ಸುದ್ದಿವಿಜಯ(ಕಥೆ): ಆತ ಕಡು ಬಡವ. ಹೆಸರು ರಂಗಣ್ಣ ತಿರುಗುಣಿ ಗ್ರಾಮದವನು. ಒಬ್ಬನೇ ಮಗ. ಕಷ್ಟ ಪಟ್ಟು ಕೂಲಿ ಮಾಡಿಸಿ ಓದಿಸಿದ ರಂಗಣ್ಣನಿಗೆ ಮಗ ಐಎಎಸ್ ಪರೀಕ್ಷೆ ಪಾಸ್ ಮಾಡಿ ಕಲೆಕ್ಟರ್ ಆಗಬೇಕು ಎನ್ನುವ ಉತ್ಕಟವಾದ ಆಸೆ ಹೊಂದಿದ್ದ.
ಅದರಂತೆ ಮಗ ಶ್ರೇಯಸ್ ಕಷ್ಟಪಟ್ಟು ಓದಿದ. ಆದರೆ ಐಎಎಸ್ ಪಾಸ್ ಮಾಡಬೇಕು ಎನ್ನುವ ಅವನ ಆಸೆ ಈಡೇರಲಿಲ್ಲ. ಕಾರಣ, ತಂದೆ ರಂಗಣ್ಣನ ಸಾವು ಶ್ರೇಯಸ್ ಅನ್ನು ಮತ್ತದೇ ಕಷ್ಟಕ್ಕೆ ದೂಡಿತು. ಐಎಎಸ್ ಮಾಡುವ ಆಸೆ ಬಿಟ್ಟು ಹೊಲದ ಕೆಲಸಕ್ಕೆ ನಿಂತ. ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬಿದ್ದ.
ಆದರೆ ಅದು ಸಹ ಕೈಗೆಟುಕಲಿಲ್ಲ. ಕೃಷಿಯಲ್ಲಿನ ಅನಿಶ್ಚಿತತೆ ಆತನನ್ನು ದಿಗಿಲು ಹುಟ್ಟಿಸಿತು. ತಾಯಿಯ ಸುಮಿತ್ರಾ ಆರೋಗ್ಯವೂ ಹದ ಗೆಟ್ಟಿತ್ತು. ತಾಯಿ ಆರೋಗ್ಯ ತಪಾಸಣೆಗೂ ಹಣವಿಲ್ಲದ ಕಾರಣ ಆತ ನಿಶ್ಚಯಿಸಿದ. ಕೃಷಿ ಜಮೀನು ಸಂಬಂಧಿಕರಿಗೆ ಭೋಗ್ಯಕ್ಕೆ ಹಾಕಿದ. ಭೋಗ್ಯಕ್ಕೆ ಹಾಕಿದ ಹಣದಿಂದ ತಾಯಿ ಆರೋಗ್ಯಕ್ಕೆ ಖರ್ಚು ಮಾಡಿದ ಆದರೆ ತಾಯಿ ಬದುಕುಳಿಯಲಿಲ್ಲ.
ಸಾಲಗಾರನಾದ ಶ್ರೇಯಸ್ ಇತ್ತ ಜಮೀನು ಇಲ್ಲದೇ ಪರಿತಪಿಸುವಂತಾಯಿತು. ಸಂಬಂಧಿಕರು ಹಣವಿಲ್ಲದ ಕಾರಣ ಶ್ರೇಯಸ್‍ನನ್ನು ತುಚ್ಛವಾಗಿ ಕಂಡರು. ತಂದೆ ಹೇಳಿದ ಮಾತು ಶ್ರೇಯಸ್ಸ್‍ಗೆ ಸದಾ ಚುಚ್ಚುತ್ತಿತ್ತು. ಪ್ರಾಮಾಣಿಕವಾಗಿ ಇರು. ಮೋಸ ಮಾಡಬೇಡ. ಒಂದಲ್ಲ ಒಂದು ದಿನ ಎಲ್ಲವೂ ನಿನ್ನ ಹಿಂದೆ ಬರುತ್ತದೆ ಎಂದು.
