ಸುದ್ದಿವಿಜಯ, ಜಗಳೂರು: ದಾವಣಗೆರೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ 38ನೇ ಪತ್ರಕರ್ತರ ಸಮ್ಮೇಳನವನ್ನು ಯಶಸ್ವಿಗೊಳಿಸಲು ದಿಟ್ಟವಾದ ಹೆಜ್ಜೆ ಇಟ್ಟು ಸಂಘದ ಎಲ್ಲಾ ಸದಸ್ಯರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ್ ಕರೆ ನೀಡಿದರು.
ಇಲ್ಲಿನ ಪ್ರತಿಕಾ ಭವನದಲ್ಲಿ ಭಾನುವಾರ ಸಮ್ಮೇಳನದ ಪೂರ್ವಸಿದ್ದತೆ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ರಾಜ್ಯ ಸಮ್ಮೇಳನ ನಡೆಸುವಾಗ ದೊಡ್ಡ ಮಟ್ಟದ ಸಿದ್ದತೆ, ವ್ಯವಸ್ಥೆ ಆಗಬೇಕಾಗಿದೆ. ಸಮ್ಮೇಳನವನ್ನು ಯಾರು ಲಘುವಾಗಿ ಭಾವಿಸಬಾರದು, ಸಂಘದ ಪ್ರತಿಯೊಬ್ಬ ಸದಸ್ಯರು ಸಮ್ಮೇಳನದ ಭಾಗವಾಗಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ಎಲ್ಲರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಮ್ಮೇಳನಕ್ಕೆ ದಾವಣಗೆರೆ ಜಿಲ್ಲೆಯಿಂದ ಮಾತ್ರವಲ್ಲದೇ, ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಪತ್ರಕರ್ತರು ಆಗಮಿಸಲಿದ್ದಾರೆ. ಹೀಗಾಗಿ ದಾವಣಗೆರೆ ಜಿಲ್ಲೆ ಪ್ರತಿ ತಾಲೂಕಿನ ಪತ್ರಕರ್ತರ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಇ.ಎಂ ಮಂಜುನಾಥ್ ಮಾತನಾಡಿ, ದಾವಣಗೆರೆ ಜಿಲ್ಲೆಯಾಗಿ 25 ವರ್ಷಗಳನ್ನು ಪೂರೈಸಿದ್ದು, ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನವನ್ನು ನಡೆಸಲಾಗುತ್ತಿದ್ದು, ಪತ್ರಕರ್ತರ ಸೌಭಾಗ್ಯವಾಗಿದೆ ಎಂದರು.ಜಗಳೂರು ಪಟ್ಟಣದ ಪತ್ರಿಕಾಭವನದಲ್ಲಿ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಲೋಕೇಶ್, ಜಿಲ್ಲಾ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ದಾವಣಗೆರೆ ಮಧ್ಯ ಕರ್ನಾಟಕವಾಗಿರುವುದರಿಂದ ಸಮ್ಮೇಳನಕ್ಕೆ ಸುಮಾರು 5 ಸಾವಿರಕ್ಕೂ ಹೆಚ್ಚು ಪತ್ರಕರ್ತರು, ಕುಟುಂಬದ ಸದಸ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದನ್ನು ನಿಭಾಯಿಸುವುದು ಸುಲಭವಲ್ಲಾ ಎಲ್ಲಾ ತಾಲೂಕು ಪತ್ರಕರ್ತರ ಸಹಕಾರ ತುಂಬ ಮುಖ್ಯವಾಗಿದೆ. ಕೈ ಜೋಡಿಸಿ ಯಶಸ್ವಿಗೊಳಿಸಬೇಕು ಎಂದರು.
ಸಮ್ಮೇಳನವನ್ನು ಬೇರೆ-ಬೇರೆ ಜಿಲ್ಲೆಯವರು ಬೇಡಿಕೆ ಇಟ್ಟಿದ್ದರು ಆದರೆ ನಮ್ಮ ಜಿಲ್ಲೆಯವರಾದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಅವರು ದಾವಣಗೆರೆಯಲ್ಲಿಯೇ ಮಾಡುತ್ತೇವೆ ಎಂದು ಒತ್ತಾಯಪೂರ್ವಕವಾಗಿ ನಮಗೆ ಅವಕಾಶ ಕಲ್ಪಿಸಿಕೊಟ್ಟಿದ್ದರೇ ಅದನ್ನು ಯಶಸ್ವಿಯಾಗಿ ನಡೆಸಿಕೊಡಲು ಸಿದ್ದತೆ ಮಾಡಿಕೊಳ್ಳಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಪತ್ರಕರ್ತರ ಭವನ ಕಟ್ಟಡ ಕಾಮಗಾರಿಯನ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ್ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಕ.ಕಾ.ನಿ. ಪರ್ತಕರ್ತರ ಸಂಘದ ತಾಲೂಕಾಧ್ಯಕ್ಷ ಜಿ.ಎಸ್ ಚಿದಾನಂದ, ರಾಷ್ಟ್ರೀಯ ಒಕ್ಕೂಟ ಪತ್ರಿಕಾ ಮಂಡಳಿ ಸಮಿತಿ ಸದಸ್ಯ ಎನ್.ಒಡೆಯರ್, ರಾಜ್ಯ ಸಮಿತಿ ಸದಸ್ಯ ದೇವರಾಜ್, ಜಿಲ್ಲಾ ಉಪಾಧ್ಯಕ್ಷ ಡಿ. ಶ್ರೀನಿವಾಸ್, ಕಾರ್ಯದರ್ಶಿ ವೀರೇಶ್, ಖಜಾಂಚಿ ಭದ್ರಿನಾಥ್, ನಿರ್ದೇಶಕ ವೇಧಮೂರ್ತಿ, ಬಿ.ಪಿ ಸುಭಾನ್, ಜಿಲ್ಲಾ ಹಿರಿಯ ಪತ್ರಕರ್ತರ ಅಣಬೂರ್ ಕೊಟ್ರೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಲೋಕೇಶ್.ಎಂ ಐಹೊಳೆ ಸೇರಿದಂತೆ ಪತ್ರಕರ್ತರು ಹಾಜರಿದ್ದರು.