ಸುದ್ದಿವಿಜಯ, ಜಗಳೂರು: ಬರುವ ಮಂಗಳವಾರದ ಒಳಗೆ ಜಗಳೂರು ತಾಲೂಕಿನ 22 ಕಾಡುಗೊಲ್ಲರ ಸಮುದಾಯಕ್ಕೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ಕೊಡದಿದ್ದರೆ ತಹಶೀಲ್ದಾರ್ ಕಚೇರಿ ಎದುರು ಅನಿರ್ಧಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕಾಡುಗೊಲ್ಲ ಸಮುದಾಯದ ಮುಖಂಡ ಮಹಾಲಿಂಗಪ್ಪ ಹೇಳಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡೀ ರಾಜ್ಯದ 40 ತಾಲೂಕು ಮತ್ತು 12 ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಕಾಡುಗೊಲ್ಲ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ.
ಆದರೆ ಜಗಳೂರು ತಾಲೂಕಿನ 22 ಕಾಡುಗೊಲ್ಲರ ಗೊಲ್ಲರಹಟ್ಟಿಗಳಲ್ಲಿ ವಾಸಿಸುತ್ತಿರುವ ನಮ್ಮ ಜನಾಂಗಕ್ಕೆ ತಾಲೂಕಿನ ತಹಶೀಲ್ದಾರ್ ಸೈಯದ್ ಕಲೀಂಉಲ್ಲಾ ಪ್ರಮಾಣ ಪತ್ರ ಕೊಡದೇ ಮೀನ-ಮೇಷ ಎಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಡುಗೊಲ್ಲ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಷಾಹೀನಾ ಪರ್ವೀನ್ ಆದೇಶ ನೀಡಿದ್ದಾರೆ.ಜಗಳೂರು ತಾಲೂಕಿನ ಪತ್ರಿಕಾಭವನದಲ್ಲಿ ಕಾಡುಗೊಲ್ಲ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದರು.
ನೆರೆಯ ಚಳ್ಳಕೆರೆ, ಮೊಳಕಾಲ್ಮೂರು, ಹಿರಿಯೂರು, ಶಿರಾ ಸೇರಿದಂತೆ ಕಾಡುಗೊಲ್ಲರು ವಾಸವಾಗಿರುವ ತಾಲೂಕುಗಳಲ್ಲಿ ಈಗಾಗಲೇ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ.
ಸರಕಾರವೇ ಅದೇಶ ನೀಡಿದರೂ ನಮ್ಮ ತಾಲೂಕಿನಲ್ಲಿ ಅಧಿಕಾರಿಗಳು ಕೊಡದೇ ಸತಾಯಿಸುತ್ತಿದ್ದಾರೆ. ನಮ್ಮ ಅಸ್ಮಿತೆಯನ್ನು ಗುರುತಿಸುವ ಸರ್ಟಿಫಿಕೇಟ್ ಕೊಡಿಲಿ ಎಂದು ಒತ್ತಾಯಿಸಿದರು.
ಶಾಲಾ, ಕಾಲೇಜುಗಳ ದಾಖಲಾತಿಗಳಲ್ಲಿ ಗೊಲ್ಲಸಮುದಾಯ ಎಂದು ನಮೂದಾಗಿದೆ. ಆದರೆ ಕಾಡುಗೊಲ್ಲ ಇಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ನಮ್ಮ ಪೂರ್ವಜರ ಇತಿಹಾಸ ಮತ್ತು ಜುಂಜಪ್ಪನವರ ಐತಿಹ್ಯವನ್ನು ಅಧಿಕಾರಿಗಳು ಅಧ್ಯಾಯನ ಮಾಡಲಿ.
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲೇ ನಾವು ಹೋರಾಟ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಒತ್ತಾಯ ಮಾಡಿದ್ದೇವೆ. ಎಲ್ಲೆಲ್ಲಿ ಕಾಡುಗೊಲ್ಲರು ವಾಸಮಾಡುತ್ತಿದ್ದಾರೋ ಅಲ್ಲೆಲ್ಲಾ ಈಗಾಗಲೇ ಜಾತಿ ಪ್ರಮಾಣ ನೀಡಲಾಗುತ್ತಿದೆ.
ಆದರೆ ನಮ್ಮ ತಾಲೂಕಿನಲ್ಲಿ ತಹಶೀಲ್ದಾರ್ ಇಲ್ಲ ಸಲ್ಲದ ಸಬೂಬು ಹೇಳುತ್ತಿದ್ದಾರೆ. ಬರುವ ಮಂಗಳವಾರ ನಮ್ಮ ಸಮುದಾಯದ ಮುಖಂಡರೆಲ್ಲರೂ ತಹಶೀಲ್ದಾರ್ ಕಚೇರಿಗೆ ತೆರಳಿ ಅರ್ಜಿ ಹಾಕಬೇಕು. ಒಂದೇ ವೇಳೆ ಕೊಡಲು ಬರುವುದಿಲ್ಲ ಎಂದಾದರೆ ಅಧಿಕಾರಿಗಳು ಹಿಂಬರಹ ಕೊಡಲಿ ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಲ್ಯಾಬ್ ಶಿವು, ಮಾಕುಂಟೆ ಪ್ರಕಾಶ್, ಜಮ್ಮಾಪುರ ತಿಪ್ಪೇಶ್, ಜಮ್ಮಾಪುರ ಬಾಲರಾಜ್ ಸೇರಿದಂತೆ ಅನೇಕರು ಇದ್ದರು.