suddivijayanews01/07/2024
ಸುದ್ದಿವಿಜಯ, ಜಗಳೂರು: ಕಾಲೇಜಿನಲ್ಲಿ ಪಾಠ ಕೇಳಬೇಕಾದ ವಿದ್ಯಾರ್ಥಿಗಳು ಸೋಮವಾರ ಬಾಣಸಿಗರಾಗಿ ವಿವಿಧ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡುವುದರಲ್ಲಿ ತಲ್ಲೀನರಾಗಿದ್ದರು.
ಏಕೆಂದರೆ ಕಾಲೇಜಿನ ಆವರಣದಲ್ಲಿ ಆಹಾರೋತ್ಸವ ಹಮ್ಮಿಕೊಳ್ಳಲಾಗಿದ್ದು, ವಿವಿಧ ಖಾದ್ಯಗಳ ಸವಿರುಚಿ ಮಾಡಿ ಸಂಭ್ರಮಿಸಿದರು.
ವಿದ್ಯಾರ್ಥಿಗಳಿಗೆ ಪಾಠದಷ್ಟೇ ಮುಖ್ಯವಾಗಿ ಆರ್ಥಿಕ, ವ್ಯವಹಾರ ಪ್ರಯೋಗಿಕ ಜ್ಞಾನ ವೃದ್ಧಿಗೆ ಚಟುವಟಿಕೆ ಹೇಗೆ ಬದುಕಿಗೆ ಹಾಸುಹೊಕ್ಕಾಗಿದೆ ಎಂಬುದನ್ನು ತಿಳಿಸಲು ಕಾಲೇಜಿನ ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿಗಳಿಗೆ ಆಹಾರ ಮೇಳ ಏರ್ಪಡಿಸಲಾಗಿತ್ತು.
ಸುಮಾರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರುವ ಬೃಹತ್ ಕಾಲೇಜಿನಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಗಮನ ಸೆಳೆದರು.
ವಿದ್ಯಾರ್ಥಿಗಳ ಜೊತೆ ಶಿಕ್ಷಕರೂ ಸಹ ಸ್ಟಾಲ್‍ಗಳಿಗೆ ಭೇಟಿಕೊಟ್ಟು ತಮ್ಮ ವಿದ್ಯಾರ್ಥಿಗಳು ತಯಾರಿಸಿದ ಖಾದ್ಯಗಳನ್ನ ಖರೀದಿಸಿ ಆಹಾರ ಸವೆಯುವ ಮೂಲಕ ಸಂತೋಷ ಹಂಚಿಕೊಂಡರು.
ಫುಡ್‍ಫೆಸ್ಟ್‍ನಲ್ಲಿ 4 ರಿಂದ 5 ವಿದ್ಯಾರ್ಥಿಗಳು ಒಂದು ತಂಡದಂತೆ ಹಣ ಹೂಡಿಕೆ ಮಾಡಿ ತಿಂಡಿ ತಿನಿಸುಗಳ 18 ಸ್ಟಾಲ್‍ಗಳನ್ನ ಹಾಕಿದ್ದರು. ಸ್ಟಾಲ್‍ಗಳಲ್ಲಿ ಇರಿಸಿದ್ದ ಆಹಾರ ಪದಾರ್ಥಗಳನ್ನ ಸಹ ವಿದ್ಯಾರ್ಥಿಗಳೇ ತಯಾರಿಸಿದ್ದು ಗ್ರಾಹಕರನ್ನ ತಮ್ಮ ಸ್ಟಾಲ್‍ಗಳತ್ತ ಸೆಳೆಯುವ ಮೂಲಕ ತಮ್ಮ ವ್ಯಾವಹಾರಿಕ ಕೌಶಲ್ಯವನ್ನ ಪ್ರದರ್ಶಿಸಿದ್ರು.
ಪೌಷ್ಟಿಕಾಂಶಯುಕ್ತ ಆಹಾರ ತಯಾರಿಕೆ ಮಾಡುವುದು ಹೇಗೆ ಮತ್ತು ಕೆಮಿಕಲ್ ರಹಿತ ಬಾಯಿ ಚಪ್ಪರಿಸುವ ತಿನಿಸುಗಳಾದ ಪಾನಿಪುರಿ, ಸಮೋಸಾ, ಫ್ರುಟ್ ಸಲಾಡ್, ಕೇಕ್, ಐಸ್ ಕ್ರೀಂ ಸೇರಿದಂತೆ ತಂಪು ಪಾನೀಯಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ವಿದ್ಯಾರ್ಥಿಗಳು ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಆರ್.ರಂಗಪ್ಪ ಮಾತನಾಡಿ, ಆಹಾರ ಮಹೋತ್ಸವ ಆಚರಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸಂವೇದನೆ, ಸಂಘಟನಾ ಶಕ್ತಿ ಹಾಗೂ ಪೌಷ್ಠಿಕ ಜಾಗೃತಿಯನ್ನು ಬೆಳಸಲು ಸಹಕಾರಿ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾದ ನಾಗರಾಜ್, ಧೀರಜ್ ಕುಮಾರ್, ಮತ್ತು ಡಾ. ರಾಜೇಶ್ವರಿ ಪುಜಾರ್ ಅವರು ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಅಭಿವೃದ್ದಿಗೆ ಈ ತರದ ಕಾರ್ಯಕ್ರಮಗಳ ಮಹತ್ವವನ್ನು ತಿಳಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ವಿವಿಧ ತಿನಿಸುಗಳು, ಪಾಕಕಲೆಯ ಪ್ರದರ್ಶನಗಳು ಮತ್ತು ವಿಶೇಷ ಆಹಾರಗಳ ತಯಾರಿಕೆ ಮಾಡಲಾಗಿತ್ತು. ಪಾಲ್ಗೊಂಡ ಎಲ್ಲರಿಗೂ ವಿಶೇಷ ಸವಿಯುವಂತಿತ್ತು. ಎಚ್‍ಡಿಎಫ್‍ಸಿ ಬ್ಯಾಂಕ್‍ನ ಮ್ಯಾನೇಜರ್ ನಾಗರಾಜ್ ಉಪನ್ಯಾಸಕ ವರ್ಗ ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗ ಭಾಗವಹಿಸಿದ್ದರು.