suddivijayanews14/08/2024
ಸುದ್ದಿವಿಜಯ, ಜಗಳೂರು: ಬುಧವಾರ ಬೆಳಗಿನ ಜಾವ ಸುರಿದ ಆಶ್ಲೇಷ ಮಳೆಗೆ ಜಗಳೂರು ತಾಲೂಕಿನಾದ್ಯಂತ ಭಾರಿ ಅನಾಹುತ ಉಂಟಾಗಿದೆ.
ಜಗಳೂರು ತಾಲೂಕಿನಾದ್ಯಂತ ಒಟ್ಟಾರೆ 10.7 ಮಿಮೀ ಮಳೆಯಾಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.
ಮಳೆಯಿಲ್ಲದೇ ಕಂಗಾಲಾಗಿದ್ದ ರೈತರಿಗೆ ಆಶ್ಲೇಷ ಮಳೆ ನೆಮ್ಮದಿ ತಂದಿದ್ದರೆ, ಪಟ್ಟಣದ ತಗ್ಗು ಪ್ರದೇಶಗಳಲ್ಲಿನ ಜನತೆಗೆ ಸಮಸ್ಯೆಯನ್ನು ಹೊತ್ತು ತಂದಿದೆ.
ತಗ್ಗು ಪ್ರದೇಶಗಳಲ್ಲಿ ಮೇಲೌಟ್ ನಿರ್ಮಾಣ ಮಾಡಿದ್ದು ನಿವೇಶನ ಕಟ್ಟಿಕೊಂಡವರು ಅಯ್ಯೋ ಯಾಕಾದರೂ ಮನೆ ಕಟ್ಟಿದ್ದೆವೋ ಎಂಬಂತೆ ಪರಿತಪಸುವಂತಾಗಿದೆ.
ಅಡಕೆ ತೋಟಗಳಿಗೆ ನುಗ್ಗಿದ ನೀರು:
ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಶಿರಡಿ ಸಾಯಿಬಾಬಾ ದೇವಸ್ಥಾನದ ಟ್ರಸ್ಟಿ ಪ್ರೊ.ಜೆ.ಎಂ.ತಿಪ್ಪೇಸ್ವಾಮಿ ಅವರ ಅಡಕೆ ತೋಟಕ್ಕೆ ನೀರು ನುಗ್ಗಿದ್ದು ಸಾಕಷ್ಟು ಅನಾಹುತ ಉಂಟಾಗಿದೆ.
ಅಡಕೆ ತೋಟ ಅಕ್ಷರಶಃ ಕೆರೆಯಂತೆ ಕಾಣುತ್ತಿದೆ. ಏರಿ ಬದುಗಳು ಒಡೆದು ಮಣ್ಣು ಕೊಚ್ಚಿಕೊಂಡು ಹೋಗಿದೆ ಎಂದು ತಿಳಿಸಿದ್ದಾರೆ.
ಉದ್ದಗಟ್ಟ ಗ್ರಾಮದ ರೈತರ ಮೆಕ್ಕೆಜೋಳದ ಬೆಳೆ ಚಾಪೆಯಂತೆ ಮಲಗಿದೆ. ತೋಟಗಳಿಗೆ ನೀರು ನುಗ್ಗಿದ್ದು ಅಡಕೆ, ಶೇಂಗ ಹೊಲಗಳಲ್ಲಿ ನೀರು ನಿಂತು ಅಕ್ಷರಶಃ ಕೆರೆಯಂತೆ ಕಾಣುತ್ತಿವೆ.
ತಾಲೂಕಿನ ಕಸಬ ಹೋಬಳಿಯ ಅರಿಶಿಣಗುಂಡಿ ಗ್ರಾಮದಲ್ಲಿ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಕಟ್ಟಿಗೆಹಳ್ಳಿ, ಬಿದರಕೆರೆ, ಕಲ್ಲೇದೇವರಪುರ, ಹನುಮಂತಾಪುರ, ಲಿಂಗಣ್ಣನಹಳ್ಳಿ, ತೋರಣಗಟ್ಟೆ,
ಸೊಕ್ಕೆ ಹೋಬಳಿಯ ಲಕ್ಕಂಪುರ, ಗಡಿಮಾಕುಂಟೆ, ಕ್ಯಾಸೇನಹಳ್ಳಿ, ಬಿಳಿಚೋಡು ಹೋಬಳಿಯ ಗುತ್ತಿದುರ್ಗ, ದೇವಿಕೆರೆ, ಮೆದಗಿನಕೆರೆ, ಪಲ್ಲಾಗಟ್ಟೆ, ದಿದ್ದಿಗೆ, ದೊಣೆಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳು, ಹನುಮಂತಾಪುರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದು ಕೆರೆ ಕಟ್ಟೆಗಳು ಭರ್ತಿಯಾಗಿವೆ.
