suddivijayanews31/07/2024
ಸುದ್ದಿವಿಜಯ, ಜಗಳೂರು: ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಪ್ರಾಥಮಿಕ ಶಾಲೆ ಆವರಣಲ್ಲಿ ದೊಣೆಹಳ್ಳಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಬುಧವಾರ ಅದ್ಧೂರಿಯಾಗಿ ನೆರವೇರಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹಾಗೂ ಕಾಂಗ್ರೆಸ್ ಮುಖಂಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಭಾ ಕಾರಂಜಿ ಎಂಬುದು ವಿದ್ಯಾರ್ಥಿಗಳ ವ್ಯಕ್ತಿತ್ವದ ಅಭಿವೃದ್ಧಿಗೆ ಸಹಾಯವಾಗುತ್ತದೆ.
ಮಕ್ಕಳಲ್ಲಿನ ಸೂಪ್ತ ಪ್ರತಿಭೆಯ ಅನಾವರಣವಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಹೊಸದಾದ ಜೀವನ ಕೌಶಲ ಹೊಂದಲು ವೇದಿಕೆಯಾಗಿದೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಹೊರತರಲು ಶಿಕ್ಷಕರಿಗೆ ಅವಕಾಶವನ್ನು ನೀಡುತ್ತದೆ.
ಅವರಲ್ಲಿರುವ ವ್ಯಕ್ತಿತ್ವ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ರೂಪಿಸಲು ಪೋಷಕರು ಹಾಗೂ ಶಿಕ್ಷಕರನ್ನು ಪ್ರೋತಾಹಿಸುತ್ತದೆ. ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಸಿಆರ್‌ಪಿ ರಾಜಶೇಖರ್ ಮಾತನಾಡಿ, 21 ತೀರ್ಪುಗಾರರು ಹಂಸಕ್ಷೀರ ನ್ಯಾಯದಂತೆ ಮಕ್ಕಳಿಗೆ ನೋವಾಗದ ರೀತಿ ತೀರ್ಪುನೀಡಿ ಎಂದು ಹೇಳಿದರು.
ಕಟ್ಟಿಗೆಹಳ್ಳಿ ಸರಕಾರಿ ಶಾಲೆಯ ಮಕ್ಕಳದಾದ ಕೆ.ಎಸ್.ಸಹನಾ ಇಂಗ್ಲಿಷ್ ಕಂಟಪಾಠ ಪ್ರಥಮ, ಕೆ.ಎಸ್.ಮೌಲ್ಯ ದೇಶಭಕ್ತಿಗೀತೆಯಲ್ಲಿ ಪ್ರಥಮ, ಸಾನ್ವಿ ಛದ್ಮವೇಷದಲ್ಲಿ ಪ್ರಥಮ, ತನುಶ್ರೀ ಅಭಿನಯ ಪ್ರಥಮ, ಭರತ್ ಕೆ.ಎಸ್. ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ಬಿ.ಮಹೇಶ್ವರಪ್ಪ ನೀಡಿದ ಹತ್ತು ಸಾವಿರ ರೂ ನಗದು ಬಹುಮಾನ ತನ್ನದಾಗಿಸಿಕೊಂಡರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಕೂಬಾನಾಯ್ಕ್, ಪ್ರಾಥಮೀಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಹುಲಿಯಪ್ಪ, ಸಹಕಾರ್ಯದರ್ಶಿ ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಪ್ಯಾರಿಮಾ ಬೇಗಂ, ಪಶುವೈದ್ಯ ಹಿರಿಯ ಪಶುವೈದ್ಯ ಪರೀಕ್ಷಕ ಡಾ.ಕೆ.ಎಸ್.ಶಾಂತಕುಮಾರ್,
ಎಸ್‌ಡಿಎಂಸಿ ಅಧ್ಯಕ್ಷ ಎನ್.ಎಂ.ಶಿವಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ್, ಕಟ್ಟಿಗೆಹಳ್ಳಿ ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಜಿ.ಮಂಜುನಾಥ್, ಗ್ರಾಪಂ ಸದಸ್ಯರಾದ ಭಾರತಿ ಮಂಜುನಾಥ್, ಈರಣ್ಣ, ಪ್ರಗತಿಪರ ಕೃಷಿಕ ಎನ್.ಎಸ್.ಸೋಮನಗೌಡ, ಸಹಶಿಕ್ಷಕರಾದ ಮಲ್ಲೇಶಪ್ಪ, ಗಂಗಾಧರ್, ಗೊಂದ್ಯಪ್ಪ ಇದ್ದರು. ದೊಣೆಹಳ್ಳಿ ಕ್ಲಸ್ಟರ್ ಮಟ್ಟದಲ್ಲಿ ಬರುವ 17 ಶಾಲೆಗಳ 293 ಮಕ್ಕಳು ಮತ್ತು ಪೋಷಕರು ಭಾಗವಹಿಸಿದ್ದರು.