ಸದ್ದಿವಿಜಯ, ಜಗಳೂರು: ಸಂಜೆ ಹೊತ್ತು ದೇವರ ಮುಂದೆ ದೀಪ ಹಚ್ಚಿ ಪೂಜೆ ಮಾಡಿ ಊರಿಗೆ ಬಂದಿದ್ದ ಸರ್ಕಸ್ ನೋಡಲು ಹೋದಾಗ ದೀಪದ ಸಮೀಪದಲ್ಲೇ ಇದ್ದ ಬಟ್ಟೆಗೆ ಕಿಡಿ ಹೊತ್ತಿ ಇಡೀ ಮನೆಯೇ ಸುಟ್ಟು ಹೋಗಿರುವ ಘಟನೆ ತಾಲೂಕಿನ ತೋರಣಗಟ್ಟೆ ಗ್ರಾಮದಲ್ಲಿ ಬುಧವಾರ ರಾತ್ರಿ 8.30ರ ಸುಮಾರಿಗೆ ಸಂಭವಿಸಿದೆ.
ತೋರಣಗಟ್ಟೆ ಗ್ರಾಮದ ಅಡ್ಡಜ್ಜರ ಬಡಪ್ಪ ಎಂಬುವರಿಗೆ ಸೇರಿದ ಹೆಂಚಿನ ಮನೆ ಸುಟ್ಟು ಸಂಪೂರ್ಣ ಭಸ್ಮವಾಗಿದೆ.
ಮನೆಯಲ್ಲಿದ್ದ 14 ಕ್ವಿಂಟಲ್ ರಾಗಿ, ಮೂರು ಕ್ವಿಂಟಲ್ ಜೋಳ, ಮಕ್ಕಳ ಅಂಕಪಟ್ಟಿ ಮತ್ತು ಶಾಲಾ ದಾಖಲಾತಿ, ಆಧಾರ್ ಕಾಡ್, 800 ಗ್ರಾಂ ಚಿನ್ನಾಭರಣ ಮತ್ತು ಬ್ಯಾಂಕಿನ ಸಾಲ ರಿನಿವಲ್ ಮಾಡಿಸಲು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸ್ವಸಹಾಯ ಸಂಘದಿಂದ ಸಾಲ ಮಾಡಿ ತಂದಿಟ್ಟಿದ್ದ 2 ಲಕ್ಷ ರೂ ಹಣ,ದಿನಸಿ ಸಾಮಾಗ್ರಿಗಳು, ಬಟ್ಟೆ ಹೀಗೆ ಮನೆಯಲ್ಲಿದ್ದ ಎಲ್ಲ ವಸ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ ಎಂದು ಬಡಪ್ಪ ಕಣ್ಣೀರು ಹಾಕಿದರು.
ಮೂರು ಜನ ಮಕ್ಕಳು ಮತ್ತು ಗಂಡ ಹೆಂಡತಿ ಸರ್ಕಸ್ ನೋಡಲು ಹೋಗಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬೆಂಕಿ ಮನೆಯನ್ನು ಆವರಿಸುತ್ತಿದ್ದಂತೆ ಸ್ಥಳೀಯರು ನೀರು, ಮಣ್ಣು ಹಾಕಿ ನಂದಿಸಲು ಪ್ರಯತ್ನಿಸಿದ್ದಾರೆ.
ಆದರೆ ಅಷ್ಟರಲ್ಲಾಗಲೇ ಮನೆ ಸಂಪೂರ್ಣ ಸುಟ್ಟು ಹೋಗಿದೆ. ಜಗಳೂರು ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ ಆದರೆ ಅಷ್ಟರಲ್ಲಾಗಲೇ ಮನೆ ಸಂಪೂರ್ಣವಾಗಿ ಸುಟ್ಟು ಹೋಗಿದೆ ಎಂದು ಸಂಬಂಧಿ ಸಿಎಂ ಹೊಳೆ ಮಹಾಲಿಂಗಪ್ಪ ತಿಳಿಸಿದರು.ಈ ಪ್ರಕರಣ ಸಂಬಂಧ ಜಗಳೂರು ಪಟ್ಟಣದಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ಆರ್‍ಐ ಧನಂಜಯ್, ಗ್ರಾಪಂ ಅಧ್ಯಕ್ಷರಾದ ರೂಪಾ ಕುಬೇರ್‍ಗೌಡ, ಉಪಾಧ್ಯಕ್ಷ ಟಿ.ಜಿ.ಪಾಲಪ್ಪ ಭೇಟಿ ನೀಡಿ ದಿನಸಿ ಖರೀದಿಗೆ ಸಂತ್ರಸ್ಥರಾದ ಬಡಪ್ಪ ಅವರಿಗೆ 10 ಸಾವಿರ ಧನ ಸಹಾಯ ಮಾಡಿದರು.