ಸುದ್ದಿವಿಜಯ, ಜಗಳೂರು: ಅನೇಕ ವರ್ಷಗಳಿಂದಲೂ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿರುವ ನಮಗೆಲ್ಲಾ ನಿವೇಶನ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಒತ್ತಾಯಿಸಿಶುಕ್ರವಾರ ತಾಲೂಕು ಹಮಾಲರ ಸಂಘದ ಪದಾಧಿಕಾರಿಗಳು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಎಪಿಎಂಸಿಯಲ್ಲಿ ಸುಮಾರು 20 ವರ್ಷಗಳಿಂದಲೂ ಹಮಾಲರಾಗಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರು ಬಡವರಾಗಿದ್ದೇವೆ. ಅಂದಿನ ದುಡಿಮೆಯಿಂದ ಕುಟುಂಬ ನಡೆಸಬೇಕು. ಒಂದು ದಿನ ಕೆಲಸವಿಲ್ಲದಿದ್ದರೇ ಜೀವನ ಹೇಗೆ ನಡೆಸುವುದು ಎಂಬ ಚಿಂತೆಯಾಗುತ್ತದೆ. ಆದ್ದರಿಂದ ಬಡ ಹಮಾಲರ ಬದುಕಿಗೆ ಸೂರು ನೀಡುವಂತೆ ಹಮಾಲರ ಸಂಘದ ಅಧ್ಯಕ್ಷ ಭೀಮಣ್ಣ ಮನವಿ ಮಾಡಿದರು.
ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಂದ ಬರುವುದರಿಂದ ಬಸ್ ಜಾರ್ಜ್, ಊಟ, ಟೀ ಹೀಗೆ ನಿತ್ಯ ನೂರಾರು ರೂಗಳು ಖರ್ಚಾಗುತ್ತದೆ. ಸಂಜೆ ಊರಿಗೆ ಹೋಗಲು ಬಸ್‍ಗಳಿಲ್ಲದಿದ್ದರೆ ಆಟೋದವರು ನಾಲ್ಕೈದು ನೂರು ಬಾಡಿಗೆ ಕೇಳುತ್ತಾರೆ.
ದುಡಿಯುವ ಐದಾರು ನೂರು ರೂಗಳಲ್ಲಿ ಇಷ್ಟು ಬಾಡಿಗೆ ಕೊಟ್ಟು ಹೋಗಲು ಸಾಧ್ಯವಾಗುತ್ತಿಲ್ಲ. ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿದರೆ ತಿಂಗಳಿಗೆ ಐದಾರು ಸಾವಿರ ಕೇಳುತ್ತಾರೆ. ಮಕ್ಕಳಿಗೆ ಶಾಲಾ, ಕಾಲೇಜು ಶುಲ್ಕ, ಆಸ್ಪತ್ರೆ ಹೀಗೆ ತಿಂಗಳಿಗೆ ಸಾವಿರಾರು ರೂಪಾಯಿಗಳು ಬೇಕಾಗುತ್ತದೆ.
ಹಮಾಲಿ ಕೆಲಸದಲ್ಲಿ ಇಷ್ಟು ಹಣವನ್ನು ಹೊಂದಿಸಲು ತುಂಬ ಕಷ್ಟವಾಗುತ್ತಿದೆ. ಈ ಸಮಸ್ಯೆ ಬಗ್ಗೆ ಹಿಂದಿನ ಶಾಸಕರ ಗಮನಕ್ಕೂ ತರಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ, ನೀವಾದರೂ ನಮಗೆ ಸಹಾಯ ಮಾಡಿ ಎಂದರು.
ಮನವಿ ಸ್ವೀಕರಿಸಿ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಮಾತನಾಡಿ, ಹೊಸದಾಗಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ತಾಲೂಕಿನಲ್ಲಿ ಎಷ್ಟು ಜನ ಹಮಾಲರಿದ್ದಾರೆ. ಅವರಿಗೆ ಏನೇನು ಸೌಲಭ್ಯಗಳ ಬೇಕು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ತಮಗೆ ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ನಿವೇಶನದ ಬಗ್ಗೆ ಸಭೆ ಕರೆದು ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಂಡು ನ್ಯಾಯ ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಮಾಲರ ಸಂಘದ ಉಪಾಧ್ಯಕ್ಷ ಕೇಶವಣ್ಣ, ಪದಾಧಿಕಾರಿಗಳಾದ ಜಯ್ಯಪ್ಪ, ವೆಂಕಟೇಶ್, ಮಹೇಶ್, ಕೋಟೇಶ್ ಪರಶುರಾಮ, ತಿಪ್ಪೇಸ್ವಾಮಿ, ನೀಲಪ್ಪ, ಬಸವರಾಜ್, ತಿಪ್ಪೇಶಿ, ಮಂಜಪ್ಪ, ತಿಮ್ಮಪ್ಪ, ಪಾಲಪ್ಪ, ಗೋಣಪ್ಪ, ರುದ್ರಪ್ಪ, ಮಂಜುನಾಥ್ ಸೇರಿದಂತೆ ಮತ್ತಿತರಿದ್ದರು.