ಸುದ್ದಿವಿಜಯ, ಜಗಳೂರು: ದೇಶದ ಅತಿಹೆಚ್ಚು ವಾಯುಮಾಲಿನ್ಯ ನಗರಗಳ ಪಟ್ಟಿಯಲ್ಲಿ ದಾವಣಗೆರೆ ನಗರವೂ ಸೇರಿದ್ದು ಸೂಕ್ಷ್ಮ ಅತಿ ಸೂಕ್ಷ್ಮ ಧೂಳಿನ ಕಣಗಳು ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗುತ್ತಿವೆ ಎಚ್ಚರವಾಗಿರಿ ಎಂದು ಜಿಲ್ಲಾ ವಾಯುಮಾಲಿನ್ಯ ನಿಯಂತ್ರಾಧಿಕಾರಿ ಡಾ. ಲಕ್ಷ್ಮೀಕಾಂತ್ ಎಚ್ಚರಿಸಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ಪಪಂ ಮತ್ತು ದಾವಣಗೆರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ‘ನೀಲಿ ಆಕಾಶಕ್ಕಾಗಿ ಶುದ್ಧ ಗಾಳಿಯ ಅಂತರಾಷ್ಟ್ರೀಯ ದಿನಾಚರಣೆ’ ಅಂಗವಾಗಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಾಯುಮಾಲಿನ್ಯವು ಪರಿಸರದಿಂದ ಉಂಟಾಗುವ ರೋಗಗಳ ಹೊರೆಗೆ ಅತಿ ದೊಡ್ಡ ಕೊಡುಗೆಯಾಗಿದೆ ಮತ್ತು ಜಾಗತಿಕವಾಗಿ ಸಾವು ಮತ್ತು ರೋಗದ ಪ್ರಮುಖ ತಪ್ಪಿಸಬಹುದಾದ ಕಾರಣಗಳಲ್ಲಿ ಒಂದಾಗಿದೆ. ವಿಶ್ವದ ಜನಸಂಖ್ಯೆಯ ಶೇ.99 ಜನರು ಈಗ ಕಲುಷಿತ ಗಾಳಿಯನ್ನು ಉಸಿರಾಡುತ್ತಿದ್ದಾರೆ ಎಂದು ಡಬ್ಲೂಎಚ್‍ಒ ಎಚ್ಚರಿಸಿದೆ. ವಾಯುಮಾಲಿನ್ಯದಿಂದಾಗಿ ಪ್ರತಿ ವರ್ಷ 7 ಮಿಲಿಯನ್ ಜನರು ಸಾಯುತ್ತಾರೆ, ಅವರಲ್ಲಿ ಶೇ.90 ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿವೆ ಎಂದರು.ಜಗಳೂರು ಪಟ್ಟಣದ ಬಯಲು ರಂಗಮಂದಿರದಲ್ಲಿ ನೀಲಿ ಆಕಾಶಕ್ಕಾಗಿ ಶುದ್ಧ ಗಾಳಿಯ ಅಂತಾಷ್ಟ್ರೀಯ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಡುವ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು.
ವಾಯು ಮಾಲಿನ್ಯವು ಯಾವುದೇ ರಾಷ್ಟ್ರೀಯ ಗಡಿಗಳನ್ನು ಹೊಂದಿಲ್ಲ. ಎಲ್ಲ ನಗರ, ಮಹಾನಗರಗಳಿಗೂ ವ್ಯಾಪಿಸುತ್ತಿದೆ. ಇದಕ್ಕೆ ಪರಿಹಾರವೆಂದರೆ ಹಸಿರೀಕರಣ ಹೆಚ್ಚಿಸುವುದಾಗಿದೆ. ಪ್ರತಿಯೊಬ್ಬರೂ ಒಂದೊಂದು ಗಿಡ ನೆಡುವ ಮೂಲಕ ಅದನ್ನು ನಿಯಂತ್ರಿಸಬಹುದು ಎಂದರು.
ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್ ಮಾತನಾಡಿ, ಕಪ್ಪು ಕಾರ್ಬನ್, ಮೀಥೇನ್ ಮತ್ತು ನೆಲಮಟ್ಟದ ಓಝೋನ್‍ನಂತಹ ಕೆಲವು ವಾಯು ಮಾಲಿನ್ಯಕಾರಕಗಳು ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕಗಳಾಗಿವೆ.
2050 ರ ವೇಳೆಗೆ ನಾವು ಮೀಥೇನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮೂಲಕ ಈ ಮಾಲಿನ್ಯಕಾರಕಗಳಿಂದ ಜಾಗತಿಕ ಬೆಳೆ ನಷ್ಟವನ್ನು ಅರ್ಧದಷ್ಟು ಕಡಿಮೆಗೊಳಿಸಬಹುದು. ಇಂದಿನ ಪೀಳಿಗೆಗೆ ವಾಯು ಮಾಲಿನ್ಯದ ಸಮಸ್ಯೆ, ಪರಿಣಾಮ ಮತ್ತು ಪರಿಹಾರಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಬಾಲಭಾರತಿ ಶಾಲೆಯ ಶಿಕ್ಷಕ ರಮೇಶ್, ನವಚೇತನ ಶಾಲೆಯ ತಿಮ್ಮಣ್ಣ, ಪಪಂ ಆರೋಗ್ಯ ನಿರೀಕ್ಷಕ ಕಿಫಾಯತ್, ಪೌರ ಕಾರ್ಮಿಕರು ವಿವಿಧ ಜಾತಿಯ ಗಿಡಗಳನ್ನು ನಾಟಿ ಮಾಡಿದರು.