ಸುದ್ದಿವಿಜಯ, ಜಗಳೂರು: ಕಾಡಂಚಿನ ಗ್ರಾಮಗಳ ಜನರೊಂದಿಗೆ ಅರಣಾಧ್ಯಿಕಾರಿಗಳು ಪ್ರೀತಿ, ಸಾಮರಸ್ಯದಿಂದ ವರ್ತಿಸಿ ಜನರಿಗೆ ಕಾಡಿನ ಮಹತ್ಸವದ ಬಗ್ಗೆ ತಿಳಿಸಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಅರಣ್ಯ ಇಲಾಖೆಯ ಆವರಣದಲ್ಲಿ ಬುಧವಾರ ಪ್ರಾದೇಶಿಕ ವಲಯ ಜಗಳೂರು, ರಂಗಯ್ಯನದುರ್ಗ ವನ್ಯಜೀವಿ ವಲಯ ಹೊಸಕೆರೆ ಇವರ ಸಹಯೋಗದಲ್ಲಿ ಎಸ್‍ಸಿಪಿ, ಟಿಎಸ್‍ಪಿ ಯೋಜನೆಯಡಿ ಆಯ್ಕೆ ಯಾದ 24 ಫಲಾನುಭವಿಗಳಿಗೆ ಅಡುಗೆ ಅನಿಲದ ಸಿಲಿಂಡರ್ ವಿತರಿಸಿ ಮಾತನಾಡಿದರು.
ಏಷ್ಯಾ ಖಂಡದಲ್ಲಿಯೇ ಅಪರೂಪ ಪ್ರಾಣಿ ಕುರಿ ಜಗಳೂರು ತಾಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶದಲ್ಲಿ ವಾಸವಿರುವುದು ನಮ್ಮ ಹೆಗ್ಗಳಿಕೆಯಾಗಿದೆ. ಆ ಪ್ರಾಣಿಯ ಸಂತತಿಯನ್ನು ದ್ವಿಗುಣಗೊಳಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ಸಾರ್ವಜನಿಕ ಆಸ್ತಿಗಳಲ್ಲಿ ಅರಣ್ಯವು ಒಂದಾಗಿದ್ದು, ಅದನ್ನು ಸಂರಕ್ಷಣೆ ಮಾಡುವುದು ಕೇವಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾತ್ರವಲ್ಲ ಪ್ರತಿಯೊಬ್ಬರು ಕೈ ಜೋಡಿಸಿದಾಗ ಕಾಡನ್ನು ಉಳಿಸಿ, ಬೆಳೆಸಬಹುವುದು ಎಂದರು.
ಸಾವಿರಾರು ವರ್ಷಗಳಿಂದಲೂ ಹಿರಿಯರು ಹೆಚ್ಚಾಗಿ ಅರಣ್ಯಕ್ಕೆ ಅವಲಂಬಿತರಾಗಿ ಉರುವಲಿಗಾಗಿ ಮರ,ಗಿಡ ಕಡಿದು ಕಟ್ಟಿಗೆ ಕೂಡಿಸಿ ಆಹಾರ ಬೇಯಿಸಿಕೊಂಡು ಊಟ ಮಾಡುತ್ತಿದ್ದರು. ಕಾಡಂಚಿನಲ್ಲಿರುವ ಜನರು ಸೌಧೆಗಾಗಿ ಕಾಡಿನ ಕಡಿತಲೆ ತಪ್ಪಿಸಲು ಸರಕಾರ ಅಡುಗೆ ಅನಿಲವನ್ನು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಅಮಾಯಕರ ಮೇಲೆ ಪ್ರಕರಣ ದಾಖಲಿಸುವುದು ಸಲ್ಲದು:
ತಾಲೂಕು ಹಿಂದುಳಿದ ಪ್ರದೇಶ ನೂರಾರು ಹಳ್ಳಿಗಳ ಜನರು ಅರಣ್ಯದಂಚಿನಲ್ಲಿ ವಾಸ ಮಾಡುತ್ತಿದ್ದಾರೆ. ಕುರಿ. ಮೇಕೆ, ದನಗಳಿಗೆ ಮೇವು ಸಂಗ್ರಹಿಸಲು, ಇಲ್ಲವೆ ಸಣ್ಣಪುಟ್ಟ ಮರಗಳನ್ನು ಕಡಿದವರನ್ನು ಯುದ್ದ ಗೆದ್ದಂತೆ ಅವರನ್ನು ಕರೆತಂದು ಪ್ರಕರಣ ದಾಖಲಿಸುವುದು ಬೇಡ, ಅರಣ್ಯ ಕಡಿತಲೆಯಾಗುವ ಮುನ್ನವೆ ಅವರಿಗೆ ಮನವರಿಕೆ ಮಾಡಿ ಶಾಸಕರು ಸಲಹೆ ನೀಡಿದರು.
ಪ್ರಾದೇಶಿಕ ವಲಯಾರಣ್ಯಾಧಿಕಾರಿ ಶ್ರಿನಿವಾಸ್ ಮಾತನಾಡಿ, ಅರಣ್ಯದಿಂದ ನಾಡು ಉಳಿಯುವುದು, ಪ್ರಕೃತಿ ಮುನಿದರೆ ಭೂಮಿಯೇ ವಿನಾಶವಾಗುತ್ತದೆ ಎಂದರು.
ತಾಲೂಕಿನಲ್ಲಿ ಅರಣ್ಯ ವ್ಯಾಪ್ತಿಯ ಎಸ್ಟಿ 12 ಹಾಗೂ ಎಸ್‍ಟಿ 12 ಫಲಾನುಭವಿಗಳಿಗೆ ರೀ ಫಿಲಿಂಗ್ ಸಿಲಿಂಡರ್‍ಗಳನ್ನು ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲರಿಗೂ ಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ರಂಗಯ್ಯನದುರ್ಗ ವನ್ಯಜೀವಿ ವಲಯಾರಣ್ಯಾಧಿಕಾರಿ ಮಹೇಶ್, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಮಹೇಶ್ವರಪ್ಪ, ನಿವೃತ್ತ ಉಪನ್ಯಾಸಕ ಷಂಷೀರ್, ಮುಖಂಡ ಬಂಗಾರಪ್ಪ, ಪ.ಪಂ ಸದಸ್ಯ ಸಣ್ಣ ತಾನಾಜಿ ಗೋಸಾಯಿ, ಕುರಿ ಜಯ್ಯಣ್ಣ, ಪಲ್ಲಾಗಟ್ಟೆ ಶೇಖರಪ್ಪ, ಮಹಮದ್ ಗೌಸ್ ಸೇರಿದಂತೆ ಮತ್ತಿತರಿದ್ದರು.