ಅಕ್ರಮ ರಹಿತ ಶಾಂತಿಯುತ ಚುನಾವಣೆಗೆ ಸಕಲ ಸಿದ್ಧತೆ, ಜಗಳೂರು ಕ್ಷೇತ್ರದಲ್ಲಿ ಮತದಾರರು ಎಷ್ಟು?

Suddivijaya
Suddivijaya March 30, 2023
Updated 2023/03/30 at 12:07 PM

ಸುದ್ದಿವಿಜಯ, ಜಗಳೂರು: ಕೇಂದ್ರ ಚುನಾವಣಾ ಆಯೋಗ ಹೊರಡಿಸಿರುವ ನೀತಿ ಸಂಹಿತೆಯ ಮಾದರಿಯಲ್ಲೇ ತಾಲೂಕಿನಲ್ಲಿ ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಎಸ್.ರವಿ. ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ಕುರಿತು ಚುನಾವಣೆ ಆಯೋಗ ಹೊರಡಿಸಿದ ಮಾದರಿ ನೀತಿ ಸಂಹಿತೆ ಹಾಗೂ ಚುನಾವಣೆ ಸಿದ್ದತೆ ಕುರಿತು ನಡೆದ ರಾಜಕೀಯ ಸರ್ವಪಕ್ಷಗಳ ಹಾಗೂ ಪ್ರಿಂಟಿಂಗ್ ಪ್ರೆಸ್ ಮಾಲಿಕರ ಸಭೆ ನಡೆಸಿ ಮಾತನಾಡಿದರು.

ಭಾರತ ಚುನಾವಣಾ ಆಯೋಗ ನಿಗದಿಪಡಿಸಿರುವ ಚುನಾವಣೆ ವೇಳಾಪಟ್ಟಿ ಯಂತೆ ನಾಮಪತ್ರ ಸಲ್ಲಿಕೆಗೆ ಏ.13 ರಂದು ಗುರುವಾರ ದಿಂದ ಆರಂಭವಾಗಿ ಏ.20 ಗುರುವಾರ ಕೊನೆಯದಿನವಾಗಿರುತ್ತದೆ. ಏ.21 ಶುಕ್ರವಾರ ಪರಿಶೀಲನೆಗೆ ಹಾಗೂ ಏ.24 ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿರುತ್ತದೆ. ಮೇ.10 ರಂದು ಬುಧವಾರ ಮತದಾನ ಮೇ.13 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕಕ್ಕೆ ಪೂರ್ವದ ಹತ್ತು ದಿನದ ಮುಂಚಿತವಾಗಿ ಏ.10ರೊಳಗೆ ನಮೂನೆ -6 ಸಲ್ಲಿಸಿದ್ದಲ್ಲಿ ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದರು.

ಅಕ್ರಮ ಮದ್ಯ, ಹಣ ಸಾಗಾಣೆ ಕಟ್ಟೆಚ್ಚರ:
ವಿಧಾನ ಸಭಾ ಕ್ಷೇತ್ರದಲ್ಲಿ 5ಕಡೆ ಚೆಕ್ ಪೆÇೀಸ್ಟ್ ಗಳನ್ನು ನಿರ್ಮಿಸಿ. ಎಸ್‍ಎಸ್‍ಟಿ ಟೀಂ,ಪೊಲೀಸ್ ಠಾಣಾ ಸರಹದ್ದುಗೆ ಅನುಸಾರವಾಗಿ ಮೂರು ಎಫ್‍ಎಸ್‍ಟಿ ಟೀಂ ರಚಿಸಲಾಗಿದೆ. ಕಂಟ್ರೋಲ್ ರೂಮ್ ನಿರ್ವಹಣೆ ಅಲ್ಲದೆ ಸಿ-ವಿಜಿಲ್ ತಂತ್ರಾಂಶದಲ್ಲಿ ದೂರು ದಾಖಲಿಸಲು ಅವಕಾಶವಿರುತ್ತದೆ.ಇದರಿಂದ ಅನಧಿಕೃತ ಹಣ ಮದ್ಯ ಸಾಗಾಣಿಕೆ ಹಾಗೂ ಅಕ್ರಮ ಚಟುವಟಿಕೆಗಳ ಬಗ್ಗೆ ಕಟ್ಟೆಚ್ಚರವಹಿಸಲಾಗಿದೆ. ಶಾಂತಿಯುತ ಚುನಾವಣೆ ನಡೆಸಲಾಗುವುದು ಎಂದು ಹೇಳಿದರು.

