ಸುದ್ದಿವಿಜಯ, ಜಗಳೂರು: ಅಯ್ಯೋಧ್ಯೆಯಲ್ಲಿ ಇದೇ ಜ.22 ರಂದು ಶ್ರೀ ರಾಮ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು ಎಲ್ಲರೂ ಇಲ್ಲಿಂದಲೇ ಶ್ರೀರಾಮ ದೇವರ ಮೂರ್ತಿ ಪ್ರಾತಿಷ್ಠಾಪನೆಗೆ ಕಾರ್ಯಕ್ರಮವನ್ನು ವೀಕ್ಷಿಸಿ ಪುನೀತರಾಗೋಣ ಎಂದು ಬಿಜೆಪಿ ಮುಖಂಡ ಹಾಗೂ ಶ್ರೀರಾಮನ ಭಕ್ತ ಎಂ.ಎಸ್.ಮಂಜಪ್ಪ ಕರೆ ನೀಡಿದರು.
ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಮಕರ ಸಂಕ್ರಾಂತಿ ಹಿನ್ನೆಲೆ ಸೋಮವಾರ ಶ್ರೀ ಬಸವೇಶ್ವರ ಮತ್ತು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿದ ನಂತರ ಎಳ್ಳು-ಬೆಲ್ಲದೊಂದಿಗೆ ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ಶ್ರೀರಾಮ ಮಂದಿರದ ಭಾವ ಚಿತ್ರ ನೀಡಿ ಮಂತ್ರಾಕ್ಷತೆ ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು, ಅಯ್ಯೋಧ್ಯೆಯಲ್ಲಿ ಅಭೂತಪೂರ್ವ ಸಂಭ್ರಮ ವಾತಾವರಣ ಸೃಷ್ಟಿಯಾಗಿದೆ. ಕೋಟ್ಯಾಂತರ ಭಾರತೀಯ ಕನಸು ನನಸಾಗುವ ಕಾಲ ಹತ್ತಿರವಾಗುತ್ತಿದೆ.
ಸೂರ್ಯ ತನ್ನ ದಿಕ್ಕು ಬದಲಿಸಿದಂತೆ ಭಾರತ ಸಹ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯೇ ಕಾರಣ ಎಂದರು.ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಸಂಕ್ರಾಂತಿ ಹಿನ್ನೆಲೆ ಎಳ್ಳು ಬೆಲ್ಲದ ಜೊತೆ ಶ್ರೀರಾಮನ ಮಂತ್ರಾಕ್ಷತೆ ಮನೆ ಮನೆಗೆ ಹಂಚಲಾಯಿತು.
ಗ್ರಾಪಂ ಸದಸ್ಯೆ ಭಾರತಿ ಮಂಜುನಾಥ್ ಮಾತನಾಡಿ, ಅಂದು ‘ಶ್ರೀರಾಮ ಜಯರಾಮ ಜಯ ಜಯರಾಮ’ ಎಂದು ವಿಜಯ ಮಹಾ ಮಂತ್ರವನ್ನು ಸಾಮೂಹಿಕವಾಗಿ 108 ಬಾರಿ ಜಪ ಮಾಡುವ ಮೂಲಕ ಎಲ್ಲರೂ ಈ ಸಂಭ್ರಮದಲ್ಲಿ ಭಾಗಿಯಾಗೋಣ.
ಪ್ರಾಣ ಪ್ರತಿಷ್ಠಾಪನೆಯ ದಿನದಂದು ಸಂಜೆ ಸೂರ್ಯಸ್ತವಾದ ಮೇಲೆ ತಮ್ಮ ತಮ್ಮ ಮನೆಗಳ ಮುಂದೆ ದೀಪಗಳನ್ನು ಬೆಳಗಿಸಿ ಜ್ಯೋತಿರ್ಮಯವಾಗಿಸೋಣ ಎಂದು ಕರೆ ನೀಡಿದರು.
ಈ ವೇಳೆ ಎಚ್.ಜಿ.ನಾಗರಾಜ್, ಹನುಮಂತಪ್ಪ, ಶಾಂತಯ್ಯ, ಸಿದ್ದೇಶ್, ಮಂಜುನಾಥ್, ಚಂದ್ರಯ್ಯ, ತಿಪ್ಪೇಶ್, ಶರಣಯ್ಯ, ಶಿವಕುಮಾರ್, ಮಹೇಶ್ವರಪ್ಪ, ಸೋಮಶೇಖರಪ್ಪ ಸೇರಿದಂತೆ ಅನೇಕರು ಮಂತ್ರಾಕ್ಷತೆಯನ್ನು ಮನೆ ಮನೆಗೆ ತಲುಪಿಸಿದರು.