ಜಗಳೂರು: ಸರಕಾರದ ಕಿಟ್ ಪಡೆಯಲು ಕಾರ್ಮಿಕ ಮಕ್ಕಳ ಅಲೆದಾಟ, ಗೋಲ್‍ಮಾಲ್: ಶಂಕೆ?

Suddivijaya
Suddivijaya March 29, 2023
Updated 2023/03/29 at 11:06 AM

ಸುದ್ದಿವಿಜಯ, ಜಗಳೂರು: ಕಟ್ಟಡ ಕಾರ್ಮಿಕ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಉದ್ದೇಶದಿಂದ ಸರಕಾರ ವಿತರಣೆ ಮಾಡುತ್ತಿರುವ ಪ್ರಾಥಮಿಕ ಶಾಲಾ ಮಕ್ಕಳಿಗೆ ಶೈಕ್ಷಣಿಕ ಕಿಟ್ ಪಡೆಯಲು ಪಾಲಕರು ಅಲೆದಾಡುತ್ತಿದ್ದು ಅಧಿಕಾರಿಗಳ ವಿರುದ್ದ ಕಟ್ಟಡ ಕಾರ್ಮಿಕರ ಮಕ್ಕಳು, ಪೋಷಕರು ಬುಧವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿರುವ ಕಾರ್ಮಿಕ ಇಲಾಖೆಯ ಕಚೇರಿ ಕಳೆದ ಎರಡ್ಮೂರು ದಿನಗಳಿಂದಲೂ ಬಾಗಿಲು ಮುಚ್ಚಿದ್ದು ಪಾಲಕರನ್ನು ತಮ್ಮ ಮಕ್ಕಳನ್ನು ಕರೆದುಕೊಂಡು ದಿನವಿಡಿ ಕಾದಿದ್ದಾರೆ. ಬಾಗಿಲ ಮುಂಭಾಗದಲ್ಲಿ ಕಿಟ್ ಖಾಲಿಯಾಗಿದೆ ಎಂದು ನಾಮಫಲಕ ಹಾಕಿದ್ದಾರೆ. ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ವೀಕರಿಸುತಿಲ್ಲ.

ಹೀಗಿದ್ದರೂ ನಮಗೆ ಯಾಕೆ ಸುಳ್ಳು ಮಾಹಿತಿ ನೀಡಿ ನಾಳೆ ಬನ್ನಿ ಎಂದು ಹೇಳಿ ಒಬ್ಬರು ಕಾಣಿಸುತ್ತಿಲ್ಲ. ಇಂತಹ ಅಧಿಕಾರಿಗಳಿಂದ ಬಡ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಸುಮ್ಮನೆ ಅಲೆಸಿ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಸೋಮವಾರದಿಂದ ನಿತ್ಯ ಬೆಳಗ್ಗೆ ಬಂದು ಮಧ್ಯಾಹ್ನದವರೆಗೂ ಕಾದು ಹೋಗಿದ್ದೇವೆ. ನಮ್ಮ ಮಕ್ಕಳ ಶಾಲೆ ತಪ್ಪಿಸಿ ಕರೆದುಕೊಂಡು ಬಂದಿದ್ದೇವೆ. ಒಬ್ಬ ಅಧಿಕಾರಿ ಅಥವಾ ಸಿಬ್ಬಂದಿಯಾಗಲೀ ಮಾಹಿತಿ ನೀಡುವವರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

 ಜಗಳೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಟ್ಟಡ ಕಾರ್ಮಿಕರ ಸಂಘಟನೆಯ ಮಕ್ಕಳು, ಪೋಷಕರು ಪ್ರತಿಭಟನೆ ನಡೆಸಿದರು.
 ಜಗಳೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಟ್ಟಡ ಕಾರ್ಮಿಕರ ಸಂಘಟನೆಯ ಮಕ್ಕಳು, ಪೋಷಕರು ಪ್ರತಿಭಟನೆ ನಡೆಸಿದರು.

ಕಿಟ್ ವಿತರಣೆಯಲ್ಲಿ ಗೋಲ್‍ಮಾಲ್:
ಕಟ್ಟಡ ಕಾರ್ಮಿಕ ಮಕ್ಕಳಿಗೆ ಶೈಕ್ಷಣಿಕವಾಗಿ ಸಹಕಾರಿಯಾಗಲಿ ಎನ್ನುವ ಉದ್ದೇಶದಿಂದ ಈ ಕಿಟ್ ನೀಡಲಾಗುತ್ತಿದೆ ಆದರೆ ನಿಜವಾದ ಫಲಾನುಭವಿಗಳಿಗೆ ತಲುಪದೇ ಬೇರೆಯವರಿಗೆ ಮುಟ್ಟಿವೆ. ಅಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾಗಿ ನಮ್ಮ ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ.

ಇನ್ನು ತಾಲೂಕಿನಲ್ಲಿ ಸಾಕಷ್ಟು ಮಕ್ಕಳಿಗೆ ಕಿಟ್ ತಲುಪಿಲ್ಲ ಆದರೆ ಇದೀಗ ನಮ್ಮಲ್ಲಿ ಕಿಟ್ ಇಲ್ಲ ಮುಗಿದು ಹೋಗಿವೆ ಎಂದು ಸಿಬ್ಬಂದಿಗಳು ಸಬೂಬು ನೀಡುತ್ತಿದ್ದಾರೆ. ಇದರಲ್ಲಿ ದೊಡ್ಡ ಗೋಲ್‍ಮಾರ್ ನಡೆದಿದ್ದು ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಮಕ್ಕಳಿಗೆ ನ್ಯಾಯ ಒದಗಿಸಿ ಎಂದು ಪಾಲಕರಾದ ಕೋಟೇಶ್, ರವಿಕುಮಾರ್, ಗೋಣಿ ಬಸಪ್ಪ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ತೋರಣಗಟ್ಟೆ ಪ್ರಹ್ಲಾದ್, ಪಾಲನಾಯಕನಕೋಟೆ ವಿರೂಪಾಕ್ಷಪ್ಪ, ಮುಸ್ಟೂರು ಮಾರುತಿ, ಮರಿಕುಂಟೆ ಬಸವರಾಜ್ ಸೇರಿದಂತೆ ಮತ್ತಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!