ವರಿಷ್ಠರು ಟಿಕೆಟ್ ಕೊಟ್ರೆ ದಾವಣಗೆರೆ ಕ್ಷೇತ್ರದಿಂದ ಲೋಕಾ ಎಲೆಕ್ಷನ್ ಸ್ಪರ್ಧೆಗೆ ಸಿದ್ಧ: ಇನ್ಸೈಟ್ ನಿರ್ದೇಶಕ ವಿನಯ್‍ ಕುಮಾರ್

Suddivijaya
Suddivijaya August 8, 2023
Updated 2023/08/08 at 11:30 AM

ಸುದ್ದಿವಿಜಯ, ಜಗಳೂರು: ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ವರಿಷ್ಠರು, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ, ಶಾಮನೂರು ಶಿವಶಂಕರಪ್ಪ ಸೇರಿಂದಂತೆ ಜಿಲ್ಲಾ ಮಟ್ಟದ ನಾಯಕರು ನನ್ನ ಮೇಲೆ ವಿಶ್ವಾಸವಿಟ್ಟು ಟಿಕೆಟ್ ನೀಡಿದರೆ ಮುಂದಿನ ಲೋಕಸಭಾ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಹಾಗೂ ಇನ್‍ಸೈಟ್ ಐಎಎಸ್ ಕೋಚಿಂಗ್ ಸೆಂಟರ್ ನಿರ್ದೇಶಕರಾದ ಜಿ.ಬಿ.ವಿನಯ್‍ಕುಮಾರ್ ಹೇಳಿದರು.

ಪಟ್ಟಣದ ಪ್ರೆಸ್‍ಕ್ಲಬ್‍ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾನೂ ಸಹ ದಾವಣಗೆರೆ ಜಿಲ್ಲೆಯ ಕಕ್ಕರಗೊಳ್ಳ ಗ್ರಾಮದವನು. ಬಿಎಸ್‍ಸಿ ಪದವೀಧರ. ಪಿಡಿಒ ಆಗಿ ಮೈಸೂರಿನಲ್ಲಿ ಕಾರ್ಯನಿರ್ವಹಿಸಿದ್ದೆ.

ಅದನ್ನು ಬಿಟ್ಟು ನಾಲ್ಕುಬಾರಿ ಯುಪಿಎಸ್‍ಸಿ ಪರೀಕ್ಷೆ ಬರೆದೆ. ಆದರೆ ಕೇವಲ ಎರಡು ಅಂಕಗಳಲ್ಲಿ ಸೆಲೆಕ್ಷನ್ ಆಗಲಿಲ್ಲ. ಜೀವನೋಪಾಯಕ್ಕೆ ಇನ್‍ಸೈಟ್ ಕೋಚಿಂಗ್ ಸೆಂಟರ್ ತೆರೆದು ಸಾವಿರಾರು ವಿದ್ಯಾರ್ಥಿಗಳ ಕನಸು ನನಸು ಮಾಡುವ ಕೆಲಸ ಮಾಡುತ್ತಿದ್ದೇನೆ.

ಬೆಂಗಳೂರು, ದಾವಣಗೆರೆ, ಧಾರವಾಡ, ಜಮ್ಮುಕಾಶ್ಮೀರ ಸೇರಿದಂತೆ ದೇಶದ ನಾನಾ ಭಾಗಗಲ್ಲಿ ಲೋಕಸೇವಾ ಪರೀಕ್ಷೆಗಳ ಕೋಚಿಂಗ್ ಸೆಂಟರ್ ತೆರೆಯುವ ಮೂಲಕ 6ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಐಎಎಸ್ ಪರೀಕ್ಷೆಗೆ ಕೋಚಿಂಗ್ ಕೊಡುತ್ತಿದ್ದೇನೆ. ಪ್ರತಿ ಕೇಂದ್ರದಲ್ಲಿ ನೂರಾರು ಬಡ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡುತ್ತಿದ್ದೇವೆ ಎಂದರು.ಸಾಮಾಜಿಕ ನ್ಯಾಯ, ಬಡವರ ಸೇವೆಗೆ ನಾನು ಬದ್ಧನಾಗಿದ್ದೇನೆ. ವಿದ್ಯಾವಂತ ಯುವಕರ ಒತ್ತಾಯದ ಮೇರೆಗೆ ನಾನು ಲೋಕಸಭೆ ಚುನಾವಣಗೆ ಸ್ಪರ್ಧಿಸಲು ಸಿದ್ಧನಿದ್ದೇನೆ. ಕಾಂಗ್ರೆಸ್ ತತ್ವ ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟುಕೊಂಡು 20 ವರ್ಷಗಳಿಂದ ಪಕ್ಷದ ತತ್ವಕ್ಕೆ ಬದ್ಧನಾಗಿದ್ದೇನೆ ಎಂದರು.

