ಸುದ್ದಿವಿಜಯ, ಜಗಳೂರು: ಜಿಲ್ಲೆಯ ಆರು ಗ್ರಾಮ ಪಂಚಾಯಿತಿಗಳು 2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ತಾಲೂಕಿನ ಗಡಿ ಗ್ರಾಪಂ ಆಗಿರುವ ಸೊಕ್ಕೆ ಆಯ್ಕೆಯಾಗಿದ್ದು ಸಂತೋಷ ತಂದಿದೆ ಎಂದು ತಾಲೂಕು ಪಂಚಾಯಿತಿ ಇಓ ಕೆ.ಟಿ.ಕರಿಬಸಪ್ಪ ಹೇಳಿದರು.
ಸುದ್ದಿವಿಜಯ ವೆಬ್ ನ್ಯೂಸ್ ಜೊತೆ ಮಾತನಾಡಿದ ಅವರು, ಸೊಕ್ಕೆ ಗ್ರಾಮ ಪಂಚಾಯಿತಿ 2013-14 ಮತ್ತು 2015 ಹಾಗೂ 2022-23ನೇ ಸಾಲಿನಲ್ಲಿ ಒಟ್ಟು ಮೂರು ಬಾರಿ ಆಯ್ಕೆಯಾಗಿದೆ.ಇದಕ್ಕೆ ಕಾರಣ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರ ದೂರದೃಷ್ಟಿ ಅಭಿವೃದ್ಧಿಯ ಕಾರ್ಯಗಳಾಗಿವೆ. ಈ ಹಿಂದೆ ಅಧ್ಯಕ್ಷರಾಗಿದ್ದ ಸ್ವಾತಿ ತಿಪ್ಪೇಸ್ವಾಮಿ ಮತ್ತು ಈಗಿನ ಅಧ್ಯಕ್ಷರಾದ ಎಲ್.ತಿರುಮಲಾ ಅವರು ಆಡಳಿತ ವ್ಯವಸ್ಥೆಯಲ್ಲಿ ಅಮೂಲಾಗ್ರವಾಗಿ ಬದಲಾವಣೆ ತಂದಿದ್ದಾರೆ.
ಮಹಾತ್ಮಾ ಗಾಂಧೀಜಿ ಅವರ ಕನಸಿನ ಗಾಮ ಸ್ವರಾಜ್ಯದ ಕಲ್ಪನೆಯ ಉತ್ತಮ ಆಡಳಿತ ನಿರ್ವಹಣೆ, ದಾಖಲಾತಿ ನಿರ್ವಹಣೆ, ಸಮಗ್ರ ಪಂಚಾಯಿತಿ ಅಭಿವೃದ್ಧಿ, ಶುದ್ಧ ಕುಡಿಯುವ ನೀರು, ಸ್ವಚ್ಛತೆ, ಡಿಜಿಟಲ್ ಗ್ರಾಂಥಾಲಯ, ಗ್ರಾಪಂ ಸೇವೆಗಳ ನಿರ್ವಹಣೆ, ನರೇಗಾ, ಬಹಿರ್ದೆಸೆ ಮುಕ್ತ ಗ್ರಾಮ,
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಸ್ವಚ್ಛತೆ, ಸೋಲಾರ್ ಆಧಾರಿತ ವಿದ್ಯುತ್ ಬಳಕೆ, ಸಿಸಿ ಕ್ಯಾಮರಾ ಅಳವಡಿಕೆ, ಪಂಚಾಯಿತಿ ವ್ಯಾಪ್ತಿಯಲ್ಲಿ ನೈರ್ಮಲ್ಯ ಕಾಪಾಡುವಿಕೆ, ನರೇಗಾ ಫಲಾನುಭವಿಗಳ ಕುಟುಂಬದ ಎಲ್ಲ ಸದಸ್ಯರಿಗೂ ಬ್ಯಾಂಕ್ ಖಾತೆ ಮಾಡಿಸುವ ಜೊತೆಗೆ ಖಾತೆಗೆ ಆಧಾರ್ ಜೋಡಣೆ ಸೇರಿ ಹಲವು ಮಾನದಂಡಗಳಿದ್ದು ಈ ಎಲ್ಲಾ ಮಾನದಂಡಗಳ ಆಧಾರದ ಮೇಲೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಸೊಕ್ಕೆ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿಯಲ್ಲಿ ಸಾಕಷ್ಟು ಸುಧಾರಣೆ
