ಜಗಳೂರು: ಮೊದಲ ಕೆಡಿಪಿ ಸಭೆಯಲ್ಲೇ ಅಧಿಕಾರಿಗಳಿಗೆ ಶಾಸಕ ದೇವೇಂದ್ರಪ್ಪ ಖಡಕ್ ವಾರ್ನಿಂಗ್!

Suddivijaya
Suddivijaya June 2, 2023
Updated 2023/06/02 at 12:41 PM

ಸುದ್ದಿವಿಜಯ, ಜಗಳೂರು: ‘ನಿಮ್ಮ ಮೇಲೆ ಸಾಕಷ್ಟು ದೂರುಗಳು ಬಂದಿವೆ. ರಾಜಕೀಯ ಮಾಡಬೇಕು ಎಂಬ ಉದ್ದೇಶ ನಿಮಗಿದ್ದರೆ ವೃತ್ತಿಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಸೇರಿಕೊಳ್ಳಿ. ಆರೋಗ್ಯ ಇಲಾಖೆ ರಾಜಕೀಯ ಮಾಡಲಿಕ್ಕೆ ಇಲ್ಲ. ಮದರ್ ತೆರೆಸಾ ರೀತಿ ನೀವು ಜನರ ಸೇವೆ ಮಾಡಬೇಕೇ ಹೊರತು ರಾಜಕೀಯ ಮಾಡಬಾರದು’ ಎಂದು ಶಾಸಕ ಬಿ.ದೇವೇಂದ್ರಪ್ಪ ಟಿಎಚ್‍ಒ ನಾಗರಾಜ್ ಅವರಿಗೆ ಎಚ್ಚರಿಕೆ ನೀಡಿದರು.

ನೂತನ ಶಾಸಕರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ತ್ರೈಮಾಸಿಕ ಕೆಡಿಪಿ ಸಭೆಯನ್ನು ಪಟ್ಟಣದ ತಾಪಂ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ಸಭೆ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಪ್ರತಿ ಇಲಾಖಾವಾರು ಅಧಿಕಾರಿಗಳ ಅಭಿವೃದ್ಧಿ ಮತ್ತು ಪ್ರಗತಿ ಬಗ್ಗೆ ವರದಿ ಕೇಳಿದರು.

ಆರೋಗ್ಯ ಇಲಾಖೆ ಟಿಎಚ್‍ಒ ನಾಗರಾಜ್ ವರದಿ ಮಂಡಿಸಿದ ನಂತರ ಶಾಸಕರು ಮಾತನಾಡಿ, ನೀವು ಎಷ್ಟು ವರ್ಷಗಳಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದೀರಿ. ನಿಮ್ಮ ಕಚೇರಿ ಸುತ್ತಮುತ್ತ ಜನ ಓಡಾಡುವಂತಿಲ್ಲ. ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ. ಶವಾಗಾರದ ಪಕ್ಕದಲ್ಲೇ ಇರುವ ಹಳೆಯ ಪಟ್ಟಣ ಪಂಚಾಯಿತಿ ಕಚೇರಿಯನ್ನು ಶಾಸಕರ ಜನ ಸಂಪರ್ಕ ಕಚೇರಿ ಮಾಡುತ್ತಿದ್ದೇವೆ.

ನೀವು ಗಮನಿಸಿದ್ದೀರಾರಾ ಎಂದು ಪ್ರಶ್ನಿಸಿದರು. ನೀವು ಸ್ವಚ್ಛ ಮಾಡಿಸದೇ ಇದ್ದರೆ ನಾನೇ ಪೊರಕೆ ಹಿಡಿದು ಸ್ವಚ್ಛಗೊಳಿಸುತ್ತೇನೆ. ನನಗೆ ಪೊರಕೆ ಹಿಡಿಯುವುದು ಹೊಸದೇನಲ್ಲ ಎಂದು ಎಚ್ಚರಿಕೆ ನೀಡಿದರು.

ಸಭೆ ಆರಂಭಕ್ಕೂ ಮೊದಲು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವೆಲ್ಲ ಕ್ಷೇತ್ರದ ಸರ್ವೋತೋಮುಖ ಅಭಿವೃದ್ಧಿ ಮಾಡೋಣ. ನಾವೆಲ್ಲಾ ಮೊದಲು ಮಾನವರು ನಂತರ ಅಧಿಕಾರ ಮತ್ತು ಅಧಿಕಾರಿಗಳು.

12 ನೇ ಶತಮಾನದ ಅನುಭವ ಮಂಟಪದಲ್ಲಿ ಎಲ್ಲ ವರ್ಗದ ಜಾತಿಯ ಶರಣರಿದ್ದರು. ಅಲ್ಲಿ ಸಾಮಾಜಿಕ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿತ್ತು. ಮಹಾಮನೆಯಲ್ಲಿ ಅನುಭವದಲ್ಲಿ ಅಮೃತತ್ವ ಇತ್ತು. ಅದೇ ರೀತಿ ನಿಮ್ಮನ್ನು ನಾನು ಶರಣ, ಶರಣೆಯರನ್ನಾಗಿ ನೋಡಲು ಬಯಸುತ್ತೇನೆ. ಕ್ಷೇತ್ರದ ಅಭಿವೃದ್ಧಿಯಾಗಬೇಕು ಎಂದರೆ ಸರ್ವರೂ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸೂಕ್ಷ್ಮವಾಗಿ ಎಲ್ಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

28 ಇಲಾಖೆಗಳ ಅಧಿಕಾರಿಗಳು ಮನಸ್ಸು ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ನಿಮ್ಮ ನಿಮ್ಮ ಕರ್ತವ್ಯವನ್ನು ಸಕಾಲಕ್ಕೆ ಸರಿಯಾಗಿ ಮಾಡಬೇಕು. ನಾನು ಪದೇ ಪದೇ ಹೇಳಲ್ಲ. ಸೋಮಾರಿತನ ಬಿಟ್ಟು ಕೆಲಸ ಮಾಡಿ. ಅರ್ಹ ಫಲಾನುಭವಿಗಳಿಗೆ ಸರಕಾರ ಸವಲತ್ತು ಮುಟ್ಟಿಸುವ ಕೆಲಸ ಮಾಡೋಣ.

ಮುಕ್ತವಾಗಿ ಕೆಲಸ ಮಾಡಲು ನಾನು ನಿಮ್ಮ ಬೆನ್ನೆಲುಭಾಗಿ ಇರುವೆ. ಎಲ್ಲಾ ರೀತಿ ಪ್ರೊತ್ಸಾಹ ನೀಡುತ್ತೇನೆ ಎಂದು ಅಧಿಕಾರಿಗಳಿಗೆ ಪ್ರೋತ್ಸಾಹ ನೀಡುವ ಜೊತೆ ಜೊತೆಗೆ ದೂರುಗಳು ಹೆಚ್ಚಿರುವ ಅಧಿಕಾರಿಗಳಿಗೆ ಮಾತಿನಲ್ಲೇ ಚಾಟಿ ಬೀಸುವ ಮೂಲಕ ಎಚ್ಚರಿಕೆ ನೀಡಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!