ಜಗಳೂರಿನಲ್ಲಿ ಬಿತ್ತನೆ ಬೀಜ ಮಾರಾಟ: ಅಮಾಯಕರ ಹೆಸರಿನಲ್ಲಿ ಕೋಟಿ ಕೋಟಿ ರೂ ವಂಚನೆ!

Suddivijaya
Suddivijaya June 5, 2024
Updated 2024/06/05 at 7:08 PM

suddivijayawebnews5/6/2024

ಸುದ್ದಿವಿಜಯ, ಜಗಳೂರು: ಪಟ್ಟಣದ ಮರೇನಹಳ್ಳಿ ರಸ್ತೆಯ ರೈತ ಆಗ್ರೋ ಕೇಂದ್ರದಲ್ಲಿ ಅಮಾಯಕರ ಹೆಸರಿನಲ್ಲಿ ಕೋಟಿ ಕೋಟಿ ರೂ ವಂಚನೆ ಬಹಿರಂಗವಾಗಿದೆ.

ಮರೇನಹಳ್ಳಿ ರಸ್ತೆಯಲ್ಲಿರುವ ರೈತ ಆಗ್ರೋ ಎಂಬ ಫರ್ಟಿಲೈಸರ್ಸ್ (ಬೀಜ, ರಸಗೊಬ್ಬರ ಮಾರಾಟ ಮಳಿಗೆ) ಶಾಪ್‍ನ ಮಾಲೀಕನೆ ಬೇರೆ, ನಡೆಸುತ್ತಿದ್ದ ವ್ಯಕ್ತಿಗಳೆ ಬೇರೆ.

ಕಳೆದ ಒಂಭತ್ತು ತಿಂಗಳ ಹಿಂದೆ ಹೈಟೆಕ್ ಮಾದರಿಯಲ್ಲಿ ಆರಂಭವಾದ ರೈತ ಆಗ್ರೋ (ಪರವಾನಿಗೆಯಲ್ಲೂ ಫೋರ್ಜರಿ)ಬಿತ್ತನೆ ಬೀಜಗಳ ಡೀಲರ್ಸ್‍ಗಳಿಗೆ ಪಂಗನಾಮ ಹಾಕಿದೆ.ಘಟನೆ ವಿವರ:

ಕುಮಾರ್‍ ಗೌಡ ಅಲಿಯಾಸ್ ವೀರೇಶ್‍ಗೌಡ ಎಂಬ ಮೋಸಗಾರ ಅಮಾಯಕ ವ್ಯಕ್ತಿಗಳ ಹೆಸರಿನಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟ ಲೈಸೆನ್ಸ್ ಪಡೆದು ಮೋಸ ಮಾಡಿ ಪರಾರಿಯಾಗಿದ್ದಾರೆ.

ಪಟ್ಟಣದಲ್ಲಿ ಕಲ್ಲೇಶ್ವರ ಲಾಡ್ಜ್ ಎದುರು ಇರುವ ಕಿಸಾನ್ ಆಗ್ರೋ ಮಳಿಗೆಯಲ್ಲಿ ಜಯ್ಯಪ್ಪ ಮತ್ತು ಮರೇನಹಳ್ಳಿ ರಸ್ತೆಯಲ್ಲಿರುವ ರೈತ ಆಗ್ರೋ ಕೇಂದ್ರವನ್ನು ಉದ್ದಗಟ್ಟ ಗ್ರಾಮದ ರುದ್ರೇಶ್ ಎಂಬ ವ್ಯಕ್ತಿಯ ಹೆಸರಿನಲ್ಲಿ ಪರವಾನಿಗೆ ಪಡೆದು, ಕಳೆದ ಎರಡು ವರ್ಷಗಳಿಂದ ಕುಮಾರ್ ಗೌಡ ಎಂಬ ಹೆಸರಿನ ವ್ಯಕ್ತಿ ವ್ಯವಹಾರ ನಡೆಸುತ್ತಿದ್ದ.

