ಸುದ್ದಿವಿಜಯ, ಜಗಳೂರು: ನಮ್ಮ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶ್ರೀಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ ಅದರಂತೆ ನಮ್ಮ ತಾಲೂಕಿನ ಎಲ್ಲ ಮಹಿಳೆಯರು ರಾಜ್ಯಾದ್ಯಂತ ನಗರ ಸಾರಿಗೆ, ಸಾಮಾನ್ಯ ಸಾರಿಗೆ ಹಾಗೂ ವೇಗದೂತ ಸರಕಾರಿ ಬಸ್ಸುಗಳಲ್ಲಿ ಉಚಿತವಾಗಿ ಸಂಚರಿಸಬಹುದು ಎಂದು ಶಾಸಕ ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಮಹಾತ್ಮಾ ಗಾಂಧಿ ಬಸ್ ನಿಲ್ದಾಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದಾವಣಗೆರೆ ವಿಭಾಗ ವತಿಯಿಂದ ವಿದ್ಯುಕ್ತವಾಗಿ ಮಹಿಳೆಯರಿಗೆ ಶೂನ್ಯ ಟಿಕೆಟ್ ಹರಿಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ಬಾರಿಗೆ ಸಿಎಂ ಆದ ಮೇಲೆ ಮೊದಲನೇ ಯೋಜನೆಯನ್ನು ಜೂನ್,11 ರಂದು ಚಾಲನೆ ನೀಡಿದ್ದಾರೆ. ಅದರಂತೆ ದಾವಣಗೆರೆ ನಗರದಲ್ಲಿ ಜಿಲ್ಲಾ ಮಂತ್ರಿ ಎಸ್.ಎಸ್.ಮಲ್ಲಿಕಾರ್ಜುನ್ ಚಾಲನೆ ನೀಡಿದ್ದಾರೆ. ಇನ್ಮುಂದೆ ಮಹಿಳೆಯರು ಸ್ವತಂತ್ರ್ಯವಾಗಿ ತವರುಮನೆ, ಗಂಡನ ಮನೆ, ಸಂಬಂಧಿಕರ ಮನೆಗಳಿಗೆ ಉಚಿತವಾಗಿ ಸಂಚರಿಸಬಹುದು.
ನಮ್ಮ ಸರಕಾರದ ಕನಸು ನನಸಾಗಿದೆ. ಜಗಳೂರು ಪಟ್ಟಣದಲ್ಲಿ ಕೆಎಎಸ್‍ಆರ್‍ಟಿಸಿ ಡಿಪೋ ಆಗಬೇಕು ಎಂಬುದು ಜನರ ಬೇಡಿಕೆಯಾಗಿದೆ. ಅತಿ ಶೀಘ್ರದಲ್ಲೇ ನೆರವೇರಲಿದೆ. ಅಲ್ಲದೇ ಇದ್ಯಾರ್ಥಿಗಳಿಗೆ ಅನುವಾಗಲು ಉಚಿತ ಸಾರಿಗೆ ವ್ಯವಸ್ಥೆ ಯೋಜನೆ ಜಾರಿಗೆ ಚಿಂತನೆ ಮಾಡಲಾಗುತ್ತಿದೆ.ಜಗಳೂರು ಪಟ್ಟಣಕ್ಕೆ ಬೆಂಗಳೂರಿನಿಂದ ನೇರವಾದ ಸಾರಿಗೆ ಇಲ್ಲ. ಆದಷ್ಟು ಶೀಘ್ರವೇ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ, ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಸಿಪಿಐ ಶ್ರೀನಿವಾಸ್ ರಾವ್, ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್‍ರಾಜ್ ಪಟೇಲ್, ರಾಜ್ಯ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಕೆಎಸ್‍ಆರ್‍ಟಿಸಿ ವಿಭಾಗೀಯ ಅಧಿಕಾರಿ ಸಿ.ಇ.ಶ್ರೀನಿವಾಸ್ ಮೂರ್ತಿ ಹಾಗೂ ಆಡಳಿತ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.