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಅನಿವಾರ್ಯ. ಅತಿಯಾದ ಆತ್ಮವಿಶ್ವಾಸವೇ ನನ್ನ ಸೋಲಿಗೆ ಮುಳುವಾಯಿತು ಎಂದು ಕಾಣುತ್ತದೆ. ನಾನು ಸೋತಿರಬಹುದು ಆದರೆ ನನಗೆ ಹಿನ್ನಡೆಯಾಗಿಲ್ಲ.
ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು 50 ಸಾವಿರ ಮತ ಪಡೆಯುವಷ್ಟರಲ್ಲಿ ಸುಸ್ತಾಗಿದ್ದಾರೆ. ಆದರೆ ನಾನು ಸ್ವಾಭಿಮಾನಿಯಾಗಿ 49 ಸಾವಿರಕ್ಕೂ ಅಧಿಕ ಮತಪಡೆದೆ. ತಾಂತ್ರಿಕವಾಗಿ ನೋಟ ಮತಗಳಿಂದ ನಾನು ಸೋತೆ. ಮತದಾರರಿಗೆ ನಾನು ಇನ್ನೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ ಎಂಬ ದೃಢ ನಂಬಿಕೆಯಿಂದ ಮತದಾರರು ಕಾಂಗ್ರೆಸ್‍ಗೆ ಮತಹಾಕಿದರು ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಸಿಎಂ ಬಿಎಸ್‍ವೈ ಬೆಂಬಲಕ್ಕೆ ಕರೆ ಮಾಡಿದ್ದರು:
ಫಲಿತಾಂಶದ ಹಿಂದಿನ ದಿನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನಗೆ ಕರೆ ಮಾಡಿ ಬೆಂಬಲ ಕೊಡುವಂತೆ ಕೋರಿಕೊಂಡಿದ್ದರು. ಕಾಂಗ್ರೆಸ್ ಪಕ್ಷದಿಂದಲೂ ದೂರವಾಣಿ ಕರೆಗಳು ಬಂದಿದ್ದವು. ಆದರೆ ಸೋಲಿನ ನೋವು ನನಗಿಂತಲೂ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಬೇಸರ ಉಂಟಾಗಿದೆ. ಈ ಚುನಾವಣೆ ಇತಿಹಾದ ಪುಟಗಳಲ್ಲಿ ದಾಖಲಾಗಿದೆ. ಎಲ್ಲ ಸಮುದಾಯಗಳ ಮತದಾರರು ಮತಹಾಕಿದ್ದಾರೆ. ಎಲ್ಲರಿಗೂ ಕೃತಜ್ಞತೆಗಳು ಎಂದು ಹೇಳಿದರು.
ಶೀಘ್ರವೇ ಮುಂದಿನ ನಡೆ ಬಗ್ಗೆ ತೀರ್ಮಾನ:
ಜಿಪಂ, ತಾಪಂ ಚುನಾವಣೆಗಳು ಹತ್ತಿರವಾಗುತ್ತಿದ್ದು ಕಾರ್ಯಕರ್ತರು, ಅಭಿಮಾನಿಗಳು ದೃತಿಗೆಡಬೇಡಿ. ಇನ್ನು ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಎಲ್ಲರ ಜೊತೆ ಚರ್ಚಿಸಿ ನನ್ನ ಮುಂದಿನ ನಡೆಯ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದರು.
ಜಿಪಂ ಮಾಜಿ ಸದಸ್ಯ ಎಸ್.ಕೆ.ರಾಮರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಎಸ್.ಪಾಟೀಲ್, ಎನ್.ಎಸ್.ರಾಜು, ಯು.ಜಿ.ಶಿವಕುಮಾರ್, ಮೊಬೈಲ್ ಮಂಜುನಾಥ್, ತಿಪ್ಪೇಸ್ವಾಮಿ ಗೌಡ, ಗಿರೀಶ್ ಗೌಡ, ಚಿತ್ತಪ್ಪ, ಬಿಸ್ತುವಳ್ಳಿ ರಂಗೇಗೌಡ, ಹಾಲೇಕಲ್ ಬಸವರಾಜ್, ವಕೀಲ ಮಾಳಮ್ಮನಹಳ್ಳಿ ರಂಗನಾಥ್ ಸೇರಿದಂತೆ ಅನೇಕರು ಮಾತನಾಡಿದರು.
ಕಸಬಾ, ಸೊಕ್ಕೆ, ಬಿಳಿಚೋಡು ಹೋಬಳಿಗಳ ಒಂದು ಸಾವಿರಕ್ಕೂ ಹೆಚ್ಚು ಮತದಾರರು, ಅಭಿಮಾನಿಗಳು, ಹಿತೈಷಿಗಳು ಭಾಗವಹಿಸಿದ್ದರು.