ಸುದ್ದಿವಿಜಯ, ಜಗಳೂರು: ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಟಿಕೆಟ್ ನಿರಾರಕರಿಸಿದ್ದಕ್ಕೆ ಸ್ವಾಭಿಮಾನ ಪಣಕ್ಕಿಟ್ಟು ತೆಂಗಿನ ತೋಟದ ಗುರುತು ಹಿಡಿದು ಪಕ್ಷೇತರ ಅಭ್ಯರ್ಥಿಯಾಗಿ ಜನರ ಮುಂದೆ ಮತಭೀಕ್ಷೆಗೆ ಕೇಳಲು ಬಂದ ಸ್ವಾಭಿಮಾನಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ರೋಡ್ ಶೋಗೆ ಜನಸಾಗರವೇ ಹರಿದು ಬಂದಿತ್ತು.
ತೆರೆದ ವಾಹನದಲ್ಲಿ ಅಭಿಮಾನಿಗಳಿಗೆ ಕೈ ಬೀಸುತ್ತಲೇ ಶಕ್ತಿ ಪ್ರದರ್ಶನಕ್ಕೆ ಜಗಳೂರು ಪಟ್ಟಣ ಸೋಮವಾರ ಸಾಕ್ಷಿಯಾಗಿತ್ತು. ಈಶ್ವರ ದೇವಸ್ಥಾನದಿಂದ ಹೊರಟ ರೋಡ್ ಶೋಗೆ ಬಾರಿಜನಸ್ತೋಮವೇ ಹರಿದು ಬಂತು. ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ಮುಕ್ತಾಯವಾಯಿತು.
ಎಲ್ಲಿ ನೋಡಿದರೂ ರಾಜೇಶ್ ಭಾವಚಿತ್ರವಿರುವ ಹಳದಿ ಬಣ್ಣದ ಬಾವುಟಗಳ ಹಾರಾಟ ಕಂಡು ಬಂದವು. ಮೆರವಣಿಗೆ ಉದ್ದಕ್ಕೂ ಅಭಿಮಾನಿಗಳು ರಾಜೇಶ್ ಅವರಿಗೆ ಹೂವಿನ ಹಾರ, ಶಾಲಿನ ಸನ್ಮಾನ ನೆರವೇರಿಸಿದರು. ‘ರಾಜೇಶ್ ಅವರಿಗೆ ಜೈ’, ‘ಸ್ವಾಭಿಮಾನಿಗೆ ಜೈ’ ಎಂದು ಅಭಿಮಾನಿಗಳ ಧ್ವನಿ ಮುಗಿಲು ಮುಟ್ಟಿತ್ತು.
ಡೊಳ್ಳು ಕುಣಿತ, ಡ್ರಮ್‍ಸೆಟ್ ಸೇರಿದಂತೆ ವಿವಿಧ ಜಾನಪದ ಕಲಾಪ್ರಕಾರಗಳ ಮೆರವಣಿಗೆ ಜನರನ್ನು ಮಂತ್ರಮುಗ್ದರನ್ನಾಗಿಸಿತು. ಬಹಿರಂಗ ಚುನಾವಣೆಗೆ ಇಂದು ಕಡೇಯ ದಿನವಾಗಿದ್ದರಿಂದ ಶಕ್ತಿ ಪ್ರದರ್ಶನಕ್ಕೆ ತೆಂಗಿನ ತೋಟದ ಮಾಲೀಕ ರಾಜೇಶ್ ಮುಂದಾಗಿದ್ದರು. ಚುನಾವಣೆಗೆ ಇನ್ನೊಂದೇ ದಿನ ಬಾಕಿ ಉಳಿದಿದ್ದು ಬಹಿರಂಗ ಪ್ರಚಾರಕ್ಕೆ ಇಂದೇ ತೆರೆಬಿದ್ದಿದೆ.
ರೋಡ್ ಶೋ ಮುಗಿಯುತ್ತಿದ್ದಂತೆ ಗ್ರಾಮಾಂತರ ಪ್ರದೇಶಗಳ ಜನರ ಮತ ಕೇಳಲು ರಾಜೇಶ್ ಮತ್ತು ಅಭಿಮಾನಿಗಳು 15 ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡಿದರು.