ಜಗಳೂರು: ಸುಳ್ಳು ಆಶ್ವಾಸನೆಗಳಿಂದ ಜನ ಸಾಮಾನ್ಯರ ಮರುಳು ಮಾಡಿದ ಕಾಂಗ್ರೆಸ್ ಬಸವರಾಜ ಬೊಮ್ಮಾಯಿ ವಾಗ್ದಾಳಿ!

Suddivijaya
Suddivijaya November 23, 2022
Updated 2022/11/23 at 1:10 PM

ಸುದ್ದಿವಿಜಯ, ಜಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು, ಭೈರತಿ ಬಸವರಾಜ ಸೇರಿದಂತೆ ಅನೇಕ ಬಿಜೆಪಿ ನಾಯಕರ ವಾಗ್ದಾಳಿಗೆ ಜಗಳೂರಿನಲ್ಲಿ ನಡೆದ ಜನ ಸಂಕಲ್ಪ ಯಾತ್ರೆ ಸಾಕ್ಷಿಯಾಯಿತು.

ಬುಧವಾರ ಪಟ್ಟಣದ ಬಯಲು ರಂಗ ಮಂದಿರದಲ್ಲಿ ನಡೆದ ಬಿಜೆಪಿ ಜನ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿ ಮಾತನಾಡಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜನ ಸಾಮಾನ್ಯರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡುವ ಮೂಲಕ ಮರುಳು ಮಾಡಿತು. ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಹಾಸ್ಟೆಲ್‍ಗಳಿಗೆ ಬೇಕಾಗುವ ಸಾಮಾಗ್ರಿ ಖರೀದಿಯಲ್ಲಿ ಅವ್ಯವಹಾರ ಮಾಡಿದ್ದು ಕಾಂಗ್ರೆಸ್ ಸಾಧನೆ. ಹಾಸಿಗೆ, ದಿಂಬು ಬೆಡ್‍ಶೀಟ್ ಖರೀದಿಯಲ್ಲಿ ಭ್ರಷ್ಟಾಚಾರ ಮಾಡಿದ ಕೀರ್ತಿ ಅವರಿಗೆ ಸಲ್ಲಬೇಕು.

ಅವರು ಅಧಿಕಾರದಲ್ಲಿದ್ದಾಗ ದೀನ ದಲಿತರ ಹಕ್ಕನ್ನು ಮೊಟಕು ಗೊಳಿಸಿದರು. 5 ವರ್ಷ ಸಿಎಂ ಆಗಿದ್ದ ಸಿದ್ದರಾಮಯ್ಯನವರ ಆಡಳಿತ ಭ್ರಮ ನಿರಸನವಾಗಿತ್ತು. ಕಾಂಗ್ರೆಸ್‍ನವರು ಮಾತಿನಲ್ಲೇ ಕಾಲ ಕಳೆದರು.

ಅವರ ಆಡಳಿತದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿತ್ತು. ಕಾಂಗ್ರೆಸ್ ನಾಯಕರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ. ಜನಗಣತಿ ಅನುಗುಣವಾಗಿ ಮೀಸಲಾತಿ ಕೊಡಿ ಎಂದು ಕೇಳಿದರೂ ಕೊಡಲಿಲ್ಲ. ನಮ್ಮ ಸರಕಾರ ಬಂದ ಮೇಲೆ ವಾಲ್ಮೀಕಿ ಸಮುದಾಯಕ್ಕೆ ಶೇ.3 ರಿಂದ 7 ರಷ್ಟು ಮೀಸಲಾತಿ ನೀಡಲಾಗಿದೆ. ಎಸ್‍ಸಿ ಸಮುದಾಯಕ್ಕೆ 17 ರಷ್ಟು ಮೀಸಲಾತಿ ಕಲ್ಪಿಸಾಗಿದೆ. ಅವರ ಅವಧಿಯಲ್ಲಿ ವಾಲ್ಮೀಕಿ ಸಮುದಾಯ ಉದ್ಯೋಗ, ಶಿಕ್ಷಣದಿಂದ ವಂಚಿತರಾಗಿತ್ತು. ಎಸ್‍ಸಿ ಸಮುದಾಯ ಸಮಾಜಿಕ ನ್ಯಾಯದಿಂದಲೇ ದೂರವಿತ್ತು.

