ಸುದ್ದಿವಿಜಯ, ಜಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಪರವಿದ್ದಾರೆ. ರೈತರ ಆಶೋತ್ತರಗಳಿಗೆ ಸ್ಪಂದಿಸಿ ಎಂದು ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಧಿಕಾರಿಗಳು ಸ್ಪಂದಿಸದೇ ಇದ್ದರೆ ಅಂತಹವರ ವಿರುದ್ಧ ನಿರ್ಧಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಸೂಚ್ಯವಾಗಿ ಹೇಳಿದರು.
ಶಾಸಕರಾದ ಮೊದಲ ಭಾರಿ ಪಟ್ಟಣದ ತೋಟಗಾರಿಕೆ ಇಲಾಖೆಯಲ್ಲಿ ಫಲಾನುಭವಿ ರೈತರಿಗೆ ರಸಗೊಬ್ಬರ ವಿತರಣೆ ಮಾಡಿ ಮಾತನಾಡಿದ ಅವರು, ಒಳ್ಳೆಯ ಕೆಲಸ ಮಾಡಿದರೆ ಅಧಿಕಾರಿಗಳಿಗೆ ಅಭಿನಂದಿಸುತ್ತೇವೆ. ಆದರೆ ಅಧಿಕಾರಿ ರೈತರ ಜೊತೆ ಚಲ್ಲಾಟವಾಡಿದರೆ ಸನ್ಮಾನ ಮಾಡುವ ಕೈಗಳು ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.
ಮಳೆಯಿಂದ ಆಗಿರುವ ನಷ್ಟದ ಬಗ್ಗೆ ರೈತರಿಂದ ಮಾಹಿತಿ ಪಡೆದು ಪರಿಹಾರ ಒದಗಿಸಿ. ದಾವಣಗೆರೆ ಜಿಲ್ಲೆಯ ಉಸ್ತುವಾರಿ ಹಾಗೂ ತೋಟಗಾರಿಕೆ ಇಲಾಖೆ ಸಚಿವರು ಎಸ್.ಎಸ್.ಮಲ್ಲಿಕಾರ್ಜುನ್ ಅವರಾಗಿದ್ದು ಎಲ್ಲ ಸೌಲಭ್ಯ ಒದಗಿಸಿಕೊಡುತ್ತೇನೆ. ಸಮಯಕ್ಕೆ ಸರಿಯಾಗಿ ರೈತರಿಗೆ ಸರಕಾರದ ಸೌಲಭ್ಯಗಳು ಸಿಗಬೇಕು. ಇಲಾಖೆಯಲ್ಲಿ ಬೇರೆಯವರ ಹಸ್ತಕ್ಷೇಪ ಮಾಡದೇ ಸವಲತ್ತು ಕುಂಠಿತವಾದರೆ ಸಹಿಸುವುದಿಲ್ಲ.
ಹನಿ ನೀರಾವರಿ ಯೋಜನೆಯಲ್ಲಿ ಹೊರಗಿನವರ ಹಸ್ತಕ್ಷೇಪವಿದೆ ಎಂದು ಕೇಳಿಪಟ್ಟಿದ್ದೇನೆ. ನಮ್ಮ ಗಮನಕ್ಕೆ ಬಾರದೇ ಏನೂ ಮಾಡುವಂತಿಲ್ಲ. ನಾನೇ ಪ್ರಗತಿ ಪರಿಶೀಲನೆ ಮಾಡುತ್ತೇನೆ. ನಮ್ಮ ಉದ್ದೇಶ ಫಲಾನುಭವಿಗಳಿಗೆ ಸರಕಾರದ ಸೌಲಭ್ಯಗಳು ದೊರಕಬೇಕು ಎಂದಾಗಿದೆ.
ಹಿಂದೆ ನೀವು ಏನು ಮಾಡಿದ್ದೀರಿ ಅದು ನನ್ನ ಗಮನಕ್ಕೆ ಬಂದಿಲ್ಲ. ನೀವು ಸೋಮಾರಿಯಾದರೆ, ಮೈಮರೆತರೆ ನಿಮ್ಮ ಜಾಗವನ್ನು ನೀವು ನೋಡಿಕೊಳ್ಳಿ. ವ್ಯವಸ್ಥೆ ಜಿಡ್ಡುಗಟ್ಟಿದೆ ಅದನ್ನು ಸರಿ ಮಾಡುತ್ತೇನೆ. ನಾನು ಹೇಗೆ ಬರುತ್ತೇನೆ, ಯಾವಾಗ ಬರುತ್ತೇನೆ ಗೊತ್ತಿಲ್ಲ. ದಿನದ 24 ಗಂಟೆಯೂ ಕೆಲಸ ಮಾಡಲು ಸಿದ್ಧನಾಗಿದ್ದೇನೆ ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಆರ್.ವೆಂಕಟೇಶ್ ಮೂರ್ತಿ, , ಸಹಾಯಕ ತೋಟಗಾರಿಕಾ ನಿರ್ದೇಶಕ ಹಾಗೂ ತಾಂತ್ರಿಕ ಸಂಯೋಜ ಅರುಣ್ ಕುಮಾರ್, ಸಹಾಯಕ ತೋಟಗಾರಿಕಾ ಅಧಿಕಾರಿಗಳಾದ ಎಲ್.ವೆಂಕಟೇಶ್ವರನಾಯ್ಕ್, ಬೀಳಿಚೋಡು ಹೋಬಳಿ ಅಧಿಕಾರಿ ಪ್ರಸನ್ನಕುಮಾರ್, ಸೊಕ್ಕೆ ಹೋಬಳಿಯ ಅಧಿಕಾರಿ ಸುನಿಲ್ ಮತ್ತು ರಮೇಶ್ ಇದ್ದರು. ಇದೇ ವೇಳೆ ಕಟ್ಟಿಗೆಹಳ್ಳಿ, ನಿಬಗೂರು, ಸೇರಿದಂತೆ ಅನೇಕ ರೈತರಿಗೆ ರಸಗೊಬ್ಬರ ವಿತರಣೆ ಮಾಡಲಾಯಿತು.