suddivijayanews12/07/2024
ಸುದ್ದಿವಿಜಯ, ಜಗಳೂರು: ಪಟ್ಟಣದ ಹೃದಯ ಭಾಗದಲ್ಲಿರುವ ಅತ್ಯಂತ ಶಿಥಿಲವಾಗಿರುವ ಹಳೆಯ ಸರಕಾರಿ ಆಸ್ಪತ್ರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಶಾಸಕ ಬಿ.ದೇವೇಂದ್ರಪ್ಪ ಜೊತೆ ಗುರುವಾರ ಸಂಜೆ ಭೇಟಿ ನೀಡಿ ವೀಕ್ಷಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗಳೂರು ಸರಕಾರಿ ಆಸ್ಪತ್ರೆಯ ಕಟ್ಟಡ ಕೆಟ್ಟ ಪರಿಸ್ಥಿತಿ ಇದೆ. ಎರಡೂ ಕಟ್ಟಡಗಳನ್ನು ನೋಡಿದ್ದೇನೆ ಬಹಳ ಶಿಥಿಲಾವಸ್ಥೆಯಲ್ಲಿವೆ. ರಿಪೇರಿ ಮಾಡಲು ಸಾಧ್ಯವೇ ಇಲ್ಲ. ಹೀಗಾಗಿ ರೋಗಿಗಳ ಹಿತದೃಷ್ಟಿಯಿಂದ ಕಟ್ಟಡ ಕೆಡವಲು ಸೂಚನೆ ನೀಡಿದ್ದೇನೆ ಎಂದರು.
ಜಗಳೂರು ಆಸ್ಪತ್ರೆಗೆ ಆರು ತಜ್ಞ ವೈದ್ಯರ ಕೊರತೆಯಿದೆ. 2008 ರಿಂದಲೂ ಫಿಜಿಷಿಯನ್ ನೇಮಕವಾಗಿಲ್ಲ. ವಾರಕ್ಕೆ ಮೂರು ದಿನ ಫಿಷಿಯನ್ ಬಂದು ಹೋಗುವ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.ತಾಲೂಕು ನೂತನ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕರು ಜಮೀನು ವೀಕ್ಷಿಸುತ್ತಿದ್ದಾರೆ ಎಂದಾಗ ಪತ್ರಕರ್ತರು ಹಳೆಯ ಕಟ್ಟಡ ಮಧ್ಯೆ ಸರಕಾರಿ ಶಾಲೆಯಿದೆ.
ಅದನ್ನು ಬೇರೆ ಕಡೆ ಸ್ಥಳಾಂತರಿಸಿದರೆ ಸುಮಾರು ನಾಲ್ಕರಿಂದ ಐದು ಎಕರೆ ಸರಕಾರಿ ಜಾಗವೇ ಸಿಗುತ್ತದೆ. ಪಟ್ಟಣದಿಂದ ಹೊರಗೆ ನಿರ್ಮಾಣ ಮಾಡಿದರೆ ರೋಗಿಗಳಿಗೆ ತೊಂದರೆಯಾಗಬಹುದು ಎಂದು ಸಲಹೆ ನೀಡಿದಾಗ.
ಶಾಸಕ ಬಿ.ದೇವೇಂದ್ರಪ್ಪ ಅವರು ಸ್ಥಳೀಯವಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಇಲ್ಲೇ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ತೀರ್ಮಾನ ಕೈಗೊಂಡರೆ ಅದಕ್ಕೆ ನನ್ನ ಮತ್ತು ಇಲಾಖೆಯ ಅಧಿಕಾರಿಗಳ ಸಮ್ಮತಿಯಿದೆ ಎಂದರು.
ವೈದ್ಯಧಿಕಾರಿಗಳಿಗೆ ಕ್ಲಾಸ್: ಸರಕಾರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ 65 ಲಕ್ಷ ವೆಚ್ಚದಲ್ಲಿ ಬ್ಲಾಕ್ ಪಬ್ಲಿಕ್ ಹೆಲ್ತ್ ಲ್ಯಾಬ್ ನಿರ್ಮಾಣವಾಗಿದೆ. ಆದರೆ ನಿರ್ಮಾಣವಾಗಿ ಆರು ವರ್ಷ ಕಳೆದರೂ ಅದನ್ನು ಸಾರ್ವಜನಿಕರ ಬಳಕೆಗೆ ಮುಕ್ತವಾಗಿಲ್ಲ ಎಂದು ಸಚಿವರ ಗಮನ ಸೆಳೆದಾಗ ಡಿಎಚ್‍ಒ ಡಾ.ಷಣ್ಮುಖಪ್ಪ ಮತ್ತು ಜಗಳೂರು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಷಣ್ಮುಖ ಅವರಿಗೆ ತರಾಟೆಗೆ ತೆಗೆದುಕೊಂಡರು.
