ದುರಾಸೆ ಬಿಟ್ಟು ಮೌಲ್ಯಯುತ ಜೀವನ ನಡೆಸಿ: ನ್ಯಾ.ಸಂತೋಷ್ ಹೆಗ್ಡೆ

Suddivijaya
Suddivijaya December 27, 2023
Updated 2023/12/27 at 2:03 PM

ಸುದ್ದಿವಿಜಯ, ಜಗಳೂರು: ನಾನು ನ್ಯಾಯಾಧೀಶನಾಗಿ, ಕರ್ನಾಟಕ ಲೋಕಾಯುಕ್ತ ಮುಖ್ಯಸ್ಥನಾಗಿ ಕೋಟಿ ಕೋಟಿ ಹಣ ಸಂಪಾದನೆ ಮಾಡಬಹುದಿತ್ತು. ಆದರೆ ನನಗೆ ಅಂತಹ ದುರಾಸೆ ಆಗಲೂ ಇಲ್ಲ ಈಗಲೂ ಇಲ್ಲ. ಮೌಲ್ಯಯುತ ಜೀವನವೇ ನಿಜವಾದ ಬದುಕು ಎಂದು ನ್ಯಾ.ಸಂತೋಷ್ ಹೆಗ್ಡೆ ಹೇಳಿದರು.

ಪಟ್ಟಣದ ಜೆ.ಎಂ ಇಮಾಂ ಪ್ರೌಢ ಶಾಲಾ ಆವರಣದ ಸಂತ ಶಿಶುನಾಳ ಶರೀಫ್ ಸಾಹೇಬರ ರಂಗ ಮಂದಿರದಲ್ಲಿ ಬುಧವಾರ ನಡೆದ 23ನೇ ಮಕ್ಕಳ ಹಬ್ಬ ಹಾಗೂ ಮುಷೀರ್-ಉಲ್-ಮುಲ್ಕ್ ಜೆಎಂ ಇಮಾಂ ಸ್ಮಾರಕ 5ನೇಯ ವರ್ಷದ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಲೋಕಾಯುಕ್ತಕ್ಕೆ ಬರುವುದಕ್ಕೂ ಮುಂಚೆ ನಾನು ಕೂಪಮಂಡೂಕನಾಗಿದ್ದೆ. ನಂತರ ಗೊತ್ತಾಗಿದ್ದು ಸಮಾಜ ಎಷ್ಟೊಂದು ಭ್ರಷ್ಟವಾಗಿದೆ ಎಂದು ಅನ್ನಿಸಿತು. ನನ್ನ ಅಧಿಕಾರದ ಅವಧಿಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರ ವಿರುದ್ಧ ಚಾರ್ಜ್ ಶೀಟ್ ಹಾಕಿದ್ದೇನೆ.

ಜೈಲಿಗೆ ಹೋಗಿ ಬಂದವರನ್ನು ಸತ್ಕರಿಸುವ ಜನ ಪ್ರಾಮಾಣಿಕರ ಬಗ್ಗೆ ಮಾತನಾಡುವುದಿಲ್ಲ. ಇದು ವ್ಯಕ್ತಿಗಳ ತಪ್ಪಲ್ಲ ಸಮಾಜದ ತಪ್ಪು ಎಂದರು. ಶ್ರೀಮಂತರಾಗಬೇಕು ಎಂಬ ಕನಸು ಕಾಣುವುದು ತಪ್ಪಲ್ಲ. ಶ್ರೀಮಂತರಾಗಿ ಕೋಟಿ ಕೋಟಿ ಹಣ ಮಾಡಿ ಆದರೆ ಆ ಹಣ ಕಾನೂನಿನ ಚೌಕಟ್ಟಿನಲ್ಲಿ ಮಾಡಿದರೆ ಮೌಲ್ಯ ಹೆಚ್ಚಿರುತ್ತದೆ. ಶ್ರೀಮಂತಿಕೆ ಅಧಿಕಾರ ಶಾಶ್ವತವಲ್ಲ.  ಜಗಳೂರು ಪಟ್ಟಣದ ಜೆಎಂ ಇಮಾಂ ಶಾಲೆಯಲ್ಲಿ ನ್ಯಾ.ಸಂತೋಷ್‍ಹೆಗ್ಡೆ ಅವರಿಗೆ ಇಮಾಂ ಸ್ಮಾರಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.ಜಗಳೂರು ಪಟ್ಟಣದ ಜೆಎಂ ಇಮಾಂ ಶಾಲೆಯಲ್ಲಿ ನ್ಯಾ.ಸಂತೋಷ್‍ಹೆಗ್ಡೆ ಅವರಿಗೆ ಇಮಾಂ ಸ್ಮಾರಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಸಮಾಜದ ಭಾವನೆ ಬದಲಾಯಿಸದಿದ್ದರೆ ಉದ್ಧಾರವಾಗಲು ಸಾಧ್ಯವಿಲ್ಲ. ಪ್ರತಿಯೊಂದು ದಶಕಗಳಲ್ಲಿ ಈ ದೇಶದಲ್ಲಿ ಬೃಹತ್ ಹಗರಣಗಳು ನಡೆದಿವೆ. ಕೋಲ್‍ಗೇಟ್, 2ಜಿ ಸೇರಿದಂತೆ ಕೋಟ್ಯಾಂತರ ರೂ. ಭ್ರಷ್ಟಾಚಾರವಾಗಿದೆ. ಇದಕ್ಕೆ ಕಾರಣ ಪ್ರಶ್ನಿಸದೇ ಇರುವ ಸಮಾಜದ ತಪ್ಪು.

