ಸುದ್ದಿವಿಜಯ, ಜಗಳೂರು: ಕೃಷಿ ಇಲಾಖೆಯಿಂದ ಪರವಾನಿಗೆ ಪಡೆಯದೇ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಪಟ್ಟಣದ ಕಿಸಾನ್ ಆಗ್ರೋ ರಸಗೊಬ್ಬರ ಅಂಗಡಿ ಮೇಲೆ ಜಿಲ್ಲಾ ಕೃಷಿ ಇಲಾಖೆ ಜಾರಿದಳದ ಅಧಿಕಾರಿಗಳು ಸೋಮವಾರ ದಾಳಿ ಮಾಡಿ 2.15 ಲಕ್ಷ ರೂ ಮೌಲ್ಯದ ರಸಗೊಬ್ಬರವನ್ನು ಸೀಜ್ ಮಾಡಿದ್ದಾರೆ.
ಪಟ್ಟಣದ ಕಲ್ಲೇಶ್ವರ ಲಾಡ್ಜ್ ಎದುರು ಇರುವ ಸಿ.ಎಚ್.ಜಯ್ಯಪ್ಪ ಎಂಬುವರಿಗೆ ಸೇರಿದ ಕಿಸಾನ್ ಆಗ್ರೋ ರಸಗೊಬ್ಬರ ಮಾರಾಟ ಮಳಿಗೆ ಮೇಲೆ ದಾವಣಗೆರೆ ಕೃಷಿ ಇಲಾಖೆಯ ವಿಜಿಲೆನ್ಸ್ ವಿಭಾಗದ ಅಧಿಕಾರಿಗಳಾದ ವಿ.ಪಿ.ಗೋವರ್ಧನ್, ಬಿ.ವಿ.ಶ್ರೀನಿವಾಸುಲು ಮತ್ತು ತಾಲೂಕು ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್

ನೇತೃತ್ವದ ಅಧಿಕಾರಿಗಳ ತಂಡ ದಾಳಿ ಮಾಡಿದಾಗ ಪರವಾನಿಗೆ ಪಡೆಯದೇ ರಸಗೊಬ್ಬರಗಳನ್ನು ಮಾರಾಟ ಮಾಡುತ್ತಿದ್ದ ಸರಕನ್ನು ಜಪ್ತಿ ಮಾಡಿದ್ದಾರೆ.
3-ಎಕ್ಸ್ ಫೆಸ್ಪಾಲಿಟಿ, ಬಯೋ-20, ಅಲ್ವಿನ್ ಜೆಲ್, ಆಲ್ವಿನ್ ಗೋಲ್ಡ್ ಸೇರಿದಂತೆ ಅನೇಕ ಬಗೆಯ ರಸಗೊಬ್ಬರಗಳನ್ನು ಮಾರಾಟ ಮಾಡುತ್ತಿದ್ದು ಸೂಕ್ತ ದಾಖಲೆಗಳಿಲ್ಲದ ಕಾರಣ ರಸಗೊಬ್ಬರ ನಿಯಂತ್ರಣ ಕಾಯ್ದೆ 1985ರ ಕಾಲಂ 8/9 ರ ನಿಯಮಗಳ ಅಡಿಯಲ್ಲಿ ಮಾಲೀಕರ ಮೇಲೆ ಕೇಸ್ ದಾಖಲಿಸಿ 2.15 ಲಕ್ಷ ರೂ ಮೌಲ್ಯದ ರಸಗೊಬ್ಬರವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.