ಜಗಳೂರು: ಹಣದ ಬದಲಿಗೆ ಅಕ್ಕಿ ಕೊಡಿ ಸ್ವಾಮಿ…

Suddivijaya
Suddivijaya February 2, 2024
Updated 2024/02/02 at 2:19 PM

ಸುದ್ದಿವಿಜಯ, ಜಗಳೂರು: ರಾಜ್ಯ ಸರಕಾರ ಅನುಷ್ಠಾನಕ್ಕೆ ತಂದಿರುವ ಐದು ಗ್ಯಾರಂಟಿಗಳಲ್ಲಿ ಅನ್ನಭಾಗ್ಯದ ಐದು ಕೆಜಿ ಅಕ್ಕಿ ಬದಲಿಗೆ ಹಣ ಕೊಡುತ್ತಿರುವುದರಿಂದ ನನ್ನ ಗಂಡ ಅದನ್ನು ಬಳಸಿಕೊಳ್ಳುತ್ತಿದ್ದಾರೆ.

ದಯಮಾಡಿ ಹಣದ ಬದಲಿಗೆ ಅಕ್ಕಿ ಕೊಟ್ಟರೆ ಮನೆ ಮಂದಿಯಲ್ಲಾ ಹೊಟ್ಟೆ ತುಂಬಾ ಊಟ ಮಾಡುತ್ತೇವೆ ಸ್ವಾಮಿ ಎಂದು ಪಟ್ಟಣದ ಗುರುದೇವಮ್ಮ ಎಂಬ ಮಹಿಳೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ತಾಲೂಕು ಆಡಳಿತ, ತಾಪಂ ಹಾಗೂ ಪಪಂ ಸಂಯುಕ್ತಾಶ್ರಯದಲ್ಲಿ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ತಾಲೂಕು ಮಟ್ಟದ ಸಮಾವೇಶ ಉದ್ಘಾಟನೆ ನಂತರ ಫಲಾನುಭವಿಗಳ ಅನಿಸಿಕೆಯಲ್ಲಿ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾಗೆ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಐದು ಕೆಜಿ ಅಕ್ಕಿ ಬದಲಿಗೆ ರಾಜ್ಯ ಸರಕಾರ 172 ರೂ ಹಣ ಹಾಕುತ್ತಿದೆ. ಆ ಹಣ ನನ್ನ ಗಂಡನ ಅಕೌಂಟ್‍ಗೆ ಜಮೆಯಾಗುತ್ತಿದೆ. ಕೇಳಿದರೆ ‘ಗೃಹಲಕ್ಷ್ಮಿ ಹಣ 2000 ನಿನಗೆ ಅಕ್ಕಿ ದುಡ್ಡು ನನಗೆ’ ಎಂದು ಹೇಳುತ್ತಾರೆ. ಅದರ ಬದಲು ಐದು ಕೆಜಿ ಅಕ್ಕಿ ಕೊಟ್ಟರೆ ಮನೆ ಮಂದಿಯಲ್ಲ ಊಟ ಮಾಡುತ್ತೇವೆ ಎಂದರು.ಜಗಳೂರು ಪಟ್ಟಣದ ಗುರುವಾರ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ತಾಲೂಕು ಮಟ್ಟದ ಸಮಾವೇಶವನ್ನು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಉದ್ಘಾಟಿಸಿದರು.ಜಗಳೂರು ಪಟ್ಟಣದ ಗುರುವಾರ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ತಾಲೂಕು ಮಟ್ಟದ ಸಮಾವೇಶವನ್ನು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಉದ್ಘಾಟಿಸಿದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ಸರಕಾರದ ಆದೇಶದಂತೆ ನಾವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸರಕಾರ ಹಣದ ಬದಲಿಗೆ ಅಕ್ಕಿ ಕೊಡಲು ನಿರ್ದೇಶನ ನೀಡಿದರೆ ಅದನ್ನು ಪಾಲಿಸುತ್ತೇವೆ.