ವಿಶೇಷ ವಿಕಲಚೇತನರಿಗೆ ಹಾಗೂ 80 ವರ್ಷ ಮೇಲ್ಪಟ್ಟ ಮತದಾರರಿಗೆ ಅಂಚೆಮತ ಮೂಲಕ ಮನೆಯಲ್ಲಿ ಮತದಾನಕ್ಕೆ ಅವಕಾಶ ನೀಡಲಾಗಿದೆ. ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ನಮೂನೆ 12-ಡಿ ಯನ್ನು ಒದಗಿಸಲಾಗುವುದು ಇದನ್ನು ಮತಗಟ್ಟೆಗೆ ತೆರಳಲಾಗದವರು, ವಿಕಚೇತನ ಮತದಾರರು ಸೌಲಭ್ಯ ಬಳಸಿಕೊಳ್ಳಬಹುದು ಎಂದರು.

ಆಯೋಗದ ನಿರ್ದೇಶನದಂತೆ ಒಬ್ಬ ಅಭ್ಯರ್ಥಿಗೆ ಒಟ್ಟು 40 ಲಕ್ಷದ ರೂ ವರೆಗೆ ಚುನಾವಣೆ ವೆಚ್ಚ ನಿಗದಿಪಡಿಸಲಾಗಿದೆ. ಚುನಾವಣೆ ಪ್ರಚಾರ ಸಭೆ ಸಮಾರಂಭಗಳಿಗೆ ಆನ್ ಲೈನ್ ನಲ್ಲಿ ಅನುಮತಿ ಪಡೆಯಬಹುದು. ಚುನಾವಣೆಯಲ್ಲಿ ಪಕ್ಷಗಳ ಲೆಕ್ಕ ಪತ್ರ ನಿರ್ವಹಣೆಗೆ ಮಾಹಿತಿ ನೀಡಲಾಗುವುದು. ಪ್ರಿಂಟಿಂಗ್ ಪ್ರೆಸ್ ನವರು ಚುನಾವಣೆ ಅಧಿಕಾರಿಗಳ ಮಾರ್ಗಸೂಚಿ ಯಂತೆ ಕರಪತ್ರ ಮುದ್ರಿಸಬೇಕು ಎಂದು ಸಲಹೆ ನೀಡಿದರು.

ಸಂದರ್ಭದಲ್ಲಿ ತಹಶೀಲ್ದಾರ್ ಜಿ. ಸಂತೋಷ್ ಕುಮಾರ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಷಂಷೀರ್ ಅಹಮ್ಮದ್, ಡಿ.ವಿ.ನಾಗಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಲುಕ್ಮಾನ್ ಉಲ್ಲಾ ಖಾನ್, ಮಹಮ್ಮದ್ ಭಾಷ, ಕಟ್ಟಿಗೆಹಳ್ಳಿ ಮಂಜಪ್ಪ, ನಿಸಾರ್ ಅಹಮ್ಮದ್, ಪ್ರಿಂಟಿಂಗ್ ಪ್ರೆಸ್ ನ ಮಾಲಿಕರಾದ ನಾಗಣ್ಣ, ಸಂತೋಷ್, ಅರುಣಕುಮಾರ್ ಸೇರಿದಂತೆ ಇದ್ದರು.

ಜಗಳೂರು ಕ್ಷೆತ್ರದಲ್ಲಿ ಮತದಾರರ ಸಂಖ್ಯೆ 
ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,89,209 ಮತದಾರರಿದ್ದು, ಅದರಲ್ಲಿ 95,928 ಪುರುಷ ಮತದಾರರು, 93,269 ಮಹಿಳಾ ಮತದಾರರು, 12 ಇತರೆ, 71 ಸೇವಾ ಮತದಾರರು ಇದ್ದಾರೆ. ಕ್ಷೇತ್ರದಲ್ಲಿ ಒಟ್ಟು 262 ಮತಗಟ್ಟೆ ಸಂಖ್ಯೆಗಳು ಇವೆ ಎಂದು ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ತಿಳಿಸಿದ್ದಾರೆ.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!