ಸುದ್ದಿವಿಜಯ, ಜಗಳೂರು: ಸಕ್ಸಸ್ ಫುಲ್ ಟೀಚರ್, ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರು ಅಂದರೆ ಅವರಿಗೆ ಹಲವಾರು ಉತ್ತಮ ಗುಣಗಳು ಇರುತ್ತವೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರ ಬೌದ್ಧಿಕತೆಗೆ ತಕ್ಕಂತೆ ಪಾಠ ಮಾಡುವ ಶಿಕ್ಷಕರನ್ನು ಕಂಡರೆ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಇಲ್ಲೊಂದು ಗ್ರಾಮದಲ್ಲಿ ಆದರ್ಶಕ ಶಿಕ್ಷಕರ ಶ್ರಮದಿಂದ ಕನ್ನಡ ಮಾಧ್ಯಮ ಶಾಲೆಗೆ ಹೊಸ ಕಳೆ ಬಂದಿದೆ.
ಹೌದು, ಪಟ್ಟಣದಿಂದ ಕೇವಲ 5 ಕಿ.ಮೀ ದೂರವಿರುವ ಗೋಗುದ್ದು ಗ್ರಾಮದಲ್ಲಿ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ನಿಜಕ್ಕೂ ಆಕರ್ಷಣೀಯ ಕೇಂದ್ರವಾಗಿದೆ. ಶೇ.90ರಷ್ಟು ಮುಸ್ಲಿಂ ಜನಾಂಗದವರೇ ಇರುವ ಈ ಗ್ರಾಮದಲ್ಲಿ ಉರ್ದು ಶಾಲೆ ಇದ್ದರೂ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕ್ಕಳು ಕಲಿಯುವಂತೆ ಆಕರ್ಷಣೆ ಸೃಷ್ಟಿಯಾಗಿದೆ.ಕಳೆದ ಎರಡು ವರ್ಷಗಳ ಹಿಂದೆ ಮೂಲ ಸೌಕರ್ಯಗಳ ಕೊರತೆಯಿಂದ ಮಕ್ಕಳು ಎರಡು ಕಿ.ಮೀ. ದೂರದ ಹನುಂತಾಪುರ ಗ್ರಾಮಕ್ಕೆ ಹೋಗುತ್ತಿದ್ದರು. ಮುಖ್ಯ ಶಿಕ್ಷಕರಾಗಿ ವರ್ಗಾವಣೆಯಾಗಿ ಬಂದ ಕುಬೇಂದ್ರಪ್ಪ ಮತ್ತು ಸಹ ಶಿಕ್ಷಕ ಪ್ರಹ್ಲಾದ್ ಅವರ ಶ್ರಮದಿಂದ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಸೋರುತ್ತಿದ್ದ ಶಾಲಾ ಕೊಠಡಿಗಳನ್ನು ಶಿಕ್ಷಕರೇ 80 ಸಾವಿರ ರೂ ಸ್ವಂತ ಹಣವನ್ನು ವಿನಿಯೋಗಿಸಿ ಅಭಿವೃದ್ಧಿ ಪಡಿಸಿದ್ದಾರೆ.
ಸೋರುತ್ತಿದ್ದ ಶಾಲೆಯ ಕೊಠಡಿಗಳನ್ನು ದುರಸ್ತಿ ಮಾಡಿಸಿ ಸುಣ್ಣಬಣ್ಣ ಬಳಿಸಿ ಮನೆ ಮನೆಗೆ ತೆರಳಿ ಮಕ್ಕಳು ಕನ್ನಡ ಮಾಧ್ಯಮ ಶಾಲೆಗೆ ಬರುವಂತೆ ಮಾಡುವಲ್ಲಿ ಶಿಕ್ಷಕರ ಶ್ರಮ ಅಪಾರವಾಗಿದೆ. ನಲಿ-ಕಲಿ, ಸ್ವಚ್ಛ ಪರಿಸರ, ಶುದ್ಧ ನೀರು, ಶಾಲೆಯ ಆವರಣದಲ್ಲೇ ತರಕಾರಿ ಬೆಳೆಸಿ ಮಧ್ಯಾಹ್ನದ ಬಿಸಿಯೂಟಕ್ಕೆ ಅಲ್ಲಿಯ ತರಕಾರಿಗಳನ್ನೇ ಬಳಸಲಾಗುತ್ತಿದೆ.
ರಾಷ್ಟ್ರೀಯ ಹಬ್ಬಗಳ ಮಹತ್ವವನ್ನು ಮಕ್ಕಳಿಗೆ ತಿಳಿಸುವಲ್ಲ ಶಿಕ್ಷಕರು ಹೆಚ್ಚು ಶ್ರಮಿಸುತ್ತಿದ್ದಾರೆ. ಮಕ್ಕಳು ಶಾಲೆಗೆ ಬರದಿದ್ದರೆ ಶಿಕ್ಷಕರೇ ಮಕ್ಕಳ ಮನೆಗಳಿಗೆ ಹೋಗಿ ಕರೆ ತಂದು ಶಿಕ್ಷಣ ಮಹತ್ವ ಏನೆಂದು ತಿಳಿಸುತ್ತಿದ್ದಾರೆ.