ಆದರೆ ಜಯಪ್ಪ ಮತ್ತು ಉದ್ದಗಟ್ಟ ಗ್ರಾಮದ ರುದ್ರೇಶ್ ಎಂಬ ಇಬ್ಬರು ವ್ಯಕ್ತಿಯ ಹೆಸರಿನಲ್ಲಿ ದಾವಣಗೆರೆಯ ವಿವಿಧ ಬೀಜದ ಡೀಲರ್ಸ್‍ಗಳಿಂದ ಮೊದ ಮೊದಲು ವಿಶ್ವಾಸ ಗಳಿಸಿಕೊಂಡು ಮುಂಗಡ ಹಣ ಹಾಕಿ ಬಿತ್ತನೆ ಬೀಗಳನ್ನು ತರಿಸಿಕೊಳ್ಳುತ್ತಿದ್ದ.ಇವರ ವ್ಯವಹಾರಗಳನ್ನು ನಂಬಿದ ಡಿಸ್ಟ್ರಿಬ್ಯೂಟ್‍ರ್ಸ್ ಗಳು ಆರಂಭದಲ್ಲಿ ಕೊಟ್ಟು ತೆಗೆದುಕೊಳ್ಳುವ ವ್ಯವಹಾರದಲ್ಲಿ ಬಾಂಧವ್ಯ ವೃದ್ಧಿಸಿಕೊಂಡರು.

ಬಿತ್ತನೆ ಬೀಜಗಳ ಲಾಟ್‍ಗಳನ್ನು ರುದ್ರೇಶ್ ಎಂಬ ಅಮಾಯಕ ವ್ಯಕ್ತಿಯ ಹೆಸರಿನಲ್ಲಿ ಆಮದು ಮಾಡಿಕೊಂಡು ಚಕ್ ಮೂಲಕ ವ್ಯವಹರಿಸಿದ ಕುಮಾರ್ ಗೌಡ ಎಂಬ ಹೆಸರಿನ ವ್ಯಕ್ತಿ ಕಳೆದ ಒಂದು ವಾರದಿಂದ ಉಂಡೆನಾಮೆ ಇಟ್ಟು ಪರಾರಿಯಾಗಿದ್ದಾನೆ.

ಕುಮಾರ್ ಗೌಡ ಎಂಬ ವ್ಯಕ್ತಿ ರಾಜ್ಯದ ನಾನಾ ಭಾಗಗಳಲ್ಲಿ ಇದೇ ರೀತಿ ಕೋಟಿ ಕೋಟಿ ಪಂಗನಾಮ ಹಾಕಿ ಜೂಟ್ ಆಗಿದ್ದಾನೆ ಎಂದು ತಿಳಿದು ಬಂದಿದೆ.

ಅಮಾಯಕರಾದ ರುದ್ರೇಶ್ ಎಂಬ ವ್ಯಕ್ತಿಯನ್ನು ರೈತ ಆಗ್ರೋದಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸಕ್ಕೆ ಇರಿಸಿಕೊಂಡು (ಸಹಾಯಕರಾಗಿ) ಅದೇ ವ್ಯಕ್ತಿಯ ಆಧಾರ್ ಕಾರ್ಡ್ ಪಡೆದು ಜಿಎಸ್‍ಟಿ ನಂಬರ್ ಪಡೆದು, ಚಕ್ ಲೀವ್ಸ್ ಗಳಿಗೆ (ಖಾಲಿ ಚಕ್‍ಬುಕ್‍ಗಳಿಗೆ)ಸಹಿ ಮಾಡಿಸಿಕೊಂಡು ಮೆಕ್ಕೆಜೋಳ, ತೊಗರಿ, ಅವರೆ, ಕುಂಬಳ, ಈರುಳ್ಳಿ ಸೇರಿದಂತೆ

ರೈತರು ಬಿತ್ತನೆ ಮಾಡುವ ಎಲ್ಲ ಬೀಜಗಳ ಡೀಲರ್ಸ್‍ಗಳಿಂದ ಒಮ್ಮೆಲೆ ಕೋಟಿ ಕೋಟಿ ವ್ಯವಹಾರವನ್ನು ರುದ್ರೇಶ್ ಹೆಸರಿನಲ್ಲಿ ಚಕ್‍ಮೂಲಕ ವ್ಯವಹರಿಸಿ ಕೋಟಿ ಕೋಟಿ ರೂಪಾಯಿಗಳನ್ನು ನುಂಗಿ ಪರಾರಿಯಾಗಿದ್ದಾನೆ.

ಬುಧವಾರ ಬಿತ್ತನೆ ಬೀಜಗಳನ್ನು ಮಾರಾಟ ಮಾಡಲು ಸಾಲಕೊಟ್ಟಿದ್ದ ರಾಜ್ಯದಾದ್ಯಂತ ಇರುವ ಡೀಲರ್ಸ್‍ ಗಳು ಅಮಾಯಕ ರುದ್ರೇಶ್ ಎಂಬ ವ್ಯಕ್ತಿಯ ವಿರುದ್ಧ ಜಗಳೂರು ಪಟ್ಟಣದಲ್ಲಿ ದೂರು ನೀಡಿದ್ದಾರೆ.

ಹೀಗಾಗಿ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ಎಸ್.ಡಿ.ಸಾಗರ್ ನೇತೃತ್ವದಲ್ಲಿ ಪೊಲೀಸರು ರೈತ ಆಗ್ರೋ ಮುಟ್ಟುಗೋಲು ಹಾಕಿಕೊಂಡು ಸಾಲ ಕೊಟ್ಟ ಡೀಲರ್ಸ್‍ಗಳಿಗೆ ಇದ್ದ ಬದ್ದ ಬಿತ್ತನೆ ಬೀಜಗಳನ್ನು ಅರ್ಧದಷ್ಟು ವಾಪಾಸ್ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರು.

ಇನ್‍ಸ್ಪೆಕ್ಟರ್ ಡಿ.ಶ್ರೀನಿವಾಸ್‍ರಾವ್ ಮಾರ್ಗದರ್ಶನದಂತೆ ವಿಡಿಯೋ ಶೂಟ್ ಮಾಡಿಸಿ ಸಂಬಂಧ ಪಟ್ಟ ಡೀಲರ್ಸ್‍ ಗಳಿಗೆ ಇನ್ ವಾಯ್ಸ್  ಲೀಸ್ಟ್ ಮತ್ತು ದಾಖಲೆಗಳ ಅನುಸಾರ ಪಿಎಸ್‍ಐ ಡಿ.ಎಸ್.ಸಾಗರ್ ಮತ್ತು ಪೊಲೀಸರು ಬುಧವಾರ ತಡರಾತ್ರಿಯವರೆಗೂ ಬಿತ್ತನೆ ಬೀಜದ ಮಾಲನ್ನು ಡಿಸ್ಟ್ರಿಬ್ಯೂಟರ್ಸ್ ಗಳಿಗೆ ಹಿಂದುರಿಗಿಸಿದರು.

ಆದರೆ ಕುಮಾರ್ ಗೌಡ ಅಲಿಯಾಸ್ ವೀರೇಶ್ ಗೌಡ ಎಂದು ಹೀಗೆ ರಾಜ್ಯದ ಅನೇಕ ಕಡೆ ಮತ್ತು ಆಂಧ್ರಪ್ರದೇಶ ಸೇರಿದಂತೆ ಅನೇಕ ಕಡೆ, ವಿವಿಧ ಹೆಸರುಗಳಿಂದ ವಂಚನೆ ಮಾಡಿದ್ದಾನೆ ಎಂಬ ಸತ್ಯ ಹೊರ ಬರುತ್ತಿದೆ.

ಆದರೆ ತಾಲೂಕಿನ ಉದ್ದಗಟ್ಟ ಗ್ರಾಮದ ರುದ್ರೇಶ್ ಎಂಬ ಬಡ ವ್ಯಕ್ತಿ ಕುಮಾರ್ ಗೌಡ ಬಲೆಗೆ ಬಿದ್ದಿರುವುದು ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಕುಮಾರ್ ಗೌಡ ಎಂಬ ಹೆಸರಿನಲ್ಲಿ ಮೋಸ ಮಾಡಿ ಪರಾರಿಯಾಗಿದ್ದು ಅಮಾಯಕರು ಅವನ ಟ್ರಾಪ್‍ನಲ್ಲಿ ಸಿಕ್ಕಿಬಿದ್ದಿರುವುದು ಮಾತ್ರ ವಿಪರ್ಯಾಸ.