ಸೊಕ್ಕೆ ಗ್ರಾಪಂ ಅಭಿವೃದ್ಧಿಯಲ್ಲಿ ಸಾಕಷ್ಟು ಮುಂದಿದೆ. ನಾನು ಅಧ್ಯಕ್ಷರಾಗಿದ್ದಾಗ ಗ್ರಾಮದಲ್ಲಿ ಡಿಜಿಟಲ್ ಗ್ರಾಂಥಾಲಯ, ಬಹಿರ್ದೆಸೆ ಮುಕ್ತ ಗ್ರಾಮ, ನರೇಗಾದಲ್ಲಿ ಸಾಕಷ್ಟು ಸುಧಾರಣೆ, ಆಡಳಿತ ನಿರ್ವಹಣೆಯಲ್ಲಿ ಸಾಕಷ್ಟು ಸುಧಾರಣೆ ತರಲು ಶ್ರಮಿಸಿದ್ದೆ. ಜಿಲ್ಲೆಯ ಗಡಿಗ್ರಾಮವಾಗಿರುವ ಸೊಕ್ಕೆಗೆ ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಸಂತೋಷ ತಂದಿದೆ ಎಂದು ಸಾಫ್ಟ್‍ವೇರ್ ಎಂಜಿನಿಯರ್ ಆಗಿರುವ ಮಾಜಿ ಅಧ್ಯಕ್ಷರಾದ ಸ್ವಾತಿ ತಿಪ್ಪೇಸ್ವಾಮಿ ಪ್ರತಿಕ್ರಿಯೆ ನೀಡಿದರು.
ಗ್ರಾಮ ಸ್ವರಾಜ್ಯದ ಕನಸು ನನಸು
ಗ್ರಾಮ ಸ್ವರಾಜ್ಯದ ಕಲ್ಪನೆ ಆಧಾರದ ಮೇಲೆ ಗಾಂಧಿ ಕಂಡ ಕನಸು ನನಸಾಗಿದೆ. ನಮ್ಮ ಗ್ರಾಪಂಗೆ 2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಬಂದಿರುವುದು ಸಂತೋಷ ತಂದಿದೆ. ಇದಕ್ಕೆ ಕಾರಣ ಪಿಡಿಒ ಎ.ಎಸ್.ಶಿವಕುಮಾರ್ ಹಾಗೂ ಸರ್ವ ಸದಸ್ಯರು ಕಾರಣ ಎಂದು ಪ್ರಸ್ತುತ ಅಧ್ಯಕ್ಷರಾಗಿರುವ ಎಲ್.ತಿರುಮಲ ಸಂತಸ ವ್ಯಕ್ತಪಡಿಸಿದರು.
ಸೌಲಭ್ಯಗಳು ಮನೆ ಬಾಗಲಿಗೆ
ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ಅಭಿವೃದ್ಧಿ ಮಾನದಂಡಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಸೌಲಭ್ಯಗಳು ಮನೆ ಬಾಗಲಿಗೆ ಒದಗಿಸುವ ಕಾರ್ಯ ಹಾಗೂ ಸಕಾಲದಲ್ಲಿ ಸರಕಾರಿ ಸೌಲಭ್ಯಗಳು ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸವಾಗಿದ್ದರಿಂದ ಮೂರನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ನಮ್ಮ ಪಂಚಾಯಿತಿ ಆಯ್ಕೆಯಾಗಿರುವು ಸಂತೋಷ ತಂದಿದೆ ಎಂದು ಪಿಡಿಒ ಎ.ಎಸ್.ಶಿವಕುಮಾರ್ ಪ್ರತಿಕಿಯಿಸಿದರು.