suddivijaya21/05/2024
ಸುದ್ದಿವಿಜಯ, ಜಗಳೂರು: ಬಾಹ್ಯ ಜಗತ್ತಿನ ಸೌಂದರ್ಯ ಮತ್ತು ಸೃಷ್ಟಿಯ ಎಲ್ಲ ನಿಯಮಗಳನ್ನು ಗ್ರಹಿಸುವ ಕಣ್ಣು ಮನುಷ್ಯನ ದೇಹಕ್ಕೆ ಬೆಳಕಾಗಿದೆ. ಕಣ್ಣುಗಳ ಬಗ್ಗೆ ಕಾಳಜಿ ಇರಲಿ ಎಂದು ಕೊಂಡ್ಲಹಳ್ಳಿ ಎಂ.ಆರ್.ಟಿ. ಗ್ರಾಮಾಂತರ ಕಣ್ಣಿನ ಆಸ್ಪತ್ರೆಯ ವೈದ್ಯಧಿಕಾರಿ ಡಾ.ಎನ್.ವಿಜಯ್ ಹೇಳಿದರು.
ಪಟ್ಟಣದ ಪ್ರೇರಣಾ ಸಮಾಜ ಸೇವಾ ಸಂಸ್ಥೆ ಆವರಣದಲ್ಲಿ ಮಂಗಳವಾರ ಹಿರಿಯ ನಾಗರಿಕರ ಸಂಘ, ಆಲ್ ಫಾತಿಮಾ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ದಿ. ಡಾ. ಕೆ. ನಾಗರಾಜ ರವರ ಸವಿ ನೆನಪಿಗಾಗಿ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮಾನವನ ದೇಹದಲ್ಲಿ ಹೃದಯ ಮೂತ್ರಪಿಂಡಗಳಷ್ಟೆ ಸೂಕ್ಷವಾದ ಮತ್ತೊಂದು ಅಂಗವೆ ಕಣ್ಣು, ಗಾಳಿಯಲ್ಲಿ ಧೂಳು, ಸೂಕ್ಷ್ಮಾಣು ಜೀವಿಗಳು ಕಣ್ಣಿನೊಳಗೆ ಸೇರಿ ಸೋಂಕನ್ನು ಉಂಟು ಮಾಡುತ್ತವೆ. ಸೂಕ್ಷ್ಮ ಅಂಗವಾದ ಕಣ್ಣನ್ನು ಜೋಪಾನವಾಗಿ ಕಾಯ್ದುಕೊಳ್ಳಬೇಕು ಎಂದರು.
ಪ್ರೇರಣಾ ಸಮಾಜ ಸೇವಾ ಸಂಸ್ಥೆ ನಿರ್ದೇಶಕ ಫಾದರ್ ರೋನಾಲ್ಡ್ ಮಾತನಾಡಿ, ಕಣ್ಣಿನ ಆರೈಕೆ ಆರೋಗ್ಯ ರಕ್ಷಣೆಯ ಅವಿಭಾಜ್ಯ ಅಂಗವಾಗಿದೆ. ದೈನಂದಿನ ಕಾರ್ಯಗಳನ್ನು ನಿರ್ವಹಿಸಲು ಕಣ್ಣುಗಳು ಅತ್ಯಗತ್ಯ.
ನಮ್ಮ ದೃಷ್ಟಿಯಲ್ಲಿನ ಯಾವುದೇ ದೌರ್ಬಲ್ಯತೆಯು ಇತರರ ಮೇಲೆ ನಮ್ಮ ಅವಲಂಬನೆಗೆ ಕಾರಣ ವಾಗಬಹುದು ಆದ್ದರಿಂದ ಎಚ್ಚರಿಕೆಯಿಂದ ಕಣ್ಣುಗಳನ್ನು ನೋಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪ್ರೇರಣಾ ಚರ್ಚ್ ಫಾದರ್ ಸಿಲ್ವೆಸ್ಟರ್ ಪೆರೇರಾ, ಫಾದರ್ ವಿಷನ್, ಎಸ್ಸಿ,ಎಸ್ಟಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮೀತಿ ಸದಸ್ಯರು ಡಾ. ಪಿ. ಎಸ್. ಅರವಿಂದನ್,
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ತಿಪ್ಪೇಸ್ವಾಮಿ ದೇವಿಕೆರೆ, ಅಲ್ ಫಾತಿಮಾ ಸಂಸ್ಥೆ ಕಾರ್ಯದರ್ಶಿ ಶಾಹೀನಾ ಬೇಗಂ, ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಹಾಲಪ್ಪ, ಜಿ.ಪಂ ಮಾಜಿ ಸದಸ್ಯೆ ನಾಗರತ್ನಮ್ಮ, ಕರುನಾಡ ರಕ್ಷಣಾ ಪಡೆ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷೆ ಎಸ್. ಆರ್.ಇಂದಿರಾ ಸೇರಿದಂತೆ ಮತ್ತಿತರರಿದ್ದರು.