ತಂದೆ ಮಾತಿನಂತೆ ನಡೆದುಕೊಂಡ ಶ್ರೇಯಸ್ ದುಡಿಮೆಗಾಗಿ ಮುಂಬೈ ಸೇರಿದ. ಮುಂಬೈ ಬಂದರಿನಲ್ಲಿ ಕೆಲಸಕ್ಕೆ ಸೇರಿದ. ವಿದೇಶದಿಂದ ಬರುವ ವಸ್ತುಗಳ ವ್ಯಾಪಾರಸ್ತರ ಜೊತೆ ಸಂಪರ್ಕ ಬೆಳೆಸಿಕೊಂಡ. ತಾನು ವಿದೇಶದ ವ್ಯಾಪಾರಸ್ಥರೊಂದಿಗೆ ವ್ಯಾಪಾರ ಮಾಡಬೇಕು ಎಂದು ಇಚ್ಛಿಸಿದ.
ಮೊದಲಿಗೆ ಒಂದು ಹಡಗಿನಲ್ಲಿ ರೋಣದ ಕಲ್ಲುಗಳು ಬಂದವು. ಯಾರೂ ಅವುಗಳನ್ನು ಖರೀದಿಸಲಿಲ್ಲ. ಶ್ರೇಯಸ್ ಮೊದಲು ಬಿಡ್ ಮಾಡಿದ್ದ ಆದರೆ ಹಿಂದಿನವು ಯಾರೂ ಮತ್ತೊಮ್ಮೆ ಮೇಲೆ ಕೂಗಲಿಲ್ಲ. ಹೀಗಾಗಿ ಶ್ರೇಯಸ್ ಸುಮಾರು 100 ರೋಣದ ಕಲ್ಲುಗಳನ್ನು ಕೊಳ್ಳಬೇಕಾದ ಅನಿವಾರ್ಯತೆ ಬಂತು. ತಕ್ಷಣ ಮತ್ತೆ ಅಗ್ನಿ ಪರೀಕ್ಷೆ ಎದುರಾಯಿತು. ಈ ರೋಣದ ಕಲ್ಲುಗಳನ್ನು ಖರೀದಿಸಿದ ತಪ್ಪಿಗೆ ಹೊಲ, ಮನೆ ಮಾರಬೇಕಾದ ಅನಿರ್ವಾಯ ಬಂತು. ಪಿತ್ರಾರ್ಜಿತ ಆಸ್ತಿಯನ್ನೇಲ್ಲಾ ಮಾರಿ ಹಣ ಕಟ್ಟಿದ.
ರೋಣದ ಕಲ್ಲುಗಳನ್ನು ಊರಿನಲ್ಲಿದ್ದ ತನ್ನ ಕಣದ ಸ್ವಲ್ಪ ಜಾಗದಲ್ಲಿ ಇರಿಸಿದ. ಜನ ಇವನ ವ್ಯವಹಾರ ಜ್ಞಾನ ನೋಡಿ ನಕ್ಕರು. ಛೇಡಿಸಿದರು. ಕುಟುಕಿದರು. ಅದನ್ನೆಲ್ಲಾ ನೋಡಿದ ಶ್ರೇಯಸ್‍ಗೆ ಆತ್ಮಹತ್ಯೆಯೊಂದೇ ದಾರಿ ಎಂದು ತೀರ್ಮಾನಿಸಿದ.
