ಕೆಎಸ್ಆರ್ ಟಿಸಿ ಸೇವೆಗೆ ಆಗ್ರಹಿಸಿ ರೈತ ಸಂಘದಿಂದ ಪತಿಭಟನೆ

Suddivijaya
Suddivijaya July 3, 2023
Updated 2023/07/03 at 12:23 PM

ಸುದ್ದಿವಿಜಯ,ಜಗಳೂರು:ವಿವಿಧ ಗ್ರಾಮಗಳಿಗೆ ತಾಲೂಕು ಕೇಂದ್ರದಿಂದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಕಲ್ಪಿಸುವಂತೆ ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಿದರು.

ಇಲ್ಲಿನ ಪ್ರವಾಸಿ ಮಂದಿರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯೂ ಹಳೆ ಮಹಾತ್ಮಗಾಂಧಿ ವೃತ್ತ, ಡಾ. ರಾಜ್‌ಕುಮಾರ್ ರಸ್ತೆ, ಹೊಸ ಬಸ್ ನಿಲ್ದಾಣ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಸಂತೋಷ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಜಗಳೂರು 178 ಹಳ್ಳಿಗಳನ್ನು ಹೊಂದಿರುವ ತಾಲೂಕಾಗಿದೆ. ಆದರೆ ಸ್ವಾತಂತ್ರ‍್ಯ ಪಡೆದು ಏಳು ದಶಕಗಳನ್ನು ಕಳೆದರು ಬಹುತೇಕ ಗ್ರಾಮೀಣ ಪ್ರದೇಶಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸದೇ ಇರುವುದು ದುರಂತವಾಗಿದೆ.

ಪ್ರತಿ ನಿತ್ಯ ಶಾಲಾ, ಕಾಲೇಜು, ಆಸ್ಪತ್ರೆ, ಸರ್ಕಾರಿ ಕೆಲಸ, ಕೂಲಿ ಕೆಲಸ ಹೀಗೆ ವಿವಿಧ ಕಾರಣಗಳಿಂದಲೂ ಹಳ್ಳಿಗಳಿಂದ ಜಗಳೂರು ಪಟ್ಟಣಕ್ಕೆ ಸಾವಿರಾರು ಜನರು ಓಡಾಡುತ್ತಾರೆ.

ಆದರೆ ಸಾರಿಗೆ ವ್ಯವಸ್ಥೆ ಇಲ್ಲದೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಣಬೂರು,ಬಿದರಕೆರೆ, ಕೊಟ್ಟೂರು, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಕೆಲವೇ ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರವಿದೆ.

ಉಳಿದ ಗ್ರಾಮಗಳ ಜನರಿಗೆ ಬೈಕ್,ಟ್ರ‍್ಯಾಕ್ಟರ್, ಆಟೋಗಳೇ ಗತಿಯಾಗಿದೆ.   ಅದ್ದರಿಂದ ಪ್ರತಿ ಹಳ್ಳಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರೈತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಂ ಹೊಳೆ ಚಿರಂಜೀವಿ ಮಾತನಾಡಿ, ಗ್ರಾಮಗಳ ಅಭಿವೃದ್ದಿಯೇ ದೇಶದ ಅಭಿವೃದ್ದಿ ಎನ್ನುವ ಸರ್ಕಾರಗಳು ಆಧುನಿಕ, ವೈಜ್ಞಾನಿಕ ಕಾಲಘಟ್ಟದಲ್ಲಿದ್ದೂ ಕನಿಷ್ಠ ಸೌಲಭ್ಯಗಳಾದ ಸಾರಿಗೆ, ರಸ್ತೆ ವ್ಯವಸ್ಥೆ ಒದಗಿಸಲು ಸಾಧ್ಯವಾಗುತ್ತಿಲ್ಲ.

