ಸುದ್ದಿವಿಜಯ, ಜಗಳೂರು: ತಾಲೂಕನ್ನು ಪುನಃ ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆ ಮಾಡಬೇಕು ಎಂಬ ಕೆಲವೇ ವ್ಯಕ್ತಿಗಳ ತೀರ್ಮಾನಕ್ಕೆ ವಿರೋಧಿಸಿ ಪಕ್ಷಾತೀತವಾಗಿ ಶನಿವಾರ ಶಾಸಕ ಬಿ.ದೇವೇಂದ್ರಪ್ಪ ಭೇಟಿ ಮಾಡಿ ಚರ್ಚಿಸಿ ಮನವಿ ಸಲ್ಲಿಸಿದರು.
ಇದಕ್ಕೂ ಮುನ್ನ ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಜಗಳೂರು ದಾವಣಗೆರೆಯಲ್ಲಿ ಉಳಿಯುವ ಹಿನ್ನೆಲೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅಭಿಪ್ರಾಯ ಹಂಚಿಕೊಂಡರು.
ಜಗಳೂರು ತಾಲೂಕು ದಾವಣಗೆರೆ ಜಿಲ್ಲೆಯಲ್ಲಿಯೇ ಉಳಿಯಬೇಕು ಹಾಗಾಗಿ ಎಲ್ಲರು ಒಕ್ಕೊರಲಿನಿಂದ ಹೋರಾಟ ನಡೆಸಲು ಸಿದ್ದತೆ ಮಾಡಿಕೊಳ್ಳಬೇಕೆಂದು ತೀರ್ಮಾನಿಸಲಾಯಿತು.
ನಿವೃತ್ತ ಉಪನ್ಯಾಸಕ ಸುಭಾಷ್ ಚಂದ್ರ ಮಾತನಾಡಿ, 1997ರವರೆಗೂ ಜಗಳೂರು ತಾಲೂಕು ಚಿತ್ರದುರ್ಗ ಜಿಲ್ಲೆಯ 9 ತಾಲೂಕುಗಳಲ್ಲಿ ಒಂದಾಗಿತ್ತು. ಆದರೆ ಚಿತ್ರದುರ್ಗದೊಂದಿಗೆ ಜಗಳೂರು ಜತೆಯಲ್ಲಿದ್ದರೂ ಯಾವುದೇ ಅಭಿವೃದ್ದಿಗೊಂಡಿಲ್ಲ.ಜಗಳೂರು ಚಿತ್ರದುರ್ಗಕ್ಕೆ ಮರು ಸೇರ್ಪಡೆ ಬೇಡ, ದಾವಣಗೆರೆ ಜಿಲ್ಲೆಯಲ್ಲಿಯೇ ಉಳಿಯಬೇಕು ಇದಕ್ಕೆ ಸಹಕಾರ ನೀಡಬೇಕು ಎಂದು ಮುಖಂಡರು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
1997ರಲ್ಲಿ ಗದ್ದಿಗೌಡರ್, ಹುಂಡೇಕರ್ ಮತ್ತು ವಾಸುದೇವರ ಸಮಿತಿಯನ್ನು ಆಧರಿಸಿ ಆಗಿನ 20 ಜಿಲ್ಲೆಗಳನ್ನು 27ಕ್ಕೆ ಏರಿಸಿ, ಆಗಿನ ಸಿ.ಎಂ ಜೆ.ಎಚ್ ಪಟೇಲರು ಚಿತ್ರದುರ್ಗದಿಂದ ಬೇರ್ಪಡಿಸಿ ದಾವಣಗೆರೆ, ಹರಿಹರ, ಜಗಳೂರು ಇದರ ಜತೆಗೆ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯನ್ನು ಒಗ್ಗೂಡಿಸಿ ದಾವಣಗೆರೆ ಜಿಲ್ಲೆ ಜನ್ಮ ತಾಳಿದೆ.
