suddivijaya|Kannada News|07-04-2023
ಸುದ್ದಿವಿಜಯ,ಜಗಳೂರು:ದಕ್ಷಿಣ ಕಾಶಿ ಎನಿಸಿರುವ ಮುಸ್ಟೂರೇಶ್ವರ ಸ್ವಾಮಿಯ ಪವಾಡಗಳಿಂದ ಅಪಾರ ಭಕ್ತರನ್ನು ಹೊಂದಿರುವ ಪುಣ್ಯ ಕ್ಷೇತ್ರ ಮುಸ್ಟೂರು.
ಭರತ ಖಂಡದಲ್ಲಿ ಆಂಧ್ರಪ್ರದೇಶ ಎಂಬುವುದು ದಕ್ಷಿಣ ಭಾರತದ ಒಂದು ದೊಡ್ಡ ರಾಜ್ಯ. ಅನಂತಪುರ ಜಿಲ್ಲೆ ರಾಯದುರ್ಗ ತಾಲೂಕಿನ ಸೋಗೇನಹಳ್ಳಿ ಗ್ರಾಮದಲ್ಲಿ ಜಂಗಮ ದಂತಪತಿಗಳಾದ ಶಾಂತಲ ಮತ್ತು ಮಲ್ಲರ‍್ಯ ಎಂಬ ಭಕ್ತರು ವಾಸವಾಗಿದ್ದರು. ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಗಳ ಭಕ್ತಿಯ ಆರಾಧಕರಾಗಿದ್ದರು. ಮಕ್ಕಳ ಭಾಗ್ಯವಿಲ್ಲದ ಇವರು ಅನೇಕ ವರ್ಷಗಳ ವರೆಗೂ ಗಿರಿನಾಥನನ್ನು ಪೂಜಿಸಿದರು. ನಿಮಗೊಂದು ಗಂಡುಪುತ್ರನನ್ನು ಕರುಣಿಸುವೆ ಎಂದು ಸ್ವಪ್ನದಲ್ಲಿ ಹೇಳಿದಂತಾಯಿತು. ತರುವ ಶಾಂತಲಾ ಗರ್ಭ ಧರಿಸಿ ಗಂಡು ಮಗುವಿಗೆ ಜನ್ಮ ನೀಡಿದಳು, ಸೂರ್ಯಪ್ರಭೆಯಂತೆ ಕಂಗೊಳಿಸುತ್ತಿದ್ದ ಮಗುವಿಗೆ ಮುತ್ತೈದೆಯರು ಲಿಂಗಾರ್ಯನೆಂದು ನಾಮಕರಣ ಮಾಡಿದರು. ಜ್ಞಾನವುಳ್ಳನಾಗಿದ್ದ ಪುತ್ರನಿಗೆ ಶಿಕ್ಷಣಕ್ಕೆ ಗುರುಕುಲಕ್ಕೆ ಕಳುಹಿಸಿದರು.
15ನೇ ವಯಸ್ಸಿನಲ್ಲಿ ಶ್ರೀಶೈಲಕ್ಷೇತ್ರಕ್ಕೆ ತೆರಳಿ ಗಿರಿನಾಥನ ಸನ್ನಿದಿಯಲ್ಲಿ ಹುಚ್ಚನಂದದಿ ಕುಣಿಯುತ್ತಾ ಆರಾಧಕನಾದನು. ಪೋಷಕರು ಕರೆದರು ಕ್ಷೇತ್ರ ಬಿಟ್ಟು ಹೊರಬರುವುದಿಲ್ಲವೆಂದು ಹಠ ಮಾಡಿದ್ದರಿಂದ ಪೋಷಕರು ತಮ್ಮ ಗ್ರಾಮಕ್ಕೆ ವಾಪಸ್ಸಾದರು.