ಹಳ್ಳಿಗಳಲ್ಲಿ ಆಟೋಗಳೇ ಗತಿಯಾಗಿದೆ. ಶಾಲಾ ಅವದಿಯಲ್ಲಿ ಆಟೋ ತುಂಬ ಜನರನ್ನು ಹೊತ್ತು ಸಾಗುತ್ತವೆ. ಏನಾದರೂ ಅವಘಡವಾದರೇ ಸಾವು- ನೋವು ಸಂಭವಿಸುತ್ತವೆ ಇಂತಹ ಅನೇಕ ಘಟನೆಗಳು ನಡೆದರೂ ಕೂಡ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ ಎಂದು ಆಪಾಧಿಸಿದರು.

ಸಂಘದ ತಾಲೂಕುಗೌರವಾಧ್ಯಕ್ಷ ದಿಬ್ಬದಹಳ್ಳಿ ಗಂಗಾಧರಪ್ಪ ಮಾತನಾಡಿ, ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಕಾಣದೆ 2ಕೀ.ಮೀ ದೂರದ  ದುರ್ಗಮ ರಸ್ತೆಯಲ್ಲಿ ಕಾಲ್ನಡಿಗೆಯಿಂದ ಆಗಮಿಸಿ ಬಸ್ ಗಳಲ್ಲಿ ಸಂಚರಿಸುವ ಅನಿವಾರ್ಯತೆ ಎದುರಾಗಿದೆ.

ಇದರಿಂದ ಕಾಲೇಜು ವಿದ್ಯಾರ್ಥಿಗಳು,ವಯೋವೃದ್ದರು,ಮಹಿಳೆಯರು ಬಳಲಿ ಬಸವಳಿದು ಹೋಗಿದ್ದಾರೆ.ಈ ಬಗ್ಗೆ ಸರ್ಕಾರಕ್ಕೆ  ಹಲವು ಬಾರಿ ಮನವಿ ಮಾಡಿದರೂ ಇತ್ತ ಕಡೆ ಗಮನಹರಿಸಿಲ್ಲ ಎಂದು ದೂರಿದರು.

ತಾಲೂಕಿನ ಕಣ್ವಕುಪ್ಪೆ, ಕೆಳಗೋಟೆ, ಚಿಕ್ಕಬನ್ನಿಹಟ್ಟಿ ಗ್ರಾಮಗಳು ಕೊಂಡಕುರಿ  ಅರಣ್ಯ ಪ್ರದೇಶದ ಅಂಚಿನಲ್ಲಿದ್ದು ಸಾರಿಗೆ ವ್ಯವಸ್ಥೆಯಿಲ್ಲ ಮತ್ತೊಂದೆಡೆ ಕಾಲ್ನಡಿಗೆ ಮೂಲಕ ಸಂಚರಿಸಲು ಕರಡಿ,ಇತರೆ ಕಾಡು ಪ್ರಾಣಿಗಳ ಹಾವಳಿಯಿಂದ  ಭಯದ ವಾತಾವರಣದಲ್ಲಿ ಜನರು ಸಂಚರಿಸಬೇಕಿದೆ.

ಕೂಡಲೇ ತಾಲೂಕಿನಲ್ಲಿ ಅಗತ್ಯವಿರುವ ಪ್ರತಿ ಹಳ್ಳಿಗಳಿಗೆ ಗ್ರಾಮೀಣ ಸಾರಿಗೆ ವ್ಯವಸ್ಥೆ ಕಲ್ಪಿಸದಿದ್ದರೆ ಉಗ್ರ ಸ್ವರೂಪದ ಹೊರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡ ಸತೀಶ್ ಗೌಡ ಗೊಂಡನಹಳ್ಳಿ, ತಾಲೂಕು ಪ್ರಧಾನ ಕಾರ್ಯದರ್ಶಿ ರಾಜನಹಟ್ಟಿ ರಾಜು,ಕಸಬಾ ಹೋಬಳಿ ಅಧ್ಯಕ್ಷ ಶರಣಪ್ಪ,ಮುಖಂಡರಾದ ನಾಗರಾಜ್,ಅಂಜಿನಪ್ಪ,ಪಾಪಣ್ಣ,ಮಂಜಣ್ಣ,ಪ್ರಹ್ಲಾದಪ್ಪ,ರಂಗಪ್ಪ ಸೇರಿದಂತೆ ಭಾಗವಹಿಸಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!