ನಿರಂತರ 7 ಗಂಟೆ ವಿದ್ಯುತ್ ಪೂರೈಕೆಗೆ ರೈತರ ಮನವಿ: ಬೆಸ್ಕಾಂ ಎಇಇ ಗಿರೀಶ್ ನಾಯ್ಕ್ ಸ್ಪಂದನೆ

Suddivijaya
Suddivijaya August 16, 2023
Updated 2023/08/16 at 12:03 PM

ಸುದ್ದಿವಿಜಯ, ಜಗಳೂರು: ಮಳೆ ಕೈಕೊಟ್ಟಿರುವುದರಿಂದ ಬಿತ್ತಿರುವ ಬೆಳೆಗಳು ಒಣಗುತ್ತಿವೆ. ಕೃಷಿ ಪಂಪ್‍ಸೆಟ್‍ಗಳಿಗೆ ಹಗಲಿನಲ್ಲಿ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡುವಂತೆ ಹಾಗೂ ಲೋಡ್‍ಶೆಡ್ಡಿಂಗ್ ಮಾಡುತ್ತಿರುವುದನ್ನು ವಿರೋಧಿಸಿ ಬುಧವಾರ ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ(ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ವತಿಯಿಂದ ಪಟ್ಟಣದ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಬೆಸ್ಕಾಂ ಎಇಇ ಗಿರೀಶ್ ನಾಯ್ಕ್ ಗೆ ಮನವಿ ಸಲ್ಲಿಸಿದರು.

ರೈತ ಸಂಘ ಜಿಲ್ಲಾ ಮುಖಂಡ ಕಾನನಕಟ್ಟೆ ತಿಪ್ಪೇಸ್ವಾಮಿ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಜಗಳೂರು ಹಿಂದುಳಿದ ಪ್ರದೇಶ, ಇಲ್ಲಿ ಯಾವುದೇ ನದಿ ಅಥವಾ ನೀರಿನ ಮೂಲಗಳಿಲ್ಲ ವಿದ್ಯುತ್ ಪೂರೈಕೆ ಕಣ್ಣಾಮುಚ್ಚಾಲೆ, ಕೆಲ ಲೈನ್‍ಮೆನ್, ಎಸ್‍ಒಗಳ ನಿರ್ಲಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಜಗಳೂರು ಬರಪೀಡಿತ ತಾಲೂಕು ರೈತರು ಮಳೆಯನ್ನೇ ನಂಬಿಕೊಂಡು ಬೆಳೆ ಬೆಳೆಯಬೇಕು. ಕಳೆದ ವರ್ಷಕ್ಕಿಂತ ಈ ಬಾರಿ ಮುಂಗಾರು ಮಳೆಯ ವೈಫಲ್ಯದಿಂದ ಸಮಯಕ್ಕೆ ಸರಿಯಾಗಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಇದೀಗ ಬಿತ್ತನೆ ಮಾಡಿದ ಬೆಳೆಗಳಿಗೆ ಮಳೆ ಇಲ್ಲದೇ ಎಲ್ಲಾ ಒಣಗುತ್ತಿವೆ. ಇದರಿಂದ ರೈತರ ಜೀವನ ತುಂಬ ಸಂಕಷ್ಟಕ್ಕೆ ಸಿಲುಕಿದೆ ಎಂದರು.

  ಕೃಷಿ ಪಂಪ್‍ಸೆಟ್‍ಗಳಿಗೆ ಹಗಲಿನಲ್ಲಿ ಏಳು ತಾಸು ವಿದ್ಯುತ್ ಪೂರೈಕೆ ಮಾಡುವಂತೆ ಹಾಗೂ ಲೋಡ್‍ಶೆಡ್ಡಿಂಗ್ ಮಾಡುತ್ತಿರುವುದನ್ನು ವಿರೋಧಿಸಿ ಬುಧವಾರ ಜಗಳೂರು ಪಟ್ಟಣದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಕೃಷಿ ಪಂಪ್‍ಸೆಟ್‍ಗಳಿಗೆ ಹಗಲಿನಲ್ಲಿ ಏಳು ತಾಸು ವಿದ್ಯುತ್ ಪೂರೈಕೆ ಮಾಡುವಂತೆ ಹಾಗೂ ಲೋಡ್‍ಶೆಡ್ಡಿಂಗ್ ಮಾಡುತ್ತಿರುವುದನ್ನು ವಿರೋಧಿಸಿ ಬುಧವಾರ ಜಗಳೂರು ಪಟ್ಟಣದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಅಲ್ಪಸ್ವಲ್ಪ ನೀರಾವರಿ ಜಮೀನು ಹೊಂದಿರುವ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ ಇದರ ನಡುವೆ ವಿದ್ಯುತ್‍ವ್ಯತ್ಯಯ, ರಾತ್ರಿ ಹೊತ್ತಲ್ಲಿ ಪೂರೈಕೆ ಮಾಡುವುದರಿಂದ ಜಮೀನುಗಳಿಗೆ ರಾತ್ರಿ ವೇಳೆಯಲ್ಲಿ ನೀರಾಯಿಸಲು ತುಂಬ ಸಮಸ್ಯೆಯಾಗುತ್ತಿದೆ.

ಮಧ್ಯೆ ರಾತ್ರಿ ವಿದ್ಯುತ್ ನೀಡಿದರೇ ರೈತರು ಹೇಗೆ ನೀರು ಹರಿಸಲು ಸಾಧ್ಯವಾಗುತ್ತದೆ. ಕಾಡು ಪ್ರಾಣಿ, ವಿಷ ಜಂತುಗಳ ಭಯದಿಂದ ಜಮೀನುಗಳಿಗೆ ಹೋಗಲು ಆಗುತ್ತಿಲ್ಲ. ಆದ್ದರಿಂದ ಹಗಲಿನಲ್ಲಯೇ 7 ತಾಸು ವಿದ್ಯುತ್ ನೀಡಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು.

ಬೆಸ್ಕಾಂ ಎಇಇ ಗಿರೀಶ್ ನಾಯ್ಕ ಮಾತನಾಡಿ, ತಾಲೂಕಿನಲ್ಲಿ ವಿದ್ಯುತ್ ಪೂರೈಕೆ ಪ್ರಮಾಣದಲ್ಲಿ ಸಮಸ್ಯೆ ಇದೆ. ಜಗಳೂರು ಕ್ಷೇತ್ರಕ್ಕೆ 220 ಕೆವಿ ನಿರ್ಮಾಣವಾದರೆ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗಲಿದೆ.

ರಾತ್ರಿ ನೀಡುವ ವಿದ್ಯುತ್ ಪೂರೈಕೆಯನ್ನು ಹಗಲು ಹೊತ್ತಲ್ಲಿ ನೀಡಲು ಕ್ರಮಕೈಗೊಳ್ಳಲಾಗುವುದು. ಸಮಸ್ಯೆಯನ್ನು ಮೇಲಾಧಿಕಾರಿಗಳ ಜತೆ ಚರ್ಚಿಸಿ ರೈತರಿಗೆ ಅನುಕೂಲವಾಗುವಂತೆ ಮಾಡಲಾಗುವುದು. ಇಲಾಖೆಯಲ್ಲಿ ಸಾಕಷ್ಟು ಒತ್ತಡಗಳ ನಡುವೆ ಕೆಲಸ ಮಾಡಲಾಗುತ್ತದೆ.

ರೈತರು ಆತಂಕ ಪಡೆದೇ ಸಹಕಾರ ನೀಡಬೇಕು ಎಂದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿರಂಜೀವಿ ಎಚ್.ಎಂ ಹೊಳೆ ಮಾತನಾಡಿದರು.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ತಾಲೂಕು ಪ್ರ.ಕಾರ್ಯದರ್ಶಿ ಬೈರನಾಯಕನಹಳ್ಳಿ ರಾಜು, ಹಸಿರು ಸೇನೆ ಅಧ್ಯಕ್ಷ ವೀರೇಶ್ ಚಿಕ್ಕಬನ್ನಿಹಟ್ಟಿ, ಜಿಲ್ಲಾ ಕಾರ್ಯದರ್ಶಿ ಸತೀಶ್ ಗೌಡಗೊಂಡನಹಳ್ಳಿ,

ಮಡ್ರಳ್ಳಿ ತಿಪ್ಪೇಸ್ವಾಮಿ, ಸಹದೇವರೆಡ್ಡಿ, ಪ್ರಹ್ಲಾದಪ್ಪ, ರಂಗಸ್ವಾಮಿ, ಚಂದ್ರಪ್ಪ, ಹನುಮಂತಪ್ಪ, ಚೌಡೇಶ್, ಸುಪತ್ರಪ್ಪ, ಬಸವರಾಜಪ್ಪ ಸೇರಿದಂತೆ ಮತ್ತಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!