ದಾವಣಗೆರೆ-ಚಳ್ಳಕೆರೆ ರಸ್ತೆ ವಿಸ್ತರಣೆಗೆ ಶಾಸಕ ಬಿ.ದೇವೇಂದ್ರಪ್ಪ ಸೂಚನೆ!

Suddivijaya
Suddivijaya July 9, 2023
Updated 2023/07/09 at 10:26 AM

ಸುದ್ದಿವಿಜಯ,ಜಗಳೂರು: ಮಲ್ಪೆ, ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಪಟ್ಟಣದಲ್ಲಿ ಹಾದು ಹೋಗಿದ್ದು ರಸ್ತೆ ಅತ್ಯಂತ ಕಿರಿದಾಗಿದೆ ಹೀಗಾಗಿ ರಸ್ತೆ ವಿಸ್ತರಣೆಗೆ ಶೀಘ್ರವೇ ಕಾನೂನು ಪ್ರಕ್ರಿಯೆ ಕೈಗೊಳ್ಳಿ ಎಂದು ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್ ಅವರಿಗೆ ಶಾಸಕ ಬಿ.ದೇವೇಂದ್ರಪ್ಪ ಸೂಚನೆ ನೀಡಿದರು.

ಪಟ್ಟಣದಲ್ಲಿ ಭಾನುವಾರ ಪೌರಕಾರ್ಮಿಕರೊಂದಿಗೆ ಶಾಸಕರ ಜನ ಸಂಪರ್ಕ ಕಚೇರಿ ಮತ್ತು ನೆಹರೂ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಕಸ ಗುಡಿಸುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಿದ ನಂತರ ಮಾತನಾಡಿದರು.

ಜಗಳೂರು ಪಟ್ಟಣದಲ್ಲಿ 17 ಸಾವಿರ ಜನ ಸಂಖ್ಯೆ ಹೊಂದಿದೆ. ಆದರೆ ಸ್ವಚ್ಛತೆಗೆ ಕೇವಲ 30 ಮಂದಿ ಪೌರ ಕಾರ್ಮಿಕರಿದ್ದಾರೆ. ಪಟ್ಟಣದ ಜನ ಸ್ವಚ್ಛತೆಗೆ ಕೈ ಜೋಡಿಸಬೇಕು. ಹಸಿಕಸ, ಒಣ ಕಸಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಕಸ ಒಯ್ಯುವ ಗಾಡಿಯಲ್ಲಿ ಹಾಕಿದರೆ ರೋಗಗಳ ಸಂಖ್ಯೆ ಕಡಿಮೆಯಾಗುತ್ತದೆ ಹೀಗಾಗಿ ಎಲ್ಲರೂ ತಮ್ಮ ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪೌರಕಾರ್ಮಿಕರಿಗೆ ಸಹಕರಿಸಿ ಎಂದು ಮನವಿ ಮಾಡಿದರು.

 ಜಗಳೂರು ಪಟ್ಟಣದ ನೆಹರೂ ರಸ್ತೆಯಲ್ಲಿ ಶಾಸಕ ಬಿ.ದೇವೇಂದ್ರಪ್ಪ ಪೌರಕಾರ್ಮಿಕರೊಂದಿಗೆ ಕಸ ಗುಡಿಸುವ ಮೂಲಕ ವಿಶ್ವಪರಿಸರ ದಿನಾಚರಣೆ ಆಚರಿಸಿದರು.
 ಜಗಳೂರು ಪಟ್ಟಣದ ನೆಹರೂ ರಸ್ತೆಯಲ್ಲಿ ಶಾಸಕ ಬಿ.ದೇವೇಂದ್ರಪ್ಪ ಪೌರಕಾರ್ಮಿಕರೊಂದಿಗೆ ಕಸ ಗುಡಿಸುವ ಮೂಲಕ ವಿಶ್ವಪರಿಸರ ದಿನಾಚರಣೆ ಆಚರಿಸಿದರು.

ಪಟ್ಟಣದಲ್ಲಿ ಫುಟ್‍ಪಾತ್ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಹೀಗಾಗಿ ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ನಾಗರಿಕರು ಪಟ್ಟಣಕ್ಕೆ ಬರುವ ಸಂಖ್ಯೆ ಹೆಚ್ಚಾಗುತ್ತಿದ್ದು ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಿರುವುದರಿಂದ ವಾಹನಗಳ ಕಿರಿಕಿರಿ ಹೆಚ್ಚಾಗುತ್ತಿದೆ ಹಾಗಾಗಿ ವಿಸ್ತರಣೆ ಅನಿವಾರ್ಯ ಎಂದರು. ಪರಿಸರವನ್ನು ನಾವು ಕಾಪಾಡಿದರೆ ನಮ್ಮನ್ನು ಪರಿಸರ ಕಾಪಾಡುತ್ತದೆ. ಪ್ಲಾಸ್ಟಿಕ್ ಬ್ಯಾಗಡಿ ಹೆಚ್ಚು ಬಳಸುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತದೆ.