ಶೈಕ್ಷಣೀಕ ಮಟ್ಟ ಸುಧಾರಣೆ, ಪರೀಕ್ಷಾ ಅಕ್ರಮಗಳ ಬಗ್ಗೆ ಧ್ವನಿ ಎತ್ತಲು ಲೋಕಸಭೆಯಲ್ಲಿ ಸದಸ್ಯನ ಅಗತ್ಯತೆಯಿದೆ. ಹೀಗಾಗಿ ನನ್ನ ಸ್ವಕ್ಷೇತ್ರ ದಾವಣಗೆರೆಯಿಂದಲೇ ಟಿಕೆಟ್ ಕೇಳುತ್ತಿದ್ದೇನೆ.

ಕಾಂಗ್ರೆಸ್ ವರಿಷ್ಠರು, ಜಿಲ್ಲಾ ಮಂತ್ರಿಗಳು ಮತ್ತು ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರು ನನಗೆ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಒಂದು ವೇಳೆ ಕಾಂಗ್ರೆಸ್ ಪಕ್ಷದಲ್ಲೇ ಗೆಲ್ಲುವ ನಾಯಕನಿಗೆ ಟಿಕೆಟ್ ಕೊಟ್ಟರೆ ಅವರ ಜೊತೆ ಕೆಲಸ ಮಾಡುತ್ತೇನೆ.

ನನಗೆ ಟಿಕೆಟ್ ಕೊಡದೇ ಇದ್ದರೂ ಬೇರೆ ಪಕ್ಷಕ್ಕೆ ಹೋಗುವ ಮಾತಿಲ್ಲ. ಟಿಕೆಟ್ ಕೊಟ್ಟ ಅಭ್ಯರ್ಥಿಯ ಬೆನ್ನಿಗೆ ನಿಂತು ಗೆಲುವಿಗೆ ಟೊಂಕಕಟ್ಟಿ ನಿಲ್ಲುತ್ತೇನೆ. ಯಾರಿಗೆ ಟಿಕೆಟ್ ಕೊಟ್ಟರೂ ಹಿಂದುಳಿದ ವರ್ಗದ ನಾಯಕರಿಗೆ ಕೊಟ್ಟರೆ ಒಳ್ಳೆಯದು.

ಶಾಸಕರಾದ ಬಿ.ದೇವೇಂದ್ರಪ್ಪ ಭೇಟಿ ಮಾಡಿದೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಯಾರಿಗೆಕೊಟ್ಟರೂ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.

ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ, ನಾನು ಸಹ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಈ ಹಿಂದೆ ದಾವಣಗೆರಗೆ ಮತ್ತು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ವರಿಷ್ಠರಲ್ಲಿ ಟಿಕೆಟ್ ಕೇಳಿದ್ದೆ.

ವರಿಷ್ಠರಾದ ರಾಹುಲ್ ಗಾಂಧಿ ಜೊತೆ ಭಾರತ್ ಜೋಡೋ ಯಾತ್ರೆಯಲ್ಲಿ ದೇಶದಾದ್ಯಂತ ಸಂಚಾರ ಮಾಡಿದ್ದೇನೆ. ಬರುವ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!