ಒಂದು ದಿನ ದೇವರು ಕೃಪೆ ದೊರೆಯಬೇಕೆಂದು ಅಲ್ಲಿನ ಲಿಂಗಕ್ಕೆ ತಲೆಯನ್ನು ಹೊಡೆದುಕೊಳ್ಳಲು ಭಕ್ತಿಗೆ ಮೆಚ್ಚಿದ ಶ್ರೀಶೈಲ ಮಲ್ಲಿಕಾರ್ಜುನ ಪ್ರತ್ಯೆಕ್ಷನಾಗಿ ಏನು ವರಬೇಕೆಂದು ಕೇಳಿದನು, ಆಗ ಲಿಂಗಾರ್ಯನು ಜಗದ ಜನರ ಸೇವೆ ಮಾಡಲು ಅನುಗ್ರಹಿಸು ಎಂದು ಬೇಡಿಕೊಂಡನು. ಸಕಲ ಪುಣ್ಯಕ್ಷೇತ್ರಗಳನ್ನು ತಿರುಗಿ ಮಹಾ ಪುರುಷರ ದರ್ಶನ ಪಡೆದು ನನ್ನಲ್ಲಿ ಐಕ್ಯನಾಗೆಂದು ಸದೃಶ್ಯನಾದನು. ಅದರಂತೆ ಹಂಪಿ, ಉಜ್ಜಯಿನಿ, ರಾಯದುರ್ಗದ ಕೆಂಪಯ್ಯ, ನಾಯಕನಹಟ್ಟಿ ತಿಪ್ಪೇಸ್ವಾಮಿ, ಹಿರಿಯೂರಿನ ಮಲ್ಲೇಶ್ವರಸ್ವಾಮಿ, ಚಿತ್ರದುರ್ಗದ ಸಂಪಿಗೆ ಸಿದ್ದೇಶ್ವರದಲ್ಲಿ ಹುಚ್ಚನಂತೆ ಕುಣಿಯುವುದು ಕಂಡು ಕಾರಾಗೃಹಕ್ಕೆ ಹಾಕಿದರು, ಆನೆ ಕಾಲಿನಿಂದ ತುಳಿಸಿದರು.
ಮರಳಿನಲ್ಲಿ ಹೂತುಹಾಕಿದರು ಬದುಕಿರುವುದನ್ನು ಕಂಡು ಇವನೊಬ್ಬ ಪವಾಡ ಪುರುಷನೆಂದು ಭಾವಿಸಿ ಈತನಿಗೆ ಪೂಜಿಸಿ ಕಲ್ಲೇದೇವರಪುರಕ್ಕೆ ಕಳುಹಿಸಿದರು.
ಅಲ್ಲಿ ಬಿಕ್ಷಾಟನೆ ಮಾಡಿ ದಾಸೋಹಕಾರ್ಯಗೈಯುತ್ತಿರಲು ಅಲ್ಲಿನ ಅರ್ಚಕರು ನಿಂದಿಸಿದರು. ಅಲ್ಲಿ ಕುಷ್ಠರೋಗದಿಂದ ನರಳುತ್ತಿದ್ದ ನೀಲಮ್ಮಳನ್ನು ಗುಣಪಡಿಸಿದರು. ಲಿಂಗಾರ್ಯನ ಜತೆಯಲ್ಲಿ ಸಮೀಪದ ಮುಸ್ಟೂರಿಗೆ ಬಂದು ನೆಲಸಿದ ಅವರಿಗೆ ಗ್ರಾಮದ ಬಸಪ್ಪಗೌಡ ಒಂದು ಚಿಕ್ಕ ಜಾಗದಲ್ಲಿ ಆಶ್ರಮವನ್ನು ಕಟ್ಟಿಕೊಳ್ಳಲು ಜಾಗ ನೀಡಿದರು. ಪ್ರತಿನಿತ್ಯ ಬಿಕ್ಷಾಟನೆ ಮಾಡಿ ದಾಸೋಹ ಕಾರ್ಯ ಮಾಡುತ್ತಿದ್ದರು.