ಐದು ಗ್ಯಾರಂಟಿಗಳಿಂದ ಸಾಮಾಜಿಕ ಭದ್ರತೆ, ಮಹಿಳಾ ಸಬಲೀಕರಣ ಮತ್ತು ನಿರುದ್ಯೋಗಿ ಯುವಕರಿಗೆ ಹೆಚ್ಚಿನ ಅನುಕೂಲವಾಗಿದೆ. ತಾಲೂಕಿನಲ್ಲಿ ಯುವನಿಧಿ ಯೋಜನೆಯನ್ನು ಯುವಕರು ಅಷ್ಟಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದರು.

ತಾಲೂಕಿನಲ್ಲಿ ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮೀ, ಯುವ ನಿಧಿಯನ್ನು ಸಮರ್ಪಕವಾಗಿ ಜಾರಿಗೆ ತಂದಿದ್ದೇವೆ. ಸರಕಾರ ಮಾತು ಉಳಿಸಿಕೊಂಡಿದೆ. ಏನೇ ಸಮಸ್ಯೆಯಾದರೂ ಆಯಾ ಇಲಾಖೆಯ ಗಮನಕ್ಕೆ ತಂದು ಸದುಪಯೋಗ ಪಡೆದುಕೊಳ್ಳಿ ಎಂದರು.

ಬೆಸ್ಕಾಂ ಜೆಇ ಮಧುಸೂದನ್ ಮಾತನಾಡಿ, ಗೃಹ ಜ್ಯೋತಿ ಯೋಜನೆ ಶೇ 80 ರಷ್ಟು ತಾಲೂಕಿನಲ್ಲಿ ಯಶಸ್ವಿಯಾಗಿದೆ ಎಂದರು.

ಸಿಡಿಪಿಒ ಬೀರೇಂದ್ರಕುಮಾರ್ ಮಾತನಾಡಿ, ತಾಲೂಕಿನಲ್ಲಿ 40 ಸಾವಿರ ಮಹಿಳೆಯರಿಗೆ 2 ಸಾವಿರ ರೂ ಹಣ ವರ್ಗಾವಣೆಯಾಗುತ್ತಿದೆ. 800 ಮಹಿಳೆಯರಿಗೆ ತಾಂತ್ರಿಕ ತೊಂದರೆಯಿಂದ ಆಗಿಲ್ಲ. ಫಲಾನುಭವಿಗಳಿಗೆ ತೊಂದರೆಯಾದರೆ ತಕ್ಷಣವೇ ಇಲಾಖೆಯನ್ನು ಸಂಪರ್ಕಿಸಿ ಎಂದರು.

ಆಹಾರ ಇಲಾಖೆ ಅಧಿಕಾರಿ ಅಜ್ಜಪ್ಪ ಪತ್ರಿ ಮಾತನಾಡಿ, ಶೇ.98 ರಷ್ಟು ಅನ್ನಭಾಗ್ಯ ಅಕ್ಕಿ ಫಲಾನುಭವಿಗಳಿಗೆ ತಲುಪಿದೆ ಎಂದರು.
ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಸದಸ್ಯರಾದ ರಮೇಶ್‍ರೆಡ್ಡಿ, ರವಿಕುಮಾರ್, ಲುಕ್ಮಾನ್ ಉಲ್ಲಾಖಾನ್, ಅಬ್ದುಲ್ ರಜಾಕ್ ನದಾಫ್ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಂಜುಳಾ ಸೇರಿದಂತೆ ಅನೇಕ ಮಹಿಳೆಯರು ಯೋಜನೆಗಳ ಬಗ್ಗೆ ಅನುಭವ ಹಂಚಿಕೊಂಡರು. ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಕೆ.ಬಿ.ಲಿಂಗರಾಜು,

ತಾಪಂ ವ್ಯವಸ್ಥಾಪಕ ರವಿಕುಮಾರ್, ಜೆ.ಪಿ.ರವಿಕುಮಾರ್, ಹರೀಶ್, ಮಹಮದ್ ಅಲಿ, ನಾಗೇಂದ್ರಪ್ಪ, ಸಾಮಾಜಿ ಅರಣ್ಯ ಇಲಾಖೆ ಸಹಾಯ ನಿರ್ದೇಶಕ ಮಹೇಶ್ವರಪ್ಪ, ನ್ಯಾಯಬೆಲೆ ಅಂಗಡಿ ಮಾಲೀಕರು ಸೇರಿದಂತೆ ಅನೇಕರು ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!