ತೃಪ್ತಿ ಮತ್ತು ಮಾನವೀಯತೆಯನ್ನು ಅಳವಡಿಸಿಕೊಳ್ಳಿ, ನಿಮ್ಮ ಮಕ್ಕಳಿಗೂ ಅದೇ ಮಾರ್ಗ ತಿಳಿಸಿ ಎಂದು ಪೋಷಕರಿಗೆ ತಿಳಿ ಹೇಳಿದರು. ಇಮಾಂ ಸಾಹೇಬರ ಬಗ್ಗೆ ತಿಳಿದಿದ್ದೇನೆ, ಅವರ ಕುರಿತು ಮಾತನಾಡಲು ನಾನು ಅರ್ಹನಲ್ಲ. ಹಲವಾರು ಪ್ರಶಸ್ತಿ ಪಡೆದಿದ್ದೇನೆ ಅದಕ್ಕಿಂತಲೂ ದೊಡ್ಡದು ನನಗೆ ಅವರ ಹೆಸರಿನಲ್ಲಿ ಕೊಟ್ಟಿರುವ ಪ್ರಶಸ್ತಿಯಾಗಿದೆ ಎಂದರು.

ಹಿರಿಯ ಪತ್ರಕರ್ತ ಮತ್ತುಸಂಸ್ಕೃತಿ ಚಿಂತಕ ಡಾ. ಎನ್. ಜಗದೀಶ್ ಕೊಪ್ಪ ಮಾತನಾಡಿ,ಸ್ವಾತಂತ್ರ್ಯ ಪೂರ್ವದಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮೈಸೂರು ಸಂಸ್ಥಾನದಲ್ಲಿ ಮಿರ್ಜಾ ಇಸ್ಮಾಯಿಲ್, ಇಮಾಂ ಸಾಹೇಬರಂತ ಮಹಾನಿಯರು ಇದ್ದ ಕಾರಣ ಅಭಿವೃದ್ಧಿ ಸಾಧ್ಯವಾಯಿತು.

ಚಿತ್ರದುರ್ಗ ಎಂದಾಕ್ಷಣ ನೆನಪಾಗುವುದು ನಿಜಲಿಂಗಪ್ಪ, ಅವರಿಗಿಂತಲೂ ಹಿರಿಯರಾದ ಇಮಾಂ ಸಹ ಒಬ್ಬರು, ಜಾತಿ, ಧರ್ಮ ಮೀರಿ ಬೆಳೆದವರು. ಅತ್ಯಂತ ಹಿಂದುಳಿದ ಜಗಳೂರು ಮೂಲದಿಂದ ಬಂದು ಪ್ರಜಾ ಪ್ರತಿನಿಧಿ ಸಭೆಯಲ್ಲಿ ಭಾಗಿಯಾಗಿ, ಸಮಾಜಕ್ಕೆ ನಿಷ್ಠೆ ತೋರಿಸುವುದು ಅಂದಿನ ಜನ ಪ್ರತಿನಿಧಿಗಳ ಉದ್ದೇಶವಾಗಿತ್ತು.

