ಸುದ್ದಿವಿಜಯ, ಜಗಳೂರು: (ವಿಶೇಷ),ಶಿಕ್ಷಣ ಸುಧಾರಣೆಯ ಸಂಕೇತ. ಸಾಮಾಜಿಕ, ಆರ್ಥಿಕ ಸಾಂಸ್ಕೃತಿಕ ಪ್ರಗತಿಯ ತಳಪಾಯ. ಇದರ ಬಗ್ಗೆ ಮೇಲ್ಮಟ್ಟದಲ್ಲಿ ಸರಕಾರಗಳು ಸಾಕಷ್ಟು ಮಾತನಾಡಿವೆ. ಆದರೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಮುಗ್ಗರಿಸಿದೆ ಎಂಬುದಕ್ಕೆ ತಾಲ್ಲೂಕಿನ ರಸ್ತೆಮಾಕುಂಟೆ ಗ್ರಾಮದ ಸರಕಾರಿ ಶಾಲೆ ತಾಜಾ ಉದಾಹರಣೆ.
ತಾಲೂಕಿನ ಅದೆಷ್ಟೋ ಶಾಲೆಗಳು ಸೋರುತ್ತಿವೆ. ಮಕ್ಕಳು ಬಯಲಲ್ಲೇ ಕುಳಿತು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಗೊತ್ತಿದ್ದರೂ ಕಣ್ಣು, ಕಿವಿ ಮುಚ್ಚಿಕೊಂಡು ಕುಳಿತಿದ್ದಾರೆ ಎಂಬುದಕ್ಕೆ ರಸ್ತೆ ಮಾಕುಂಟೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಸಾಕ್ಷಿ!ರಸ್ತೆ ಮಾಕುಂಟೆ ಗ್ರಾಮದ ಶಾಲೆಯಲ್ಲಿ ಬಯಲಲ್ಲೇ ಕುಳಿತು ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು.
ಜಿಲ್ಲೆಯಲ್ಲೇ ಅತ್ಯಂತ ಹಿಂದುಳಿದ ತಾಲೂಕು ಜಗಳೂರಿನಲ್ಲಿ ಸರಕಾರಿ ಶಾಲೆಗಳ ನಿರಂತರವಾಗಿ ಕಡೆಗಣನೆ ಮಾಡಲಾಗುತ್ತಿದೆ. ಶ್ರೀ ಸಾಮಾನ್ಯರ ಮತ್ತು ಬಡವರ ಮಕ್ಕಳು ಕಲಿಯುವ ಸರಕಾರಿ ಶಾಲೆಯಲ್ಲಿ ಸೌಲಭ್ಯಗಳಿಲ್ಲದೇ ದುರ್ಬಲವಾಗಿದೆ.
ಗ್ರಾಮದಲ್ಲಿರುವ ಸರಕಾರಿ ಶಾಲೆ 1950ನೇ ಇಸವಿಯಲ್ಲಿ ಆರಂಭಿಸಲಾಗಿದೆ. 6 ಕೊಠಡಿಗಳಿವೆ. ಅದರಲ್ಲಿ 5 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಶಿಕ್ಷಕರ ಕಚೇರಿ ಕೊಠಡಿ ಮಾತ್ರ ಸುಸ್ಥಿತಿಯಲ್ಲಿದ್ದು ಉಳಿದಂತೆ ಎಲ್ಲ ಕೊಠಡಿಗಳು ಮಳೆಗಾಲದಲ್ಲಿ ಸೋರುತ್ತವೆ.
ಬೇಸಿಗೆಯಲ್ಲಿ ಮಕ್ಕಳಿಗೆ ಕೊಠಡಿಯಲ್ಲೇ ಕುಳ್ಳಿರಿಸಿ ಸೂರ್ಯ, ಚಂದ್ರನನ್ನು ತೋರಿಸಿ ಪ್ರಾಯೋಗಿಕವಾಗಿ ಪಾಠ ಮಾಡುವಷ್ಟು ಹೆಂಚುಗಳು ಬಾಯ್ದೆರೆದಿರುವುದು ಅವ್ಯವಸ್ಥೆಗೆ ಇದಕ್ಕಿಂತ ನಿದರ್ಶನ ಮತ್ತೊಂದಿಲ್ಲ.