ವಾಲ್ಮೀಕಿ ಕುಲದ ಅಭಿವೃದ್ಧಿಗೆ ನಾವು ಮೀಸಲಾತಿ ಹೆಚ್ಚಿಸಿದ್ದೇವೆ. ನಿಗಮ ಮಂಡಳಿಗೆ ಹೆಚ್ಚು ಅನುದಾನ ನೀಡಿದ್ದೇವೆ. 450ಕ್ಕೂ ಹೆಚ್ಚು ಗಂಗಾ ಕಲ್ಯಾಣ ಬೋರ್‍ವೆಲ್, 400ಕ್ಕೂ ವಾಲ್ಮೀಕಿ ಸಮುದಾಯದ ಯುವಕರಗೆ ವಾಹನ ವ್ಯವಸ್ಥೆ, ಸ್ತ್ರೀ ಶಕ್ತಿ ಸಂಘಗಳಿಗೆ ಆರ್ಥಿಕ ಸಹಾಯ ಮಾಡಿದ್ದೇವೆ. ಆದರೆ ಈ ಸಮುದಾಯಕ್ಕೆ ಕಾಂಗ್ರೆಸ್‍ನವರು ಕೊಟ್ಟ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಜನರೇ ಅವಲೋಕಿಸಲಿ:
ಕಾಂಗ್ರೆಸ್‍ನ 5 ವರ್ಷ, ಬಿಜೆಪಿ ಸರಕಾರದ ಮೂರುವರೆ ವರ್ಷಗಳ ಆಡಳಿತವನ್ನು ಜನರು ಅವಲೋಕಿಸಲಿ. ಅತ್ಯಂತ ಹಿಂದುಳಿದ ತಾಲೂಕಾದ ಜಗಳೂರಿಗೆ 3500 ಕೋಟಿ ಅನುದಾನ ನೀಡಲಾಗಿದೆ. ಅದರಂತೆ 224 ಕ್ಷೇತ್ರಗಳಿಗೂ ಅಭಿವೃದ್ಧಿಗೆ ಹಣ ನೀಡಿದ್ದೇವೆ. ತರಳಬಾಳು ಶ್ರೀಗಳ ಸೂಚನೆಯಂತೆ 57 ಕೆರೆಗಳನ್ನು ತುಂಬಿಸಲು ನಮ್ಮ ನಾಯಕರಾದ ಬಿ.ಎಸ್. ಯಡಿಯೂರಪ್ಪನವರು 665 ಕೋಟಿ ಹಣವನ್ನು ಬಿಡುಗಡೆ ಮಾಡಿದರು.

ಅಪ್ಪರ್ ಭದ್ರಾ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ಈ ಯೋಜನೆಯಿಂದ ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರು ಭಾಗದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ನಮ್ಮದು ಡಬಲ್ ಎಂಜಿನ್ ಸರಕಾರ. ರೈತರ ಮಕ್ಕಳ ಕಲ್ಯಾಣಕ್ಕೆ ವಿದ್ಯಾಸಿರಿ ಯೋಜನೆ ತಂದು ಎಲ್ಲ ಮಕ್ಕಳಿಗೂ ಆರ್ಥಿಕ ಬಲ ಸಿಕ್ಕಿದೆ.

ಸ್ತ್ರೀಸಾಮಥ್ರ್ಯ ಯೋಜನೆಯಿಂದ 5 ಲಕ್ಷ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ವಿವೇಕಾನಂದ ಯುವ ಶಕ್ತಿ ಯೋಜನೆ ಯುವ ಜನರ ಸಬಲೀಕರಣದ ದ್ಯೋತಕವಾಗಿದೆ. ದಾವಣಗೆರೆ-ತುಮಕೂರು ರೈಲ್ವೇ ಮಾರ್ಗಕ್ಕೆ ಜನವರಿಯಲ್ಲಿ ಚಾಲನೆ ಸಿಗಲಿದೆ ಎಂದರು.