ಕೆರೆಗಳಿಗೆ ನೀರು:
ತುಪ್ಪದಹಳ್ಳಿ, ಲಕ್ಕಂಪುರ, ಬಿಳಿಚೋಡು, ಮುಷ್ಟಿಗರಹಳ್ಳಿ, ಚಿಕ್ಕಅರಕೆರೆ, ದೊಡ್ಡಅರಕೆರೆ, ಚದರಗೊಳ್ಳ, ಜಗಳೂರು ಸೇರಿದಂತೆ 30 ಕೆರೆಗಳಿಗೆ ಈಗಾಗಲೇ 57 ಕೆರೆ ತುಂಬಿಸುವ ಏತ ಕಾಮಗಾರಿಯಿಂದ ಶೇ.30 ರಷ್ಟು ನೀರು ಹರಿದಿದೆ. ಜೊತೆಗೆ ರಾತ್ರಿ ಸುರಿದ ಕುಂಭದ್ರೋಣ ಮಳೆಯಿಂದ ಶೇ.50ರಷ್ಟು ಕೆರೆಗಳು ಭರ್ತಿಯಾಗಿವೆ.
ಪಟ್ಟಣದ ಜೀವನ ಅಸ್ತವ್ಯಸ್ತ:
ಪಟ್ಟಣದ ಕೃಷ್ಣ ಬಡಾವಣೆ, ದೇವೇಗೌಡ ಬಡಾವಣೆ, ಅಶ್ವಿನಿ ಬಡಾವಣೆ, ಮುದ್ದಣ್ಣ ಲೇಔಟ್, ಅಬ್ದುಲ್ ಲತೀಫ್ ಸಾಬ್ ಬಡವಾಣೆ, ತುಮಾಟಿ ಲೇಔಟ್‍ಗಳಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ಗಲೀಜು ರಸ್ತೆಯ ಮೇಲೆ ರಾರಾಜಿಸುತ್ತಿದೆ.
ಅಶ್ವಿನಿ ಬಡಾವಣೆಗೆ ಹೋಗುವ ಮುಖ್ಯ ರಸ್ತೆಯ ಸೇತುವೆ ಭಗ್ನವಾಗಿ ಆರು ವರ್ಷಗಳಾಗಿದ್ದು ಕಾಲುವೆಯಲ್ಲಿ ಹರಿಯುತ್ತಿದ್ದು ಮನೆಗಳಿಗೆ ನುಗ್ಗಿ ಅನಾಹುತ ಸೃಷ್ಟಿಯಾಗಿದೆ ಎಂದು ಪಟ್ಟಣ ಪಂಚಾಯಿತಿ ಅವ್ಯವಸ್ಥೆಗೆ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.
ಈ ವರ್ಷದಲ್ಲೇ ದೊಡ್ಡಮಳೆ:
ಬುಧವಾರ ಬೆಳಿಗ್ಗೆ ಸುರಿದ ಮಳೆ ಕಳೆದ ಎರಡು ವರ್ಷಗಳಲ್ಲೇ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸುರಿದಿದೆ. 2022ರಲ್ಲಿ ಭಾರಿ ಪ್ರಮಾಣದ ಮಳೆಯಾಗಿತ್ತು ನಂತರದ ದಿನಗಳಲ್ಲಿ ಈ ಪ್ರಮಾಣದ ಮಳೆಯಾಗಿದ್ದು ವಿರಳ. ಪ್ರಸ್ತುತ ಮಳೆಯಿಂದ ಬೆಳೆಗಳಿಗೆ ಸಮೃದ್ಧವಾಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಹಾನಿಯಾದ ಪ್ರದೇಶಗಳಿಗೆ ತಹಶೀಲ್ದಾರ್ ಸೈಯದ್ ಕಲೀಂಉಲ್ಲಾ ಮತ್ತು ಆರ್‍ಐ ಧನಂಜಯ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.