ಸುದ್ದಿವಿಜಯ, ಜಗಳೂರು: ರಂಗಯ್ಯನದುರ್ಗ ವನ್ಯಜೀವಿ ಅರಣ್ಯ ಪ್ರದೇಶ ವ್ಯಾಪ್ತಿಯ ಯರಲಕಟ್ಟೆ ಗ್ರಾಮದ ಹೊನ್ನೆಗೌಡ ಎಂಬುವರ ಜಮೀನಿನ ಬದುವಿನಲ್ಲಿ ಕೊಂಡುಕುರಿಯೊಂದು ಮೂರು ಮರಿಗಳಿಗೆ ಜನ್ಮನೀಡಿ ಮರಿಗಳನ್ನು ಬಿಟ್ಟು ಹೋಗಿದ್ದು ಮರಿಗಳು ಅನಾಥವಾಗಿವೆ.ಬೆಳಗಾವಿ ಜಿಲ್ಲೆಯಿಂದ ಕುರಿ ಮಂದೆಯ ಕುರಿಗಾಹಿಗಳು ಜಮೀನಿನಲ್ಲಿ ಮಂದೆ ಹೂಡಿದ್ದು ಗುರುವಾರ ಸಂಜೆ ಕೊಂಡುಕುರಿಗಳು ಅವರಿಗೆ ಸಿಕ್ಕಿವೆ. ತಕ್ಷಣ ಜಮೀನಿನ ಮಾಲೀಕರಾದ ಹೊನ್ನೇಗೌಡ ಮತ್ತು ನಾಗರಾಜ್ ಎಂಬುವರಿಗೆ ವಿಷಯ ತಿಳಿಸಿದ್ದಾರೆ.ಯರಲಕಟ್ಟೆ ಗ್ರಾಮದ ಹೊನ್ನೆಗೌಡ ಎಂಬುವರ ಜಮೀನಿನಲ್ಲಿ ಸಿಕ್ಕಿರುವ ಕೊಂಡುಕರಿ ಮರಿ
ಜಮೀನಿನ ಮಾಲೀಕರು ಫಾರೆಸ್ಟ್ ಸಿಬ್ಬಂದಿಗೆ ಶುಕ್ರವಾರ ವಿಷಯ ತಿಳಿಸಿದ್ದಾರೆ. ಆದರೂ ಯಾವೊಬ್ಬ ಸಿಬ್ಬಂದಿಯೂ ಸ್ಥಳಕ್ಕೆ ಬಂದು ಅವುಗಳನ್ನು ರಕ್ಷಣೆ ಮಾಡಿಲ್ಲ. ಮೂರು ಮರಿಗಳಲ್ಲಿ ಎರಡು ಮರಿಗಳು ಮೆಕ್ಕೆಜೋಳದ ಜಮೀನಿನಲ್ಲಿ ಕಾಣೆಯಾಗಿವೆ.ಸಿಕ್ಕಿರುವ ಒಂದು ಮರಿಯನ್ನು ಹೊನ್ನೆಗೌಡ ಮತ್ತು ನಾಗರಾಜ್ ಜೋಪಾನವಾಗಿ ರಕ್ಷಸಿದ್ದಾರೆ. ಕುರಿ ಮಂದಿಯಲ್ಲಿ ಇರುವ ಕುರಿ ಮತ್ತು ಮೇಕೆಗಳಿಂದ ಕೊಂಡುಕುರಿ ಮರಿಗೆ ಹಾಲುಣಿಸಿ ರಕ್ಷಿಸುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಅವರು ಬಾರದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಅರಣ್ಯ ಅಧಿಕಾರಿಗಳು ನಿರ್ಲಕ್ಷ್ಯ
ಕುರಿಗಾಹಿಗಳು ನೋಡಿದಾಗ ಮೂರು ಮರಿಗಳಿದ್ದವು ಎಂದು ಮಾಹಿತಿ ನೀಡಿದ್ದರು. ಆದರೆ ಅದರಲ್ಲಿ ಎರಡು ಮರಿಗಳು ಕಾಣೆಯಾಗಿವೆ. ಒಂದು ಮರಿಯಿದೆ. ಅದಕ್ಕೆ ಕುರಿಹಾಲು ಕುಡಿಸುತ್ತಿದ್ದೇವೆ. ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಬಂದಿಲ್ಲ ಎಂದು ಹೊನ್ನೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.