ಸುದ್ದಿವಿಜಯ,ಜಗಳೂರು: ಮನೆ ಹೊರಗಿನ ಕಳ್ಳರನ್ನು ಹಿಡಿಯಬಹುದು ಆದರೆ ಮನೆಯೊಳಗಿನ ಕಳ್ಳರನ್ನು ಹಿಡಿಯುವುದು ಕಷ್ಟ. ಅವರು ಮಾಡಿರುವ ಪಕ್ಷ ದ್ರೋಹಿ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂದು ಶಾಸಕ ದೇವೇಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಅರಸಿಕೆರೆಯ ಕೋಲಶಾಂತೇಶ್ವರ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೆ ಟಿಕೆಟ್ ಸಿಕ್ಕಾಗ ಸಿದ್ದರಾಮಯ್ಯ, ಡಿಕೆಶಿ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಅವರು ನನಗೆ ಫೋನ್ ಮಾಡಿ ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ಮನೆಗೆ ಹೋಗಿ ಮಾತನಾಡಿ ಎಂದರು.
ನಾನು ಸಹ ಅವರ ಮನೆಗೆ ಭೇಟಿ ನೀಡಿ ಮಾತನಾಡಿದೆ. ಆದರೆ ಅವರ ಹಿಂದೆ ಇದ್ದವರು ಅವರನ್ನು ಪುಟಿದೇಳಿಸಿ ಅವರ ಮನೆ ಹಾಳುಮಾಡಿದರು ಎಂದು ಮಾರ್ಮಿಕವಾಗಿ ನುಡಿದರು.
ಪಕ್ಷದಲ್ಲೇ ಇದ್ದುಕೊಂಡು ಬೇರೊಬ್ಬ ಅಭ್ಯರ್ಥಿಗೆ ಬೆನ್ನೆಲುಬಾಗಿ ನಿಲ್ಲುವ ಕಾಂಗ್ರೆಸ್ ಕಾರ್ಯಕರ್ತರ ವರ್ತನೆ ಸಹಿಸುವುದಿಲ್ಲ. ನನಗೆ ರಾಜೇಶ್ ಅವರು ಸಂಬಂಧದಲ್ಲಿ ಅಳಿಯ. ಅವರಿಗೆ ನಾನು ಎರಡು ಬಾರಿ ವೋಟ್ ಹಾಕಿದ್ದೇನೆ. ಅವರಿಗೆ ಹೀಗಾಗ ಬಾರದಾಗಿತ್ತು. ನನಗೆ ನೋವಾಗುತ್ತಿದೆ ಎಂದು ಹೇಳಿದರು.