ಹೀಗೆ ಒಂದು ದಿನ ದಾಸೋಹ ಕಾರ್ಯಕ್ಕೆ ಸೊಪ್ಪು ಇಲ್ಲದಾಗ ಬೇವಿನ ಸೊಪ್ಪು ಹಾಕಿ ಸಾಂಬಾರ ಮಾಡಿ ಭಕ್ತರಿಗೆ ಉಣಬಡಿಸಿದ್ದರು. ಸ್ವಾಮಿಗಳ ಆಜ್ಞೆಯಂತೆ ಪ್ರತಿದಿನ ಭಜನೆ, ಶಿವಪುರಾಣ, ಧ್ಯಾನ, ಜ್ಞಾನಾಮೃತ ನಡೆಯುತ್ತದ್ದವು.
ಬಿಕ್ಷಾಟನೆ ಮಾಡುವ ವೇಳೆ ಗ್ರಾಮದ ಮುದುಕಿಯೊಬ್ಬಳು ಸ್ವಾಮಿಗಳ ಹುಚ್ಚಾಟ ಮಾಡುತ್ತಾನೆಂದು ತಿಳಿದು ಸಗಣಿಯ ಮುದ್ದೆಯನ್ನು ನೀಡುತ್ತಾಳೆ. ಅದನ್ನೆ ಪ್ರಸಾದವೆಂದು ಸವಿದು ಅಂದೇ ವೈರಾಗ್ಯತಳೆದು ಊರಿನ ಮುಖಂಡರನ್ನು ಕರೆಯಿಸಿ ಪೂರ್ವ ದಿಕ್ಕಿನಲ್ಲಿ ಜಾಗವನ್ನು ತೋರಿಸಿ ಸಮಾಧಿ ತೆಗೆಯಿರಿ ಎಂದು ತಿಳಿಸಿದರು.
ಸಮಾದಿ ತೆಗೆಯುವ ಸಂದರ್ಭದಲ್ಲಿ ದೊಡ್ಡ ಹೆಬ್ಬಂಡೆ ಅಡ್ಡವಾಗಿ ಬರುತ್ತದೆ. ಇದನ್ನು ಸ್ವಾಮಿಗಳಿಗೆ ತಿಳಿಸಲಾಗಿ ನೀವೇನು ಯೋಚಿಸಬೇಡಿರಿ ಶ್ರೀಶೈಲ ಇಚ್ಚೆ ಎಂದಾಗ ಮರುದಿ ಬೆಳಗ್ಗೆ ನೋಡಲಾಗಿ ಹೆಬ್ಬಂಡೆ ಪಕ್ಕಕ್ಕೆ ಸರಿದಿರುವುದು ಕಂಡ ಭಕ್ತರು ಆಶ್ಚರ್ಯಗೊಳ್ಳುತ್ತಾರೆ. ಗ್ರಾಮಸ್ಥರ ಸಮ್ಮುಖದಲ್ಲಿ ಸ್ವಾಮಿ ಜೀವ ಸಮಾಧಿ ಮಾಡಲಾಗುತ್ತದೆ. ಸಮಾದಿ ಕಾಯಲು ಹೋಗಿದ್ದ ಮೂಗನಿಗೆ ಅಶರೀರವಾಣಿ ನುಡಿದು ಶ್ರೀ ಜೀವೈಕ್ಯರಾಗುತ್ತಾರೆ.
ಲಿಂಗಾರ್ಯರು ಅನೇಕ ಪುಣ್ಯ ಕ್ಷೇತ್ರಗಳನ್ನು ತಿರುಗಿ ಮುಸ್ಟೂರಿನಲ್ಲಿ ಅನೇಕ ಪವಾಡಗಳನ್ನು ಮಾಡಿ ಜೀವ ಸಮಾದಿಯಾಗಿದ್ದ ಇವರಿಗೆ ಮುಸ್ಟೂರೇಶ್ವರ ಸ್ವಾಮಿ ಎಂಬ ಹೆಸರು ಚಿರಸ್ಮರಣಿಯವಾಯಿತು.