ಕನ್ನಡ ಮಾಧ್ಯಮ ಶಾಲೆಯ ಪಕ್ಕದಲ್ಲೇ ಸರಕಾರಿ ಉರ್ದು ಶಾಲೆ ಇದ್ದರೂ ಮಕ್ಕಳು ಸಂಖ್ಯೆ ಕೇವಲ 15ಕ್ಕೆ ಸೀಮಿತವಾಗಿದೆ. ಉರ್ದು ಶಾಲೆಯಲ್ಲಿ ನಾಲ್ಕು ಕೊಠಡಿಗಳು ಇವೆ. ಮೂರು ಜನ ಶಿಕ್ಷಕರಿದ್ದರೂ ಸಹ ಕನ್ನಡ ಮಾಧ್ಯಮ ಶಾಲೆಗೆ ಆಕರ್ಷಿತರಾಗಿರುವ ಮಕ್ಕಳು ಒಂದು ದಿನವೂ ಗೈರಾಗದೇ ಶಾಲೆಗೆ ಬಂದು ಶೈಕ್ಷಣಿಕ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುವುದು ಶಿಕ್ಷಕರ ಬದ್ಧತೆ, ಮಕ್ಕಳ ಮೇಲಿನ ಪ್ರೀತಿಯನ್ನು ತೋರಿಸುತ್ತಿದೆ.ಕಳೆದ ವರ್ಷ ಉರ್ದು ಶಾಲೆಯ ಅಭಿವೃದ್ಧಿಗೆ ಬಂದ 10 ಲಕ್ಷ ರೂ ಅನುದಾನ ವಾಪಾಸ್ ಸರಕಾರಕ್ಕೆ ಹೋಗಿತ್ತು. ಇದನ್ನು ಮನ ಗಂಡು ಮುಖ್ಯ ಶಿಕ್ಷಕ ಕುಬೇಂದ್ರಪ್ಪ ಅಧಿಕಾರಿಗಳ ಜೊತೆ ಮಾತನಾಡಿ ಕನ್ನಡ ಮಾಧ್ಯಮ ಶಾಲೆ ಕೊಠಡಿ ನಿರ್ಮಾಣಕ್ಕೆ ಮನವಿ ಮಾಡಿದ್ದರಿಂದ ಪ್ರಸ್ತುತ ವರ್ಷ ಕೊಠಡಿ ನಿರ್ಮಾಣವಾಗಿ ಉದ್ಘಾಟನೆಗೆ ಸಿದ್ಧವಾಗಿದ್ದು ಶಾಸಕ ಬಿ.ದೇವೇಂದ್ರಪ್ಪ (28/12/2023)ಗುರುವಾರ ಉದ್ಘಾಟನೆ ಮಾಡಲಿದ್ದಾರೆ.
ಸ್ವಂತ ಹಣದಿಂದ ಸೋರುವ ಕೊಠಡಿಗಳ ದುರಸ್ತಿ
ಕುಸಿಯುತ್ತಿರುವ ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳ ಸಂಖ್ಯೆಯನ್ನು ಗರಿಷ್ಠ ಮಟ್ಟಕ್ಕೆ ಏರಿಸಬೇಕಾದರೆ ಅದಕ್ಕೆ ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರ ಸಹಕಾರ ಅತ್ಯಂತ ಅವಶ್ಯಕ. ನಮ್ಮ ಶಾಲೆ ಎಂದು ಮಕ್ಕಳು ಮತ್ತು ಪೋಷಕರ ಮನಸ್ಸಿನಲ್ಲಿ ಮೂಡಬೇಕು. ಸರಕಾರ ಕೊಡುವ ಸಂಬಳಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಸ್ವಂತ ಹಣದಿಂದ ಸೋರುವ ಕೊಠಡಿಗಳ ದುರಸ್ತಿ ಮಾಡಿಸಿದ್ದೇವೆ. ಸರಕಾರದಿಂದ 10 ಲಕ್ಷ ರೂ ಹಣ ಬಿಡುಗಡೆಯಾಗಿದ್ದು ಹೊಸ ಕಟ್ಟಡ ನಿರ್ಮಾಣವಾಗಿದೆ. ಇದರಿಂದ ಮಕ್ಕಳಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಮುಖ್ಯ ಶಿಕ್ಷಕ ಕುಬೇಂದ್ರಪ್ಪ ಹೇಳಿದರು.
ಸ್ಥಳೀಯರ ಸಹಕಾರ ಅತ್ಯವಶ್ಯಕ
ಶಿಕ್ಷಕರ ಆಸಕ್ತಿಯಿಂದ ಗೋಗುದ್ದು ಗ್ರಾಮದ ಸರಕಾರಿ ಶಾಲೆ ಅಭಿವೃದ್ಧಿಯಾಗಿರುವುದು ನಿಜಕ್ಕೂ ಸಂತೋಷ. ಸ್ವಂತ ಹಣದಿಂದ ಕೊಠಡಿ ಅಭಿವೃದ್ಧಿ ಪಡಿಸಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳು ಅಭಿವೃದ್ಧಿಯಾಗಬೇಕಾದರೆ ಸ್ಥಳೀಯರ ಸಹಕಾರ ಅತ್ಯವಶ್ಯಕ ಎಂದು ಬಿಇಓ ಈ.ಹಾಲಮೂರ್ತಿ ಹೇಳಿದರು.