ಜಗಳೂರು ದಾವಣಗೆರೆಗೆ ಸೇರಿ 25 ವರ್ಷಗಳಾಗಿವೆ. ಈವರೆಗೂ ಯಾವ ಜನ ನಾಯಕರು ದಾವಣಗೆರೆ ಸೇರಿದನ್ನು ಯಾರು ಪ್ರಶ್ನೆ ಮಾಡಿಲ್ಲ. ಐದಾರು ಮಂದಿ ಕ್ಷೇತ್ರದಲ್ಲಿ ಶಾಸಕರಾಗಿ ಉತ್ತಮ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ.
ಬಳ್ಳಾರಿಯ ಜಿಲ್ಲೆಯ ಹರಪನಹಳ್ಳಿ ವಿಜಯನಗರ ಜಿಲ್ಲೆಗೆ ಮರು ಸೇರ್ಪಡೆಗೊಂಡ ನಂತರ. ತಾಲೂಕಿನ ಕೆಲ ಸಹೋದರರು ಚಿತ್ರದುರ್ಗಕ್ಕೆ ಮರು ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಅಲ್ಲಿಗೆ ಹೋಗುವುದರಿಂದ ಪ್ರಯೋಜನವೇನಿದೆ ಎಂದು ಪ್ರಶ್ನಿಸಿದರು.
ಪ.ಪಂ ಮಾಜಿ ಸದಸ್ಯ ನಾಗರಾಜ್ ನಾಯ್ಕ ಮಾತನಾಡಿ, ಚಿತ್ರದುರ್ಗ ಬಯಲು ಸೀಮೆಯಾಗಿದ್ದು ಆ ವ್ಯಾಪ್ತಿಯ ತಾಲೂಕುಗಳೇ ಅಭಿವೃದ್ದಿ ಮೆಟ್ಟಿಲೇರುತ್ತಿವೆ. ಅಲ್ಲಿ ಶೈಕ್ಷಣಿಕ ಸೌಲಭ್ಯಗಳು ಅಷ್ಟಾಗಿ ಇಲ್ಲ. ವ್ಯಾಪಾರ ವಹಿವಾಟು ಕಡಿಮೆ ಇದೆ.
ಈಗಿರುವಾಗ ಜಗಳೂರು ಸೇರಿದರೆ ನಮ್ಮ ಗೋಳು ಕೇಳುವವರೇ ಇಲ್ಲದಂತಾಗುತ್ತದೆ. ಹಾಗಾಗಿ ಚಿತ್ರದುರ್ಗಕ್ಕಿಂತ ದಾವಣಗೆರೆ ಜಿಲ್ಲೆಯಲ್ಲಿರುವುದೇ ಉತ್ತಮವೆಂದರು.
ಹಿರಿಯ ವಕೀಲ ಕೆ.ಎಂ ಬಸವರಾಜ್ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿರುವ ಜಗಳೂರು ಹೂವಿನ ಜತೆ ನಾರು ಸ್ವರ್ಗ ಸೇರಿದಂತಾಗಿದೆ. ನಮ್ಮ ತಾಲೂಕು ಬರಗಾಲ ಹಾಗೂ ಹಿಂದುಳಿದ ಪ್ರದೇಶವಾಗಿದೆ.
ಇದರಿಂದ ಎಲ್ಲಾ ಚುನಾಯಿತರು ಜಗಳೂರು ಅಭಿವೃದ್ದಿಯ ಬಗ್ಗೆ ಗಮನಹರಿಸುತ್ತಾರೆ. ನ್ಯಾಯಾಲಯದ ಪ್ರಕರಣಗಳಿಗೆ ಎಲ್ಲರು ದಾವಣಗೆರೆ ಹೋಗಬೇಕಾಗಿತ್ತು. ಆದರೆ ಇದೀಗ ಜಗಳೂರಿನಲ್ಲಿಯೇ ನ್ಯಾಯಾಲಯ, ಅಗ್ನಿಶಾಮಕ ಠಾಣೆ, ಪಿಯು,ಪದವಿ, ಐಟಿಐ ಕಾಲೇಜುಗಳು ಆಗಿವೆ.
57ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಾಗಿದೆ. ಭದ್ರ ಮೇಲ್ದಂಡೆ ಯೋಜನೆ ಶುರುವಾಗುತ್ತಿದೆ. ಆದ್ದರಿಂದ ಚಿತ್ರದುರ್ಗ ಸೇರ್ಪಡೆ ಹೋರಾಟ ಅವಶ್ಯಕತೆ ಇಲ್ಲ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಎಚ್.ಸಿ ಮಹೇಶ್, ಮುಖಂಡರಗಳಾದ ಶಿವನಗೌಡ, ಮೋಬೈಲ್ ಮಂಜುನಾಥ್, ದಿದ್ದಿಗಿ ಕರಿಬಸವನಗೌಡ, ಜಿ.ಎಚ್ ಶಂಭುಲಿಂಗಪ್ಪ, ಬಸವಾಪುರ ರವಿಚಂದ್ರ, ಗೋಡೆ ಪ್ರಕಾಶ್, ಶಿವಕುಮಾರ್‍ಸ್ವಾಮಿ, ದೀಪಕ್ ಪಟೇಳ್, ಹರೀಶ್, ಚಂದ್ರನಾಯ್ಕ ಸೇರಿದಂತೆ ಮತ್ತಿತರರಿದ್ದರು.
ಶಾಸಕರಿಗೆ ಮನವಿ:
ಜಗಳೂರು ಚಿತ್ರದುರ್ಗಕ್ಕೆ ಮರು ಸೇರ್ಪಡೆಯಿಂದ ಸಾಕಷ್ಟು ಸಮಸ್ಯೆ, ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ದಾವಣಗೆರೆ ಜಿಲ್ಲೆಯಲ್ಲಿಯೇ ಉಳಿಯಬೇಕು ಇದಕ್ಕೆ ಸಹಕಾರ ನೀಡಬೇಕು ಎಂದು ಮುಖಂಡರು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಶಾಸಕರು, ಜಗಳೂರು ಬೇರೆ ಜಿಲ್ಲೆಗೆ ಸೇರ್ಪಡೆ ವಿಚಾರ ನನ್ನ ಗಮನಕ್ಕೆ ಇಲ್ಲ, ಉಳಿಸಿಕೊಳ್ಳಬೇಕು ಅಭಿಪ್ರಾಯಗಳು ಬಂದಿವೆ. ಆದರೆ ಸಾರ್ವಜನಿಕರಿಗೆ ಎಲ್ಲಿ ಹಿತವೆನಿಸುತ್ತದೆಯೋ ಅವರ ಪರವಾಗಿ ನಾನು ಇರುತ್ತೇನೆ.
ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳಾಗಬೇಕಾಗಿದೆ. ಕೆರೆಗಳಿಗೆ ನೀರು ತುಂಬಿಸಬೇಕಾಗಿದೆ. ಬರ ನಿರ್ವಹಣೆ ಮಾಡಬೇಕಾಗಿದೆ. ನನ್ನ ಮೇಲೆ ಸಾಕಷ್ಟು ಜವಾಬ್ದಾರಿ ಇದೆ ಆದ್ದರಿಂದ ಎಲ್ಲರು ಒಗ್ಗೂಡಿ ಮಾತನಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸ್ವಾತಂತ್ರ್ಯ ಭಾರತದಲ್ಲಿ ಹೋರಾಟ, ಪ್ರತಿಭಟನೆ ಸಹಜ ಇದರಲ್ಲಿ ಯಾರು ಮೇಲು, ಕೇಳು ಇಲ್ಲ ಎಲ್ಲರು ಸಮಾನರೇ ಆಗಿದ್ದೇವೆ. ಕ್ಷೇತ್ರ ಮುಂದಿನ ಐದು ವರ್ಷಗಳಲ್ಲಿ ಪ್ರಗತಿಯತ್ತಾ ಕೊಂಡೊಯ್ಯಲು ಎಲ್ಲರು ಸಂಪೂರ್ಣ ಸಹಕಾರ ನೀಡಬೇಕು ಎಂದರು.