ಲಕ್ಷಾಂತರ ರೂ ಖರ್ಚು ಮಾಡಿ ನಿರ್ಮಾಣವಾಗಿರು ಲ್ಯಾಬ್ ಇಷ್ಟು ವರ್ಷಗಳಾದರೂ ಬಳಸಿಲ್ಲ ಎಂದರೆ ಹೇಗೆ? ಸರಕಾರಿ ಆಸ್ತಿಯನ್ನು ಸರಿಯಾಗಿ ಬಳಸಿಕೊಳ್ಳಿ. ಇನ್ನು ಮೂರು ದಿನಗಳಲ್ಲಿ ಸಾರ್ವಜನಿಕರ ಸೇವೆಗೆ ಮುಕ್ತವಾಗಬೇಕು ಎಂದು ಸೂಚಿಸಿದರು.
ಆಸ್ಪತ್ರೆಯಲ್ಲಿರುವ ರಕ್ತನಿಧಿ, ಆಕ್ಸಿಜನ್ ಘಟಕ ನಿರುಪಯುಕ್ತವಾಗಿದೆ ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ, ಆಸ್ಪತ್ರೆ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದೇವೆ.
ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅನುದಾನ ಬಳಸಿಕೊಳ್ಳಿ. ನ್ಯಾಚುರೋಪತಿ ಮತ್ತು ಟಿಎಚ್‍ಒ ಕಚೇರಿ ಸ್ಥಳಾಂತರ ಮತ್ತು ರಿಪೇರಿಗೆ ಹಣವಿದ್ದು ಸ್ಥಳಾಂತರಗೊಳಿಸಿ ಎಂದು ಸಚಿವರು ಶಾಸಕರಿಗೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕ ಬಿ.ದೇವೇಂದ್ರಪ್ಪ, ತಾಲೂಕು ಆಸ್ಪತ್ರೆಯ ಸ್ಥಿತಿ ನೋಡಿ ಸಚಿವರು ನೂತನ ಕಟ್ಟಡ ನಿರ್ಮಾಣಕ್ಕೆ ಸೂಚನೆ ನೀಡಿದ್ದಾರೆ. ಕ್ಷೇತ್ರದಲ್ಲಿ ಆರೋಗ್ಯ ಸಚಿವರಾಗಿ ನಮ್ಮ ಕ್ಷೇತ್ರಕ್ಕೆ ಬಂದು ಇಲ್ಲಿನ ಸ್ಥಿತಿ ನೋಡಿ ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿರುವುದು ನಿಜಕ್ಕೂ ಸಂತೋಷದ ವಿಷಯ ಎಂದರು.
ಈ ವೇಳೆ ಆರೋಗ್ಯ ಇಲಾಖೆ ಆಯುಕ್ತ ರಣದೀಪ್, ಎನ್‍ಎಚೆಂ ಎಂಡಿ ನವೀನ್ ಭಟ್, ಜಿಲ್ಲಾ ವೈದ್ಯಾಧಿಕಾರಿ ಡಾ.ಷಣ್ಮುಖಪ್ಪ, ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ವೈದ್ಯಾಧಿಕಾರಿ ಡಾ.ಷಣ್ಮುಖ, ಕೆಪಿಸಿಸಿ ರಾಜ್ಯ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ, ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್, ಸುರೇಶ್‍ಗೌಡ್ರು, ಷಂಷೀರ್ ಅಹಮದ್, ಪಲ್ಲಾಗಟ್ಟೆ ಶೇಖರಪ್ಪ, ಟಿಎಚ್‍ಒ ಡಾ.ವಿಶ್ವನಾಥ್ ಸೇರಿದಂತೆ ವೈದ್ಯರು ಮತ್ತು ಸಿಬ್ಬಂದಿ ಇದ್ದರು.