ಮಧ್ಯಾಹ್ನದ ಉರಿ ಬಿಸಿಲು. ರೋಣಗಲ್ಲಿನ ಮೇಲೆ ಯೋಚಿಸುತ್ತಾ ಕುಳಿತು ಒಂದು ದೊಡ್ಡ ಕಲ್ಲನ್ನು ತೆಗೆದುಕೊಂಡು ತನ್ನ ಸಿಟ್ಟನ್ನು ರೋಣಗಲ್ಲಿನ ಮೇಲೆ ಹಾಕಿ ಕುಟ್ಟಿದ. ನನ್ನ ಪಾಲಿನ ಶನಿಗಳು ನೀವು ಎಂದು ಶಪಿಸಿದ. ಜೋರಾಗಿ ಕುಟ್ಟಿದ ಹೊಡೆತಕ್ಕೆ ಒಂದು ರೋಣದ ಕಲ್ಲಿನ ಚೂರು ಎಗರಿತು. ಪಳ ಪಳ ಹೊಳೆಯುವ ವಸ್ತುವೊಂದು ಅವನಿಗೆ ಕಂಡಿತು. ಇದೇನಿದು ಎಂದು ಪರೀಕ್ಷಿಸಿದ. ಬಂಗಾರ ಮಿಶ್ರಿತ ಕಲ್ಲು ಎಂದು ತಿಳಿಯಿತು. ತಕ್ಷಣ ಯಾರಿಗೂ ಹೇಳದೆ ಬಂಗಾರ ಪರೀಕ್ಷರ ಹತ್ತಿರ ಹೋಗಿ ನೋಡಿದಾಗ ಇದು ಅಸಲಿ ಬಂಗಾರದ ಕಲ್ಲು ಎಂದು ದೃಢಪಡಿಸಿದರು.
ತಕ್ಷಣ ಶ್ರೇಯಸ್ ಎಲ್ಲ ರೋಣಗಲ್ಲುಗಳನ್ನು ಪರೀಕ್ಷೆಗಾಗಿ ಕುಟ್ಟಿದ ಸುಮಾರು ಹತ್ತು ರೋಣದ ಕಲ್ಲುಗಳಲ್ಲಿ ಬಂಗಾರದ ಕಲ್ಲುಗಳು ಸಿಕ್ಕವು. ಅದನ್ನೆಲ್ಲ ಒಬ್ಬ ದೊಡ್ಡ ಬಂಗಾರದ ವ್ಯಾಪಾರಿಗೆ ತಿಳಿಸಿದಾಗ 100 ಕೋಟಿಗೂ ಅಧಿಕ ಹಣ ಕೊಟ್ಟು 10 ರೋಣಗಲ್ಲುಗಳನ್ನು ವ್ಯಾಪಾರಿ ಖರಿದಿಸಿದ. ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು.
ತಾನು ಕಳೆದುಕೊಂಡ ಎಲ್ಲ ಸಂಪತ್ತನ್ನು ಶ್ರೇಯಸ್ ಮತ್ತೆ ಪಡೆದುಕೊಂಡ. ಇಡೀ ಊರಿಗೆ ಶ್ರೀಮಂತನಾದ. ಅವನಿಗೆ ಅದೃಷ್ಟ ಲಕ್ಷ್ಮಿ ರೋಣಗಲ್ಲಿನ ರೂಪದಲ್ಲಿ ಬಂದಾಗ ದೂರಸರಿದವರು ಹತ್ತಿರವಾದರು. ಇದು ಕತೆ. ಆದರೆ ವಾಸ್ತವ ಏನೆಂದರೆ ಕಷ್ಟಗಳಿದ್ದಾಗ ದೂರ ಹೋಗುವ ಮಂದಿ ಹಣ ಬಂದಾಗ ಎಲ್ಲರೂ ಆತನನ್ನು ಬಂಧಿಯಾಗಿಸುತ್ತಾರೆ ಅಲ್ಲವೇ? ಅದೃಷ್ಟ ಎಂಬುದು ಯಾವಗ ಬರುತ್ತೋ ಗೊತ್ತಲ್ಲ. ಆದರೆ ಅದೃಷ್ಟ ನಂಬಿಕೊಂಡು ದುಡಿಮೆ ಕೈಬಿಟ್ಟರೆ ಆಗೋದು ಬೇರೆಯೇ ಅಲ್ಲವೇ?