ಜಗಳೂರು:ದೇವೇಂದ್ರಪ್ಪಗೆ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅಭಯ ʼಹಸ್ತʼ

Suddivijaya
Suddivijaya May 6, 2023
Updated 2023/05/06 at 1:16 AM

ಸುದ್ದಿವಿಜಯ, ಜಗಳೂರು: ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅವರಿಗೆ ಕೂಡಲ ಸಂಗಮ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅಭಯ ಹಸ್ತ ನೀಡಿ ಆಶೀರ್ವದಿಸಿ ಗೆಲುವಿನ ಮುನ್ಸೂಚನೆ ನೀಡಿದ್ದಾರೆ.

ಶುಕ್ರವಾರ ರಾತ್ರಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ದೇವೇಂದ್ರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಶ್ರೀಗಳು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಶ್ರೀಗಳು ಮತ್ತು ದೇವೇಂದ್ರಪ್ಪ ಅವರು ಸುದೀರ್ಘ ಚರ್ಚೆ ನಡೆಸಿದರು. ನಾನು ತಳಮಟ್ಟದಿಂದ ಕಷ್ಟ ಪಟ್ಟ ಮೇಲೆ ಬಂದವನು.

ಈ ಕ್ಷೇತ್ರದ ಜನತೆಯ ಅಭ್ಯುದಯಕ್ಕೆ ಕನಸು ಕಂಡಿದ್ದೇನೆ. ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಮನಸ್ಸು ಮಾಡಿದ್ದೇನೆ. ನಿಮ್ಮ ಆಶೀರ್ವಾದ ಬೇಡುತ್ತೇನೆ. ಒಂದು ಅವಕಾಶ ಕೊಟ್ಟರೆ ಜನರ ಸೇವೆಯನ್ನು ಕಾಯಾ, ವಾಚಾ, ಮನಸ್ಸಾ ಶಿರಬಾಗಿ ಮಾಡುತ್ತೇನೆ ಎಂದು ಸ್ವಾಮೀಜಿಯವರಲ್ಲಿ ಭಿನ್ನಹಿಸಿಕೊಂಡರು.

ಶ್ರೀಗಳಿಗೆ ದೇವೇಂದ್ರಪ್ಪ ಪಾದ ಪೂಜೆ:

ಜಯಮೃತ್ಯುಂಜಯ ಶ್ರೀಗಳು ಮನೆಗೆ ಬಂದೊಡನೆ ದೇವರ ಕೊಠಡಿಗೆ ಶ್ರೀಗಳನ್ನು ಕರೆದೊಯ್ದು ದೇವೇಂದ್ರಪ್ಪ ಅವರು ಶ್ರೀಗಳಿಗೆ ಪಾದ ಪೂಜೆ ನೆರವೇರಿಸಿದರು. ಮನಪೂರ್ವಕವಾಗಿ ಆಶೀರ್ವಾದ ಮಾಡಿದ ಶ್ರೀಗಳು ನಿಮ್ಮ ಬೆಟ್ಟದಂತಹ ಕಷ್ಟಗಳು ಮಂಜಿನಂತೆ ಕರಗುತ್ತವೆ.

ಆ ಭಗವಂತ ನಿಮ್ಮ ಸೇವೆಗೆ ಮೆಚ್ಚಿದ್ದಾನೆ. ನೀವು ಆತಂಕ ಪಡಬೇಡಿ. ದೇವರ ಆಶೀರ್ವಾದ, ಕ್ಷೇತ್ರದ ಜನರ ಆಶೀರ್ವಾದ ನಿಮ್ಮ ಮೇಲಿದೆ ಎಂದು ದೇವೇಂದ್ರಪ್ಪ ಅವರಿಗೆ ಶ್ರೀಗಳು ಆಶೀರ್ವಾದಿಸಿದರು.

ತಳಮಟ್ಟದಿಂದ ಬಂದವನು ನಾನು ಸೇವೆಗೆ ಆಶೀರ್ವದಿಸಿ:

ನಾನು ಕಾಲೇಜೊಂದರಲ್ಲಿ ಜವಾನನಾಗಿ ಸೇವೆ ಸಲ್ಲಿಸಿದವನು. ದೈವಾನುಗ್ರಹದಿಂದ ಸಮಾಜದ ಸೇವೆ ಮಾಡಲು ನನಗೊಂದು ಅವಕಾಶ ಸಿಕ್ಕಿದೆ. ಕಾಂಗ್ರೆಸ್‌ ವರಿಷ್ಠರು ನನ್ನನ್ನು ನಂಬಿ ಟಿಕೆಟ್‌ ಕೊಟ್ಟಿದ್ದಾರೆ. ನಿಮ್ಮ ಮತ್ತು ಜನರ ಆಶೀರ್ವಾದ ಬೇಡುತ್ತೇನೆ ಎಂದು ಸ್ವಾಮೀಜಿಗೆ ಶಿರಬಾಗಿ ನಮಿಸಿದರು.

ಎಲ್ಲವೂ ಸರಿಹೋಗುತ್ತವೆ. ನೀವು ನಿರಾತಂಕವಾಗಿರಿ. ದೇವರ ಇಚ್ಛೆಯಂತೆ ನಿಮ್ಮ ಮನೆಗೆ ಬಂದಿದ್ದೇನೆ. ಎಲ್ಲೋ ಹೋಗಬೇಕಾದ ನಮ್ಮನ್ನು ನಿಮ್ಮ ಮನೆಗೆ ಭಗವಂತನೇ ಕಳುಹಿಸಿದ್ದಾನೆ. ನಮ್ಮ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ. ನಾನು ನಿಮ್ಮ ಜೊತೆ ಮತ್ತೆ ಮಾತನಾಡುತ್ತೇನೆ. ಎಲ್ಲವೂ ಸರಿ ಹೋಗುತ್ತದೆ ಎಂದು ದೇವೇಂದ್ರಪ್ಪ ಅವರಿಗೆ ಶ್ರೀಗಳು ಆಶೀರ್ವಾದ ಮಾಡಿದರು.

ಶ್ರೀಗಳಿಂದ ಸಮಾಜದ ಮುಖಂಡರಿಗೆ ಸಂದೇಶ!

ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು ಎಂದು ನಿರಂತರವಾದ ಹೋರಾಟಕ್ಕೆ ನ್ಯಾಯ ಸಿಕ್ಕಿಲ್ಲ. ಸಮಾಜದ ಜನ ಒಗ್ಗೂಡಬೇಕು. ಸಮಾಜವನ್ನು ಒಡೆಯುವ ದುಷ್ಟ ಶಕ್ತಿಗಳಿಗೆ ಬುದ್ಧಿ ಕಲಿಸುವ ಅಗತ್ಯವಿದೆ ಎಂದು ಸ್ವಾಮೀಜಿ ಮುಖಂಡರಿಗೆ ಸಂದೇಶ ನೀಡಿದರು ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ವೇಳೆ ದೇವೇಂದ್ರಪ್ಪ ಅವರ ಪುತ್ರ ಕೀರ್ತಿಕುಮಾರ್‌, ದೇವೇಂದ್ರಪ್ಪ ಪತ್ನಿ, ಮೊಮ್ಮಕ್ಕಳು, ನೂರಾರು ಕಾರ್ಯಕರ್ತರು ಆಶೀರ್ವಾದ ಪಡೆದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!