ಬಿಜೆಪಿಗೆ ಹೃದಯ ಶ್ರೀಮಂತಿಕೆ ಇರುವುದರಿಂದ ಎಲ್ಲರೂ ಸರಿ ಸಮನಾಗಿ ಕೂರುವಂತ ಕೆಲಸವನ್ನು ನಮ್ಮ ಸರಕಾರ ಮಾಡಿದೆ. ಕಾಂಗ್ರೆಸ್ ನವರು ಎಸ್‍ಸಿ, ಎಸ್‍ಟಿ ಜನಾಂಗವನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡರು. ನಮ್ಮಿಂದಲೇ ಅವರ ಜೀನ ಮಟ್ಟ ಬದಲಾಗಿದೆ ಎಂದು ಹೇಳಿಕೊಂಡು ತಿರುಗಾಡಿದರು. ಆದರೆ ಕಾಂಗ್ರೆಸ್‍ನವರಿಂದ ಹಿಂದುಳಿದ ವರ್ಗಗಳಿಗೆ, ಅಹಿಂದಾ ಸಮುದಾಯಗಳಿಗೆ ಅನ್ಯಾಯವಾಗಿದೆ. ಅವರು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದರು ಎಂದು ಕಿಡಿ ಕಾರಿದರು.

ನಮ್ಮ ಸರಕಾರದ ಅವದಿಯಲ್ಲಾದ ಅಭಿವೃದ್ಧಿ ಕಾರ್ಯಗಳನ್ನು ಅವಲೋಕಿಸಲಿ. ಅತ್ಯಂತ ಹಿಂದುಳಿದ ತಾಲೂಕು ಎಂದು ಹೆಸರಾಗಿದ್ದ ಜಗಳೂರಿಗೆ ಅಪ್ಪರ್ ಭದ್ರಾ ಯೋಜನೆಗೆ 1336 ಕೋಟಿ ಹಣ ಮೀಸಲಿಡಲಾಗಿದೆ. ಮನೆ ಮನೆಗೆ ನೀರು ಒದಗಿಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 428 ಕೋಟಿ ರೂಗೆ ಕ್ಯಾಬಿನೆಟ್‍ನಲ್ಲಿ ಒಪ್ಪಿಗೆ ನೀಡಲಾಗಿದೆ.

ಶಾಸಕ ಎಸ್.ವಿ.ರಾಮಚಂದ್ರ ಅವರು ತಮ್ಮ ಕ್ಷೇತ್ರಕ್ಕೆ 3500 ಕೋಟಿ ಹಣ ತಂದು ಅಭಿವೃದ್ಧಿ ಮಾಡಿಸಿದ್ದಾರೆ. ಇಡೀ ರಾಜ್ಯದಲ್ಲೇ ಯಾವ ಕ್ಷೇತ್ರಕ್ಕೂ ಇಷ್ಟೊಂದು ಹಣ ಕೊಟ್ಟಿಲ್ಲ. ಮುಂದಿನ ಚುನಾವಣೆಯಲ್ಲಿ 50 ಸಾವಿರಕ್ಕಿಂತ ಹೆಚ್ಚಿನ ಮತಗಳಲ್ಲಿ ಶಾಸಕ ಎಸ್.ವಿ.ರಾಮಚಂದ್ರ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಕಾಂಗ್ರೆಸ್‍ನಲ್ಲಿದ್ದ ಶಾಸಕ ರಾಮಚಂದ್ರ ಅಲ್ಲಿನ ವ್ಯವಸ್ಥೆಯಿಂದ ಬೇಸರಗೊಂಡು ಬಿಜೆಪಿಗೆ ಬಂದರು. ಅವರನ್ನು ಬಿಜೆಪಿಗೆ ಕರೆ ತಂದವರು ನಾನು ಮತ್ತು ಸಂಸದ ಜಿ.ಎಂ.ಸಿದ್ದೇಶ್ವರ್. ಬೈ ಎಲೆಕ್ಷನ್‍ನಲ್ಲಿ ಎಸ್‍ವಿಆರ್ ಗೆಲ್ಲಿಸಲು ಜಗಳೂರಿನ ಪ್ರತಿ ಗ್ರಾಮಗಳಲ್ಲಿ ಸಂಚರಿಸಿದ್ದೇನೆ. 15 ದಿನ ಇಲ್ಲಿಯೇ ಬೀಡು ಬಿಟ್ಟಿದ್ದೆ. ತಾಯಂದಿರು ಕೊಟ್ಟ ರೊಟ್ಟಿ ತಿಂದಿದ್ದೇನೆ. ಇಲ್ಲಿಯ ಜನರ ನೀರಿನ ಬವಣೆ ಅರಿತು ನಾನು ನಿಮ್ಮ ಋಣ ತೀರಿಸುವ ಸಲುವಾಗಿ ಅಪ್ಪರ್ ಭದ್ರಾ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!