suddivijayanews05/07/2024
ಸುದ್ದಿವಿಜಯ, ಜಗಳೂರು: ತಾಲೂಕಿನ ಗೌಡಗೊಂಡನಹಳ್ಳಿ ಗ್ರಾಮದ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿರುವುದನ್ನು ಖಂಡಿಸಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಕಚೇರಿ ಮುಂಭಾಗ ಜಮಾಯಿಸಿದ್ದ ರೈತರು ಮಳೆಯನ್ನು ಲೆಕ್ಕಿಸದೇ ಜಿಟಿ ಜಿಟಿ ಹನಿಯಲ್ಲೂ ಕುಳಿತು ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗೌಡಗೊಂಡನಹಳ್ಳಿ ಅರಣ್ಯ ಪ್ರದೇಶದ ಸ.ನಂ 51, 52, 53 ಸರ್ಕಾರಿ ಭೂಮಿಯಲ್ಲಿ ರೈತರು ಸುಮಾರು 40 ವರ್ಷಗಳಿಂದಲೂ ಸಾಗುವಳಿ ಮಾಡುತ್ತಾ ವರ್ಷವಿಡಿ ಜೀವನ ನಡೆಸುತ್ತಿದ್ದಾರೆ.
ಅಂದಿನಿಂದಲೂ ಇಂದಿನವರೆಗೂ ಸಾಧೀನಾನುಭವದಲ್ಲಿರುವ ಜಮೀನುಗಳನ್ನು ಸಕ್ರಿಯಗೊಳಿಸಿ ಹಕ್ಕುಪತ್ರ ನೀಡುವಂತೆ ಈಗಾಗಲೇ ತಾಲೂಕು ಕಚೇರಿಗೆ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಿರುವುದನ್ನು ಸಕ್ರಮೀಕರಣಗೊಳಿಸಿ ಕೊಡಲು ಬುಡಕಟ್ಟ ವ್ಯವಹಾರಗಳ ಮಂತ್ರಾಲಯ ನಮೂನೆ-ಎ ಅರಣ್ಯ ಭೂಮಿಯ ಹಕ್ಕುಗಳ ಕ್ಲೇಮಿನ ನಮೂನೆಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ರೈತರು ದೂರಿದರು.
ಸರಕಾರಿ ಭೂಮಿಯನ್ನೇ ನಂಬಿಕೊಂಡು ಹತ್ತಾರು ಬಡ ರೈತ ಕುಟುಂಬಗಳು ಬದುಕುತ್ತಿವೆ. ಆದರೆ ಅರಣ್ಯಾಧಿಕಾರಿಗಳು ಒಕ್ಕಲೆಬ್ಬಿಸಿ ರೈತರಿಗೆ ನೋಟಿಸ್ ನೀಡಿ ಅನ್ಯಾಯ ಮಾಡಲು ಮುಂದಾಗಿದ್ದಾರೆ. ಜನಸಂಖ್ಯೆ ಬೆಳೆದಂತೆಲ್ಲಾ ಒಂದು ಇಡಿ ಭೂಮಿ ಬೇಡಿಕೆ ಹೆಚ್ಚಾಗಿದೆ.
ಇದೀಗ ಉಳುಮೆ ಮಾಡುವುದನ್ನು ನಿಲ್ಲಿಸಿ ಬೀದಿಗೆ ತಳ್ಳುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ ಎಂದು ರೈತ ಸಂಘದ ತಾಲೂಕು ಪ್ರ. ಕಾರ್ಯದರ್ಶಿಬೈರನಾಯಕನಹಳ್ಳಿ ರಾಜು ಎಚ್ಚರಿಕೆ ನೀಡಿದರು.
ಅರಣ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ, ಅರಣ್ಯ ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯ, ಇಲಾಖೆಯ ಆದೇಶದಂತೆ ಕೆಲಸ ಮಾಡುತ್ತೇವೆ, ಯಾರಿಗೂ ನೋವುಂಟು ಮಾಡುವುದು ನಮ್ಮ ಉದ್ದೇಶವಲ್ಲ,
ಅರಣ್ಯದ ವ್ಯಾಪ್ತಿಯ ಜಾಗ ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ತಾಲೂಕಾಧ್ಯಕ್ಷ ಕಸವ್ವನಹಳ್ಳಿ ನಾಗರಾಜ್, ಚಿಕ್ಕ ಉಜ್ಜಯಿನಿ ಕುಮಾರ್, ಹನುಮಂತಪ್ಪಮ ಜ್ಯೀತಿಕುಮಾರ್, ಪರಶುರಾಮ, ಕೆಂಚಮ್ಮ, ಕರಿಬಸಮ್ಮ, ಬಸಮ್ಮ, ಕಮಲಮ್ಮ, ಜಿಲ್ಲಾ ಕಾರ್ಯದರ್ಶಿ ಸತೀಶ್ ಸೇರಿದಂತೆ ಮತ್ತಿತರರಿದ್ದರು.