ನಾಡು, ನುಡಿ, ಜಲದ ವಿಚಾರದಲ್ಲಿ ಒಂದಾಗೋಣ: ಶಾಸಕ ಬಿ.ದೇವೇಂದ್ರಪ್ಪ

Suddivijaya
Suddivijaya November 1, 2023
Updated 2023/11/01 at 9:38 AM

ಸುದ್ದಿವಿಜಯ, ಜಗಳೂರು: ನಾಡು, ನುಡಿ, ಜಲದ ವಿಚಾರದ ಬಂದಾಗ ರಾಜಕೀಯ ಮರೆತು ಎಲ್ಲರೂ ಒಂದಾಗಿ ನಾಡು ಕಟ್ಟುವ ಕೆಲಸ ಮಾಡೋಣ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಬಯಲು ರಂಗ ಮಂದಿರದಲ್ಲಿ ಬುಧವಾರ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡಿನ ರಚನೆಗೆ ನಡೆದ ಹೋರಾಟ ಇಂದು ನಿನ್ನೆಯದಲ್ಲ.

ಅದು ಚರಿತ್ರೆಯ ಪುಟಗಳಲ್ಲಿ ಸೇರಿದಂತಹ ಹೋರಾಟ. ಕನ್ನಡಿಗರು ದೇಶದ ಸ್ವಾತಂತ್ರ್ಯಕ್ಕಾಗಿ ಅಷ್ಟೇ ಅಲ್ಲ ಕನ್ನಡ ಏಕೀಕರಣಕ್ಕಾಗಿ ದುಡಿದಿದ್ದಾರೆ.

ಜಗಳೂರು ಪಟ್ಟಣದ ಬಯಲು ರಂಗಮಂದಿರದಲ್ಲಿ ಕನ್ನಡ ರಾಜ್ಯೋತ್ಸವ ಹಿನ್ನೆಲೆ ವಿದ್ಯಾರ್ಥಿಗಳಿಂದ ಧ್ವಜ ವಂದನೆಯನ್ನು ಶಾಸಕ ಬಿ.ದೇವೇಂದ್ರಪ್ಪ ಸ್ವೀಕರಿಸಿದರು.
ಜಗಳೂರು ಪಟ್ಟಣದ ಬಯಲು ರಂಗಮಂದಿರದಲ್ಲಿ ಕನ್ನಡ ರಾಜ್ಯೋತ್ಸವ ಹಿನ್ನೆಲೆ ವಿದ್ಯಾರ್ಥಿಗಳಿಂದ ಧ್ವಜ ವಂದನೆಯನ್ನು ಶಾಸಕ ಬಿ.ದೇವೇಂದ್ರಪ್ಪ ಸ್ವೀಕರಿಸಿದರು.

1890ರಲ್ಲಿಯೇ ಧಾರವಾಡದಲ್ಲಿ ವಿದ್ಯಾವರ್ಧಕ ಸಂಘ ರಚಿಸಿದ್ದರು. 1905ರಲ್ಲಿ ಆಲೂರು ವೆಂಕಟರಾಯರು, ಕರ್ನಾಟಕ ಏಕೀಕರಣ ಚಳವಳಿ ಕನಸು ಕಂಡ ಮೊದಲ ವ್ಯಕ್ತಿ.

ರಸಋಷಿ ಕುವೆಂಪು, ದ.ರಾ.ಬೇಂದ್ರ, ಶಿವರಾಮ ಕಾರಂತರು ಸೇರಿದಂತೆ 8 ಜ್ಞಾನ ಪೀಠ ಪ್ರಶಸ್ತಿಗಳು ಬಂದಿರುವ ನಮ್ಮ ಕನ್ನಡ ಭಾಷೆಗೆ ತನ್ನದೇ ಆದ ಸಾಂಸ್ಕøತಿ ನೆಲಗಟ್ಟಿದೆ.

1950ರಲ್ಲಿ ಭಾರತ ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು ಭಾಷೆಗಳ ಆಧಾರದ ಮೇಲೆ ರೂಪುಗೊಂಡವು.

