ಸುದ್ದಿವಿಜಯ, ಜಗಳೂರು: ನಮ್ಮ ಹಿರಿಯರು ಮೊದಲು ರಾಸಾಯನಿಕ ಗೊಬ್ಬರಗಳಿಲ್ಲದೇ ಕೊಟ್ಟಗೆ ಗೊಬ್ಬರಗಳಲ್ಲಿ ನವಣೆ ಬೆಳೆದ ಉಣ್ಣುತ್ತಿದ್ದರು. ಆದರೆ ಈಗ ನವಣೆ ಸಿರಿಧಾನ್ಯವಾಗಿದೆ. ನವಣೆ ಬೆಳೆಯುವ ರೈತರೂ ಕಡಿಮೆಯಾಗಿದ್ದಾರೆ ಎಂದು ಕೆವಿಕೆ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಕಲ್ಲೇದೇವರಪುರ ಗ್ರಾಮದಲ್ಲಿ ಗುರುವಾರ ನವಣೆ ಅಧಿಕ ಇಳುವರಿ ಕೊಡುವ ತಳಿಯಾದ ಡಿಎಚ್‍ಎಫ್‍ಟಿ 109-3 ಬೆಳೆಯ ಬಗ್ಗೆ ರೈತರಿಗೆ ಪ್ರಾತಕ್ಷತೆ ನೀಡಿ ನವಣೆ ಬೆಳೆ ಲಾಭದ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಟ್ಟರು.
ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಉಚಿತವಾಗಿ ನವಣೆ ಬೆಳೆಯಲು ರೈತರಿಗೆ ಬಿತ್ತನೆ ಬೀಜ ವಿತರಿಸುತ್ತಿದ್ದೇವೆ. ನವಣೆ ಬೆಳೆಯ ಸಮಗ್ರ ಬೆಳೆ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಮಾಡಿದರೆ ಅಧಿಕ ಇಳುವರಿ ಪಡೆಯಬಹುದು.
ಮಳೆ ತಡವಾಗಿರುವುದರಿಂದ ಸಿರಿ ಧಾನ್ಯಗಳನ್ನು ಬೆಳೆಯುವುದು ಸೂಕ್ತ. ನವಣೆ ಬೆಳೆಯ ಬಿತ್ತನೆ ಬೀಜವನ್ನು ಎಕರೆಗೆ 4 ಕೆಜಿಯಂತೆ ಸಂಯುಕ್ತ ಕೂರಿಗೆ ಸಹಾಯದಿಂದ ಬಿತ್ತನೆ ಮಾಡಬೇಕು. ಜೈವಿಕ ಗೊಬ್ಬರಗಳಾದ ಅಜಟೋಬ್ಯಾಕ್ಟರ್ ಹಾಗೂ ರಂಜಕ ಕರಗಿಸುವ ಗೊಬ್ಬರವನ್ನು ಬೀಜೋಪಚಾರಕ್ಕೆ ಎಕರೆಗೆ 500 ಗ್ರಾಮ ನಂತೆ ಬಳಸಬೇಕು. ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಶಿಫಾರಸ್ಸು ಮಾಡಿದ ರಸ ಗೊಬ್ಬರವನ್ನು ಸುಮಾರು 30 ರಷ್ಟುನ್ನು ಉಳಿಸಬಹುದು ಎಂದರು.
ಸಸ್ಯ ಸಂರಕ್ಷಣಾ ತಜ್ಞ ಡಾ.ಟಿ.ಜಿ. ಅವಿನಾಶ್ ಮಾತನಾಡಿ, ಸಿರಿ ಧಾನ್ಯಗಳನ್ನು ಬೆಳೆಯುವುದರಿಂದ ಮಣ್ಣಿನ ಆರೋಗ್ಯ ಹೆಚ್ಚುವುದರ ಜೊತೆಗೆ ಮನುಷ್ಯನ ಆರೋಗ್ಯವು ಹೆಚ್ಚುತ್ತದೆ ಎಂದರು. ಆಯ್ದ ರೈತರಿಗೆ ಬಿತ್ತನೆ ಬೀಜ ಹಾಗೂ ಜೈವಿಕ ಗೊಬ್ಬರಗಳನ್ನು ಪ್ರಾತ್ಯಕ್ಷಿಕೆ ಅಂಗವಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಬಿದರಕೆರೆ ಎಫ್‍ಪಿಒ ನಿರ್ದೇಶಕ ಕೆ.ಕೃಷ್ಣಮೂರ್ತಿ ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು.