ಸುದ್ದಿವಿಜಯ, ಜಗಳೂರು: ತಾಲೂಕಿನ ಐತಿಹಾಸಿಕ ತಪೋಕ್ಷೇತ್ರ ಕಣ್ವಕುಪ್ಪೆಯ ಗವಿ ಶಾಂತಲಿಂಗೇಶ್ವರ ರಥೋತ್ಸವ ಸಂಕ್ರಾಂತಿ ಹಬ್ಬದ ಹಿನ್ನೆಲೆ ಸೋಮವಾರ ಮಧ್ಯಾಹ್ನ ವಿಜೃಂಭಣೆಯಿಂದ ನೆರವೇರಿತು.
ನಾಲ್ವಡಿ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಕಳೆದ ಮೂರು ದಿನಗಳಿಂದ ಮಠದ ಆವರಣದಲ್ಲಿ ವಿವಿಧ ಪೂಜಾ ಕೈಕರ್ಯಗಳು ನೆರವೇರಿದವು.
ಸೋಮವಾರ ಮಧ್ಯಾಹ್ನ 2 ಗಂಟೆಗೆ ರಥೋತ್ಸವ ಸಾಗುತ್ತಿದ್ದಂತೆ ನೆರದ ಭಕ್ತರು ಜೈ ಶಾಂತಲಿಂಗೇಶ ಎಂದು ಉದ್ಗಾರ ಮುಗಿಲು ಮುಟ್ಟಿತ್ತು. ಬಾಳೆಹಣ್ಣು, ತೆಂಗಿನ ಕಾಯಿ ಸಮರ್ಪಿಸಿದ ಭಕ್ತರು ಪಳಾರವನ್ನು ದೇವರ ಮೂರ್ತಿಯ ಮೇಲೆ ತೂರುವ ಮೂಲಕ ಭಕ್ತಿ ಸಮರ್ಪಿಸಿದರು.
ನಂತರ ಸಮಾಳ, ಡೊಳ್ಳು ಸೇರಿದಂತೆ ವಿವಿಧ ವಾದ್ಯಗಳ ಮೂಲಕ ಭಕ್ತರು ರಥೋತ್ಸವವನ್ನು ಪಾದಗಟ್ಟೆಯವರೆಗೆ ಎಳೆದರು. ನಂತರ ಪೂಜೆ ನೆರವೇರಿಸಿ ಪುನಃ ದೇವಸ್ಥಾನದ ಮುಂದೆ ರಥೋತ್ಸವ ನಿಲ್ಲಿಸಿದರು.
ಪ್ರತಿವರ್ಷ ಕಣ್ವಕುಪ್ಪೆ ಗವಿಮಠದಲ್ಲಿ ಮಕರ ಸಂಕ್ರಾಂತಿಯ ಪುಣ್ಯ ಪರ್ವಕಾಲದಲ್ಲಿ ಗದ್ದುಗೆಗಳಿಗೆ ರುದ್ರಾಭಿಷೇಕ, ವಿಶೇಷ ಪೂಜೆ ಕಾರ್ಯಗಳು ನಡೆಯುತ್ತವೆ.
ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ, ಆಂಧ್ರಪ್ರದೇಶ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಭಾಗವಹಿಸಿ ತೇರು ಎಳೆಯುವ ಮೂಲಕ ಭಕ್ತಿ ಸಮರ್ಪಿಸುತ್ತಾರೆ.
ಭಾನುವಾರ ಜಾತ್ರೆಗೆ ಚಾಲನೆ: ಕಣ್ವಕುಪ್ಪೆಯ ಗವಿ ಮಠದ ಆವರಣದಲ್ಲಿ ಭಾನುವಾರ ಗೋಧೂಳಿ ಮುಹೋರ್ತದಲ್ಲಿ ಶ್ರೀ ಜಗದ್ಗುರು ಪಂಚಾರ್ಯಾರ ಧ್ವಜಾರೋಹಣ ಮತ್ತು ಜಾತ್ರಾ ಮಹೋತ್ಸವದ ಕಾರ್ಯಗಳಿಗೆ ಶ್ರೀಗಳು ಚಾಲನೆ ನೀಡಿದರು.
ಸೋಮವಾರ ಬ್ರಾಹ್ಮಿ ಮುಹೋರ್ತದಲ್ಲಿ ಧನುರ್ಮಾಸ ಪೂಜಾ ಮಂಗಳ ಮತ್ತು ಸಂಕ್ರಾಂತಿಯ ವಿಶೇಷ ಪೂಜೆ ನೆರವೇರಿಸಿದ ನಂತರ ಭಕ್ತರು ಮಧ್ಯಾಹ್ನ 2 ಗಂಟೆಗೆ ರಥೋತ್ಸವ ಎಳೆದರು.
ರಥೋತ್ಸವದ ನಂತರ ಶ್ರೀಗಳು, ಭಕ್ತರಿಗೆ ಉತ್ತರಾಯಣ ಪುಣ್ಯ ಪರ್ವಕಾಲ ದರ್ಶನ ಆಶೀರ್ವಾದ ನೀಡಿದರು. ರಥೋತ್ಸವದಲ್ಲಿ ಶಾಸಕ ಬಿ.ದೇವೇಂದ್ರಪ್ಪ, ಕೆಪಿಸಿಸಿ ರಾಜ್ಯ ಎಸ್‍ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ, ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.