ಸುದ್ದಿವಿಜಯ, ಜಗಳೂರು: ಕೇಂದ್ರ ಸರಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಗೆ ರಾಜ್ಯ ಸರಕಾರ ಸುಗ್ರಿವಾಜ್ಞೆಯನ್ನು ಹೊರಡಿಸಿ ರಾಜ್ಯಮಟ್ಟದಲ್ಲಿ ಎಂಎಸ್‍ಪಿ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದಪ್ರತಿಭಟನೆ ನಡೆಸಲಾಯಿತು.
ಪಟ್ಟನದ ಪ್ರವಾಸಿ ಮಂದಿರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ರೈತರು ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಸಂತೋಷ್‍ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ದೇಶಕ್ಕೆ ಅನ್ನ ಬೆಳೆಯುವ ರೈತರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ರಾಜಕಾರಣಿಗಳು ಕೇವಲ ರೈತರ ಹೆಸರು ಹೇಳಿಕೊಂಡು ಮತ ಪಡೆಯುವುದನ್ನು ಬಿಟ್ಟರೆ ಅವರಿಂದ ಬೇರೆ ಯಾವ ಕೆಲಸಗಳು ನಡೆಯುತ್ತಿಲ್ಲ.
ಪ್ರತಿ ನಿತ್ಯ ರೈತ ತನ್ನ ಹೊಲದಲ್ಲಿ ಬಿಸಿಲು, ಮಳೆ, ಚಳಿ ಎನ್ನದೇ ಬೆಳೆಗಳಿಗೆ ನೀರಾಯಿಸಿ ಚನ್ನಾಗಿ ಬೆಳೆದರೂ ಬೆಂಬಲ ಬೆಲೆ ಸಿಗದೇ ನಷ್ಟ ಅನುಭವಿಸುತ್ತಾನೆ. ಇದರಿಂದ ಬೇಸತ್ತು ಆತ್ಮಹತ್ಯೆಗೂ ಶರಣಾಗಿದ್ದಾರೆ. ಸತ್ತ ಮೇಲೆ ಪರಿಹಾರ ಘೋಷಣೆ ಮಾಡುವುದಕ್ಕಿಂತ ಜೀವಂತವಾಗಿರುವಾಗಲೇ ಕಷ್ಟಗಳಿಗೆ ಸ್ಪಂದಿಸದೇ ರೈತರು ಸಂತೋಷವಾಗಿರುತ್ತಾರೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ್ ಸರ್ಕಾರಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಕೇಂದ್ರ ಸರಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಗೆ ರಾಜ್ಯ ಸರ್ಕಾರ ಸುಗ್ರಿವಾಜ್ಞೆಯನ್ನು ಹೊರಡಿಸಿ ರಾಜ್ಯಮಟ್ಟದಲ್ಲಿ ಎಂಎಸ್‍ಪಿ ಕಾಯ್ದೆ ಜಾರಿಗೆ ತರಬೇಕು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಈ ಕಾಯ್ದೆಯನ್ನು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿ ಮಾಡಿದ ಖರೀದಿದಾರರಿಗೆ ಒಂದು ವರ್ಷ ಜೈಲು, ದಂಡ ಹಾಕಬೇಕು ಹಾಗೂ ಪರವಾನಿಗೆ ರದ್ದು ಮಾಡಬೇಕು. ರಾಜ್ಯ ಸರ್ಕಾರ ಬೋನಸ್ ರೂಪದಲ್ಲಿ ಸಹಾಯಧನ ಸೇರಿಸಿ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿರಂಜೀವಿ ಮಾತನಾಡಿ, ಸರಕಾರಗಳು ಯಾವುದೇ ಮಾನದಂಡಗಳಿಲ್ಲದೇ ಎಲ್ಲಾ ರೈತರಿಗೂ ಸಮಾನ ಅವಕಾಶ ನೀಡಬೇಕು. ಕನಿಷ್ಠ ಬೆಂಬಲ ಬೆಲೆಗೆ ರಾಜ್ಯ ಮಟ್ಟದಲ್ಲಿ ಕಾಯ್ದೆಗಳನ್ನು ಜಾರಿಗೆ ತರಬೇಕು, ಎಲ್ಲಾ ಬೆಳೆಗಳಿಗೆ ತಕ್ಷಣಕ್ಕೆ ವೈಜ್ಞಾನಿಕ ಬೆಳೆ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಬೈರಾನಾಯಕನಹಳ್ಳಿ ರಾಜು, ಮುಖಂಡರಾದ ಎಂ. ಶರಣಪ್ಪ, ಸಹದೇವರೆಡ್ಡಿ, ಡಿ ತಿಪ್ಪೇಸ್ವಾಮಿ, ಅಂಜಿನಪ್ಪ, ಚಿಕ್ಕಬನ್ನಿಹಟ್ಟಿ ವೀರೇಶ್, ಚಂದ್ರಪ್ಪ, ಕಾನನಕಟ್ಟೆ ತಿಪ್ಪೇಸ್ವಾಮಿ, ದೊಣೆಹಳ್ಳಿ ತಿಪ್ಪಣ್ಣ, ಮೇಘನಾಥ, ಗಂಗಾಧರಪ್ಪ ಸೇರಿದಂತೆ ಮತ್ತಿತರಿದ್ದರು.