ಸುದ್ದಿವಿಜಯ, ಜಗಳೂರು: ಸ್ವಾತಂತ್ರ್ಯೋತ್ಸವ ದಿನದಂದು ಕಾರ್ಯಕ್ರಮದಲ್ಲಿ ಅಭಾಸವಾದರೆ ಯಾವುದೇ ಕಾರಣಕ್ಕೂ ಅಧಿಕಾರಿಗಳನ್ನು ಸಹಿಸುವುದಿಲ್ಲ. ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಪಂ ಸಭಾಂಗಣದಲ್ಲಿ ಬುಧವಾರ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ಉದ್ದೇಶಸಿ ಅವರು ಮಾತನಾಡಿದರು. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಮನೆಯ ಹಿರಿಯರ ಹಬ್ಬ ಸಡಗರ ಸಂಭ್ರಮದಿಂದ ಆಚರಿಸಲು ಸಿದ್ದರಾಗಬೇಕು.
ವೇದಿಕೆ ಕಾರ್ಯಕ್ರಮದಲ್ಲಿ ಸಣ್ಣ ಲೋಪವಾದರೆ ನಾನು ಸಹಿಸುವುದಿಲ್ಲ. ಬೆಳಗ್ಗೆ ತಮ್ಮ ಕಚೇರಿಗಳಲ್ಲಿ ಸಾಂಕೇತಿಕವಾಗಿ ಅಚರಿಸಿ ಬಯಲು ರಂಗ ಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಇದು ಒಬ್ಬಿಬ್ಬರ ಕಾರ್ಯಕ್ರಮವಲ್ಲಾ ದೇಶದ ಭಾರತೀಯ ನಾಗರೀಕರ ಜವಾಬ್ದಾರಿಯಾಗಿದೆ ಎಂದರು.
ವಿಭಿನ್ನವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಬೇಕು.ಸಣ್ಣದೊಂದು ಚ್ಯುತಿ ಬಾರದಂತೆ ಮಾಡಲು ಎಲ್ಲರ ಸಹಕಾರಬೇಕು. ಮನೆಯಲ್ಲಿ ಆಚರಿಸುವ ಹಿರಿಯರ ಹಬ್ಬದ ಸಡಗರ ಸಂಭ್ರಮ ಹೇಗಿರುತ್ತೋ ಹಾಗೇಯೇ ಸ್ವಾತಂತ್ರ್ಯ ದಿನಾಚರಣೆಯನ್ನು ಮಾಡಬೇಕು ಎಂದರು.
ಕೈ ಮುಗಿಯುವ ಕೈಯಿಂದ ಪೆನ್ನು ಹಿಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬಾರದು. ಒಂದು ವೇಳೆ ಲೋಪವಾದರೆ ಅದನ್ನು ಸಿಎಂ ಗಮನಕ್ಕೆ ತಂದು ತಪ್ಪು ಮಾಡಿದ ಅಧಿಕಾರಿಗೆ ತಕ್ಕ ಶಿಕ್ಷೆಯಾಗುವಂತೆ ಮಾಡುತ್ತೇನೆ ಎಂದು ಎಚ್ಚರಿಕೆ ಸಂದೇಶ ನೀಡಿದರು.
ಪಟ್ಟಣದ ಬೀದಿ ಬೀದಿಗಳು ಸಿಂಗಾರಗೊಳಿಸಿ ಮದುವಣಗಿತ್ತಿಯಂತೆ ಕಂಗೊಳಿಸಬೇಕು ಅಂತಹ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಮೈಗಳ್ಳತನಕ್ಕೆ ಅವಕಾಶ ನೀಡುವುದಿಲ್ಲ. ಶಿಕ್ಷಣ ಇಲಾಖೆ, ತಾಪಂ ಇಒ, ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ, ಆರೋಗ್ಯ ಇಲಾಖೆ ಸೇರಿ ಎಲ್ಲ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಹೇಳಿದರು.
ಸಭೆಯಲ್ಲಿ ತಹಸೀಲ್ದಾರ್ ಗ್ರೇಡ್ 2 ಮಂಜಾನಂದ, ತಾ.ಪಂ ಇಒ ಚಂದ್ರಶೇಖರ್ ,ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಪ್ರಬಾರ ಬಿಇಒ ಸುರೇಶ್ ರೆಡ್ಡಿ, ಮುಖ್ಯ ಶಿಕ್ಷಕ ರಜಾಕ್, ಎಡಿಎ ಮಿಥುನ್ ಕಿಮಾವತ್, ತೋಟಗಾರಿಕಾ ಅಧಿಕಾರಿ ಅರುಣ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.