ನೀರು, ಶಿಕ್ಷಣ, ಆರೋಗ್ಯ, ಕೆರೆ, ಪಶುವೈದ್ಯ ಆಸ್ಪತ್ರೆ, ಕೆರೆ ಕಟ್ಟೆ ಕಟ್ಟಿಸುವ ಜವಾಬ್ದಾರಿ ಸದಸ್ಯನ ಜವಾಬ್ದಾರಿಯಾಗಿತ್ತು. ಆದರೆ ಈಗ ಅದು ಇಲ್ಲವಾಗಿರುವುದು ದುರಂತ ಎಂದರು.

ಚರಿತ್ರೆಯನ್ನು ಮುನ್ನೆಲೆಗೆ ತರಬೇಕು. ಧರ್ಮದ ಬಗ್ಗೆ ಮಾತನಾಡುವುದು ದೊಡ್ಡ ಅಸಹ್ಯ, ಮನುಷ್ಯರನ್ನಾಗಿ ಮಕ್ಕಳನ್ನು ರೂಪಿಸಿ. ಬುದ್ಧ ಹೇಳಿದ ‘ಆಸೆಯೇ ದುಃಖ ಕ್ಕೆ ಮೂಲ’, ‘ಬಸವಣ್ಣ ಹೇಳಿದಂತೆ ‘ದಯವಿಲ್ಲದ ಧರ್ಮ ಯಾವುದಯ್ಯ’ ಎಂದು ಹೇಳಿರುವುದು ವಾಸ್ತವ ಎಂದರು.

ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಮಾತನಾಡಿದರು. ಜೆ.ಎಂ ಇಮಾಂ ಟ್ರಸ್ಟ್ ಅಧ್ಯಕ್ಷ ಜೆ.ಕೆ ಹುಸೇನ್ ಮಿಯ್ಯಾ ಸಾಬ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶೌರ್ಯಪ್ರಶಸ್ತಿ ಪುರಸ್ಕøತ ಮಹಿಮಾ ಮಾನಸಿ, ಪಾಲ್ಗುಣಿ ಯಾಜ್ಞ, ಟ್ರಸ್ಟ್ ಸಲಹಾ ಸಮಿತಿಯ ಸದಸ್ಯರಾದ ಎನ್.ಟಿ ಎರಿಸ್ವಾಮಿ, ಡಿ.ಸಿ ಮಲ್ಲಿಕಾರ್ಜುನ, ಎಸ್. ಹಾಲಪ್ಪ, ಸಿ. ಬಸವೇಶ ಸಿ.ಎಂ ಹೊಳೆ, ಜೆ. ಯಾದವರೆಡ್ಡಿ, ಡಾ. ದಾದಾಪೀರ್ ನವೀಲೇಹಾಳ್, ಡಾ.ಬಿ.ಎ ರಾಜಪ್ಪ ಸೇರಿದಂತೆ ಮತ್ತಿತರರಿದ್ದರು.

ಪ್ರಶಸ್ತಿಯ ಹಣ ನಿರಾಕರಿಸಿದ ಸಂತೋಷ್ ಹೆಗ್ಡೆ

ಜೆಎಂ ಇಮಾಂ ಸಾಹೇಬರ ಹೆಸರಿನಲ್ಲಿ ಕೊಟ್ಟ ಸ್ಮಾರಕ ಪ್ರಶಸ್ತಿಯ ಜೊತೆಗೆ 50 ಸಾವಿರ ರೂಗಳನ್ನು ನ್ಯಾ.ಸಂತೋಷ್ ಹೆಗ್ಡೆ ನಿರಾಕರಿಸಿದರು. ಈ ಮೊತ್ತವನ್ನು ಶಾಲೆಯ ಅಭಿವೃದ್ಧಿಗೆ ಬಳಸಿಕೊಳ್ಳಿ. ನಾನು ಎಲ್ಲಿಯೂ ನಗದು ಹಣ ಸ್ವೀಕರಿಸುವುದಿಲ್ಲ ಎಂದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!