ಯಾವಾಗ ಕೊಠಡಿಗಳು ಬೀಳುತ್ತವೋ ಎನ್ನುವ ಆತಂಕದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಜೀವ ಭಯದಲ್ಲಿದ್ದಾರೆ. ಹೀಗಾಗಿ ಶಾಲೆಯ ಆವರಣಲ್ಲಿ ಮರದ ಕೆಳಗೆ ಮಕ್ಕಳನನ್ನು ಕುಳ್ಳಿರಿಸಿ ಪಾಠ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಶಾಲೆಯಲ್ಲಿ 132 ಮಕ್ಕಳು ಓದುತ್ತಿದ್ದು, ಕಳೆದ ವರ್ಷ 8ನೇ ತರಗತಿಯನ್ನು ಕೊಠಡಿ ಕೊರತೆ ನೆಪ ಹೇಳಿ ಬಿದರಕೆರೆ ಶಾಲೆಗೆ ಟಿಸಿಗಳನ್ನು ವರ್ಗಾವಣೆ ಮಾಡಲಾಗಿದೆ. ಹೀಗಾಗಿ ಮಕ್ಕಳು ಮೂರು ಕಿ.ಮೀ ದೂರದ ಬಿದರಕೆರೆ ಶಾಲೆಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಸಕರು ಕ್ರಮ ಕೈಗೊಳ್ಳಲಿ
ಸರಕಾರಿ ಶಾಲೆಗಳನ್ನು ಬಿಟ್ಟು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವ ಈಗಿನ ಸಂದರ್ಭದಲ್ಲಿ ಸರಕಾರಿ ಶಾಲೆಗಳನ್ನು ಉಳಿಸಿಕೊಂಡು ಹೋಗುವ ಜರೂರಿನ ಕೆಲಸ ಸರಕಾರ ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಂದ ಆಗಬೇಕು. ಶಾಸಕರಾದ ಬಿ.ದೇವೇಂದ್ರಪ್ಪ ಅವರು ಆಯ್ಕೆಯಾದ ದಿನದಿಂದಲೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತೇವೆ ಎಂದು ಹೇಳುತ್ತಾ ಬಂದಿದ್ದಾರೆ. ಕ್ಷೇತ್ರದ ಶಿಥಿಲಾವಸ್ಥೆಯಲ್ಲಿರುವ ಸರಕಾರಿ ಶಾಲೆಗಳ ಮೂಲ ಸೌಕರ್ಯಗಳ ಬಗ್ಗೆ ಮೊದಲು ಗಮನಹರಿಸಬೇಕು ಎಂದು ಶಿಕ್ಷಣಾಸ್ಥಕರು ಒತ್ತಾಯಿಸಿದ್ದಾರೆ.
ಮರದ ಕೆಳಗೆ ಪಾಠ ಬೋಧಿಸುತ್ತಿದ್ದೇವೆ!
ಸಾಕಷ್ಟು ಬಾರಿ ನಮ್ಮ ಶಾಲೆಯ ಸಮಸ್ಯೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಶಾಲೆಯಲ್ಲಿರುವ ಬಿಸಿಯೂಟ ಕೊಠಡಿಯೂ ಸೋರುತ್ತಿದೆ. ಮಕ್ಕಳಿಗೆ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ ಬಯಲಿನಲ್ಲಿ ಮರದ ಕೆಳಗೆ ಪಾಠ ಬೋಧಿಸುತ್ತಿದ್ದೇವೆ ಎಂದು ಮುಖ್ಯ ಶಿಕ್ಷಕರಾದ ಡಿ.ವಿ.ಅಂಭುಜಾ ಹೇಳಿದರು.
ಶಾಲೆ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ
ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ಜಗಳೂರು ತಾಲೂಕಿನಲ್ಲಿರುವ ರಸ್ತೆಮಾಕುಂಟೆ ಗ್ರಾಮದ ಸರಕಾರಿ ಶಾಲೆ ಸೋರುತ್ತಿದೆ ಎಂದು ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಯಾರೂ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಪೋಷಕರು ಆತಂಕಕ್ಕೊಳಗಾಗಿ ಬೇರೆ ಗ್ರಾಮಗಳ ಶಾಲೆಗಳತ್ತ ಮಕ್ಕಳನ್ನು ಸೇರಿಸುತ್ತಿದ್ದಾರೆ ಎಂದು ಎಸ್‍ಡಿಎಂಸಿ ಅಧ್ಯಕ್ಷ ನಾಗರಾಜ್ ಪ್ರತಿಕ್ರಿಯೆ ನೀಡಿದರು.