ಕನ್ನಡಿಗರನ್ನು ಹೊಂದಿದ್ದ ಎಲ್ಲ ಪ್ರದೇಶ ಒಟ್ಟು ಗೂಡಿ ರಾಜ್ಯವನ್ನಾಗಿ ರೂಪಿಸಿದ ದಿನವೇ ಮೈಸೂರು ರಾಜ್ಯವು ಉದಯವಾಯಿತು.

1956ರ ನ.1ರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. 1973ರ ನ.1 ರಂದು ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಕರ್ನಾಟಕ ಎಂದು ನಾಮಕರಣ ಮಾಡಿ ಇಂದಿಗೆ 50 ವರ್ಷವಾಯಿತು.

ಈ ಬಾರಿ ಕನ್ನಡ ರಾಜ್ಯೋತ್ಸವವವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದುಕೊಂಡಿದ್ದೆವು. ಆದರೆ ತೀವ್ರ ಬರದ ಹಿನ್ನೆಲೆ ಸರಳವಾಗಿ ಆಚರಿಸಲಾಯಿತು. ತಾಯಿ ಭುವನೇಶ್ವರಿ ಮುಂದಿನ ಬಾರಿ ಮಳೆ ಕರುಣಿಸಿದರೆ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು.

ನಮ್ಮ ನಾಡು ನುಡಿ, ಭಾಷೆ ಉಳಿಯಬೇಕು ಎಂದಾದರೆ ಹೊರ ರಾಜ್ಯ, ದೇಶಕ್ಕೆ ಹೋದರೂ ನಾವು ಕನ್ನಡ ಭಾಷೆಯ ಸಂಸ್ಕೃತಿ, ಸಂಸ್ಕಾರಗಳನ್ನು ಅಲ್ಲಿನವರಿಗೆ ತಿಳಿಸುವ ಕೆಲಸ ಮಾಡೋಣ ಎಂದು ಹೇಳಿದರು.

ತಹಶೀಲ್ದಾರ್ ಸೈಯದ್ ಕಲೀಂಉಲ್ಲಾ ಕನ್ನಡ ರಾಜ್ಯೋತ್ಸವದ ಶುಭ ಸಂದೇಶ ಹೇಳಿದರು. ಶಿಕ್ಷಕಿ ರಾಣಿ, ಸಾಹಿತಿ ಎನ್.ಟಿ.ಎರ್ರಿಸ್ವಾಮಿ ಸ್ವಾಮಿ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಬಿಇಒ ಈ.ಹಾಲಮೂರ್ತಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎನ್.ರಾಘವೇಂದ್ರ, ಇಓ ಕೆ.ಟಿ.ಕರಿಬಸಪ್ಪ, ಕೆ.ಪಿ.ಪಾಲಯ್ಯ, ಪಪಂ ಚೀಫ್ ಆಫೀಸರ್ ಎಂ.ಲೋಕ್ಯಾನಾಯ್ಕ್, ಕೆಪಿಸಿಸಿ ಸದಸ್ಯ ಕಲ್ಲೇಶ್‍ರಾಜ್ ಪಟೇಲ್, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಮಹೇಶ್ವರಪ್ಪ, ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ್ ಪಪಂ ಸದಸ್ಯರು ಉಪಸ್ಥಿತಿರಿದ್ದರು.

ಭುವನೇಶ್ವರಿ ಭಾವ ಚಿತ್ರ ಮೆರವಣಿಗೆ:

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು.

ವಿವಿಧ ಸರಕಾರಿ ಇಲಾಖೆ ಎಲ್ಲ ಅಧಿಕಾರಿಗಳು ಭಾವಚಿತ್ರ ಮೆರವಣಿಗೆಯಲ್ಲಿ ಭಾಗವಹಿಸಿದರು. ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳಿಗೆ ವಿದ್ಯಾರ್ಥಿಗಳು ನೃತ್ಯ ಮಾಡಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!