‘ಮೋಸ ಮಾಡುವವರು ಇರೋ ವರೆಗೂ ಮೋಸ ಹೋಗುವವರು ಇರುತ್ತಾರೆ’ ಎನ್ನುವ ಪೊಲೀಸ್ ಕ್ರೈಂ ಟ್ಯಾಗ್‍ಲೈನ್ ಶಾಶ್ವತ.

ಕಡೇಯದಾಗಿ ಸುದ್ದಿವಿಜಯದ ಕಳಕಳಿ ಇಷ್ಟೇ. ಮೋಸ ಹೋದ ವ್ಯಕ್ತಿಗಳಿಗೆ ಶಿಕ್ಷೆಯಾಗಬಾರದು. ಅಮಾಯಕರಾದ ರುದ್ರೇಶ್, ಜಯ್ಯಪ್ಪ ಎಂಬ ವ್ಯಕ್ತಿಗಳಿಗೆ ಶಿಕ್ಷೆಯಾಗಬಾರದು.

ಮೋಸ ಮಾಡಿ ಪರಾರಿಯಾದ ಕುಮಾರ್ ಗೌಡ ಅಲಿಯಾಸ್ ವೀರೇಶ್ ಗೌಡ ಎಂಬ ವಿವಿಧ ಹೆಸರುಗಳಿಂದ ವಂಚಿನೆ ಮಾಡಿದ ವ್ಯಕ್ತಿಯನ್ನು ಬಂಧಿಸಿ ಶಿಕ್ಷೆಯಾಗಬೇಕಷ್ಟೆ.

ಮೂರು ತಿಂಗಳ ಹಿಂದೆ ಕೃಷಿ ಜಾರಿದಳ ದಾಳಿ

ಕಳೆದ ಮೂರು ತಿಂಗಳ ಕೃಷಿ ಇಲಾಖೆ ಜಾರಿದಳದ ಅಧಿಕಾರಿಗಳಾದ ಜನಾರ್ಧನ್ ಮತ್ತು ಬಿ.ವಿ.ಶ್ರೀನಿವಾಸುಲು ಮತ್ತು ಎಡಿಎ ಮಿಥುನ್ ಕಿಮಾವತ್ ನೇತೃತ್ವದಲ್ಲಿ ಕಿಸಾನ್ ಆಗ್ರೋ ಮಳಿಗೆ ಮೇಲೆ ದಾಳಿ ಮಾಡಿ ಪರವಾನಿಗೆ ಇಲ್ಲದ ಕೀಟನಾಶಕ ಮತ್ತು ರಸಗೊಬ್ಬರಗಳನ್ನು ವಶಕ್ಕೆ ಪಡೆದಿದ್ದರು.

ಮಾಲೀಕರಾದ ಜಯ್ಯಪ್ಪ ಎಂಬುವರ ಮೇಲೆ ಕೇಸ್ ದಾಖಲಿಸಿಕೊಂಡಿದ್ದರು. ಆದರೆ ಇದರ ಎಲ್ಲ ಮೂಲ ಸೂತ್ರಧಾರಿ ಮಾತ್ರ ಕುಮಾರ್ ಗೌಡ ಅಲಿಯಾಸ್ ವೀರೇಶ್‍ಗೌಡ. ಈ ಎಲ್ಲ ಸತ್ಯ ಸಂಬಂಧಪಟ್ಟ ಅಧಿಕಾರಿಗಳಿಗೆ ಗೊತ್ತಿರಲಿಲ್ಲವೇ. ಗೊತ್ತಿದ್ದರೂ ಕ್ರಮ ಕೈಗೊಂಡಿಲ್ಲ ಏಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!