ಸ್ವಚ್ಛ ಭಾರತ್ ಕಲ್ಪನೆ ಸಾಕಾರಗೊಳ್ಳಬೇಕಾದರೆ ನಾವೆಲ್ಲಾ ಪ್ಲಾಸ್ಟಿಕ್ ಬಳಕೆ ಮಾಡದೇ ಯಾವುದೇ ಸಾಮಾಗ್ರಿ ಖರೀದಿಸಲು ಮನೆಯಿಂದಲೇ ಬ್ಯಾಗ್‍ಗಳನ್ನು ತೆಗೆದುಕೊಂಡು ಹೋಗಬೇಕು. 

ಪ್ಲಾಸ್ಟಿಕ್ ಮುಕ್ತ ಪಟ್ಟಣವಾಗಿಸಬೇಕಾದರೆ ಕಾನೂನು ಪರಿಪಾಲನೆ ಜತೆಗೆ ನಾಗರಿಕೆರೆ ಪ್ಲಾಸ್ಟಿಕ್ ಬಳಸದಂತೆ ಸ್ವಯಂ ನಿಯಂತ್ರಣ ಅನಿವಾರ್ಯವಾಗಿದೆ ಎಂದರು.

ಇಂದಿರಾ ಕ್ಯಾಂಟೀನ್ ಸ್ವಚ್ಛತೆಗೆ ಸೂಚನೆ: ಸರಕಾರಿ ಆಸ್ಪತ್ರೆಯ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್‍ನಲ್ಲಿ ಬೆಳಗ್ಗಿನ ಉಪಹಾರ ಸೇವಿಸಿದ ಶಾಸಕರು ಇಂದಿನಿಂದ ರೋಗಿಗಳಿಗೆ ಗಂಜಿ ಮತ್ತು ಬಿಸಿನೀರಿನ ವ್ಯವಸ್ಥೆ ಉಚಿತವಾಗಿ ಕೊಡಲು ಸಿಬ್ಬಂದಿಗೆ ತಿಳಿಸಲಾಗಿದೆ. ಜೊತೆಗೆ ಸಾರ್ವಜನಿಕರಿಗೆ ಬಿಸಿಯಾದ ಶುಚಿಯಾದ ಆಹಾರ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ ಎಂದರು.

ಪಪಂ ಚೀಫ್ ಆಫೀಸರ್ ಮಾತನಾಡಿ, ಪಟ್ಟಣದಲ್ಲಿ ಇತ್ಯಾಜ್ಯ ನಿರ್ವಹಣೆಗಾಗಿ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದೆ.

ವಾರಕ್ಕೊಮ್ಮೆ ನಗರದಲ್ಲಿ ವಾಹನ ಸಂಚಾರ ಮಾಡಲಿದ್ದು ಮೊಬೈಲ್ ಬಿಡಿಭಾಗಗಳಾದ ಚಾರ್ಜರ್, ಕೆಟ್ಟುಹೋದ ಟಿವಿ, ಮೊಬೈಲ್, ಮಿಕ್ಸರ್, ಬರ್ನ್ ಆದ ಬಲ್ಬ್‍ಗಳು ಇತರೆ ಇತ್ಯಾಜ್ಯಗಳನ್ನು ಅದೇ ವಾಹನದಲ್ಲಿ ಹಾಕಬೇಕು ಇದರಿಂದ ಪರಿಸರ ಸಂರಕ್ಷಣೆಯಾಗುತ್ತದೆ ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್.ಚಿದಾನಂದ ಮಾತನಾಡಿ, ನೂತನ ಶಾಸಕರಾದ ಬಿ.ದೇವೇಂದ್ರಪ್ಪ ಅವರು ಪರಿಸರ ಸಂರಕ್ಷಣೆಗಾಗಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಜಾಗೃತಿ ಮೂಡಿಸುತ್ತರುವುದು ಉತ್ತಮ ಕಾರ್ಯವಾಗಿದೆ. ಪರಿಸರ ಸಂರಕ್ಷಣೆಗಾಗಿ ಕಡ್ಡಾಯವಾಗಿ ಬಟ್ಟೆ ಬ್ಯಾಗ್ ಬಳಸಲು ಸೂಚನೆ ನೀಡಿರುವುದು ಉತ್ತಮ ಕಾರ್ಯ ಎಂದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಟಿಎಚ್‍ಒ ನಾಗರಾಜ್, ಪಪಂ ಆರೋಗ್ಯಾಧಿಕಾರಿ ಕಿಫಾಯತ್ ಅಹಮದ್, ಪಪಂ ಸದಸ್ಯರಾದ ಅರಿಶಿಣಗುಂಡಿ ಮಂಜುನಾಥ್, ಬಿ.ಕೆ.ರಮೇಶ್‍ರೆಡ್ಡಿ, ಮಹಮದ್ ಆಲಿ, ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮದ್, ಎಚ್.ಕೃಷ್ಣಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!